ಬದುಕಿದ್ದಾಗಲೇ ಬರ್ತಿವೆ ಡೆತ್​ ಸರ್ಟಿಫಿಕೇಟ್​: ಹಾವೇರಿಯಲ್ಲೇ ಇನ್ನೊಂದು ಎಡವಟ್ಟು- ಸರ್ಕಾರದ ಸೌಲಭ್ಯಗಳು ಕಟ್​

Published : Jun 18, 2026, 11:30 AM IST
Death Certificate

ಸಾರಾಂಶ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ, ತಾಯಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ವೃದ್ಧೆಗೆ, ಆಕೆಯ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ಈ ಆಡಳಿತಾತ್ಮಕ ಎಡವಟ್ಟಿನಿಂದಾಗಿ, ಶಿವಗಂಗವ್ವ ಎಂಬ ಮಹಿಳೆ ತನ್ನೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾವೇರಿ: ಹಾವೇರಿ ಜಿಲ್ಲಾಡಳಿತದಿಂದಲೇ ಈಗ ಮತ್ತೊಂದು ಎಡವಟ್ಟಾಗಿದ್ದು, ವೃದ್ಧ ಮಹಿಳೆಯೊಬ್ಬರು ನರಳುವಂತಾಗಿರುವ ಘಟನೆ ವರದಿಯಾಗಿದೆ. ಕೆಲ ತಿಂಗಳ ಹಿಂದೆ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಸಿಬ್ಬಂದಿಯೊಬ್ಬರು ಮಾಡಿದ್ದ ಎಡವಟ್ಟಿನಿಂದ ಕುಟುಂಬವನ್ನು ನರಳುವಂತಾಗಿತ್ತು. ಪತ್ನಿ ಸಾವನ್ನಪ್ಪಿದ ನಂತರ ಆಕೆಯ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಪತಿಗೆ, ಅವರೇ ಸತ್ತ ಸರ್ಟಿಫಿಕೇಟ್​ ನೀಡಲಾಗಿತ್ತು. ಪತ್ನಿ ಸತ್ತಿದ್ದರೆ, ಬದುಕಿದ್ದ ಪತಿಯ ಹೆಸರಿನಲ್ಲಿ ಸರ್ಟಿಫಿಕೇಟ್​ ಕೊಟ್ಟು ಅವರು ಅದನ್ನು ಸರಿಪಡಿಸಲು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಿತ್ತು.

ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ತೋಪನಗೌಡ ಗುಬ್ಬಿ ಎಂಬುವವರ ಪತ್ನಿ ಮಲ್ಲಮ್ಮ ಅವರು ಕಳೆದ 12-08-2021 ರಂದು ಮೃತಪಟ್ಟಿದ್ದರು. ಪತ್ನಿಯ ಮರಣದ ನಂತರ ಸರ್ಕಾರಿ ದಾಖಲೆಗಳಿಗಾಗಿ ತೋಪನಗೌಡರು ಪತ್ನಿಯ ಡೆತ್ ಸರ್ಟಿಫಿಕೇಟ್ ಕೇಳಿ ಅರ್ಜಿ ಸಲ್ಲಿಸಿದ್ದರು. ಆದರೆ ಮಲ್ಲಮ್ಮನ ಹೆಸರಿಗೆ ಬದಲು ಜೀವಂತ ಇರುವ ಪತಿ ಅಂದರೆ ಅರ್ಜಿ ಸಲ್ಲಿಸಿದ ತೋಪನಗೌಡರ ಹೆಸರಲ್ಲೇ ಮರಣ ಪ್ರಮಾಣ ಪತ್ರವನ್ನು ಪ್ರಿಂಟ್ ಮಾಡಿ ಕೈಗಿಟ್ಟಿದ್ದರು. ಈ ಎಡವಟ್ಟು ನಡೆದು ಐದು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.

ಮತ್ತೊಂದು ಘಟನೆ

ಆದರೆ, ಇದೀಗ ಮಹಿಳೆಯೊಬ್ಬರಿಗೆ ಇದೇ ಸ್ಥಿತಿ ಆಗಿರುವ ಕಾರಣ, ಸರ್ಕಾರಿ ಸೌಲಭ್ಯಗಳೆಲ್ಲಾ ಕಟ್​ ಆಗಿ ಈಗ ಮಹಿಳೆ ನರಳುವಂತಾಗಿದೆ. ಅಮ್ಮ ಸತ್ತಿದ್ದರೆ ಮಗಳ ಹೆಸರಿನ ಮರಣ ಪ್ರಮಾಣ ಪತ್ರ ಬಂದಿರುವ ಕಾರಣ, ಆಕೆಗೆ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಕಟ್​ ಮಾಡಲಾಗಿದೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬ ಮಹಿಳೆಯ ತಾಯಿ ಶಂಕ್ರವ್ವ ಮೀಳ್ಳಿ ಇತ್ತೀಚೆಗೆ ನಿಧನರಾಗಿದ್ದರು. ತಾಯಿ ಮೃತಪಟ್ಟಿರುವ ಕಾರಣ ಡೆತ್​ ಸರ್ಟಿಫಿಕೇಟ್​ಗೆ ವೃದ್ಧೆಯಾಗಿರುವ ಮಗಳು ಶಿವಗಂಗವ್ವ ಅರ್ಜಿ ಸಲ್ಲಿಸಿದ್ದರು. ಆದರೆ, ಶಿಗ್ಗಾಂವಿ ತಾಲೂಕಾಡಳಿತ ಮತ್ತು ಅತ್ತಿಗೇರಿ ಗ್ರಾಮದ ಅಧಿಕಾರಿಗಳ ಎಡವಟ್ಟಿನಿಂದ ಜೀವಂತವಾಗಿರುವ ಮಗಳು ಶಿವಗಂಗವ್ವಳ ಹೆಸರಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ಇದು ಶಿವಗಂಗವ್ವ ಅವರಿಗೆ ತಿಳಿದೇ ಇರಲಿಲ್ಲ. ಬ್ಯಾಂಕಿನಲ್ಲಿ ಹಣ ತೆಗೆಯಲು ಹೋದಾಗ ವಿಷಯ ತಿಳಿದಿದೆ. ಆ ಬಳಿಕ ನೋಡಿದ್ರೆ ಅದು ತಾವೇ ಸತ್ತು ಹೋಗಿರುವ ಸರ್ಟಿಫಿಕೇಟ್​ ಎಂದು ತಿಳಿದಿದೆ.

ಸರ್ಕಾರಿ ಸೌಲಭ್ಯಗಳಿಂದ ವಂಚಿತ

ಶಿವಗಂಗವ್ವ ಸದ್ಯ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಷ್ಟೇ ಅಲ್ಲದೆ, ಅವರಿಗೆ ಬರುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ಗಂಡನ ಪೀಚಣಿ ಹಣವೂ ಸಹ ರದ್ದಾಗಿದೆ. ರೇಷನ್ ಮತ್ತು ಹಣ ಯಾವುದೂ ಇಲ್ಲವಾಗಿದೆ. ಇದನ್ನು ಶಿವಗಂಗವ್ವ ಮತ್ತು ಕುಟುಂಬಸ್ಥರು ತಕ್ಷಣವೇ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗುತ್ತಿದೆ. ಅತ್ತಿಗೇರಿ ಗ್ರಾಮಸ್ಥರು ಹಾಗೂ ವೃದ್ಧೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

 

 

PREV
Read more Articles on
click me!

Recommended Stories

ಉಡುಪಿ-ಮಣಿಪಾಲದ ಭೂತ ಬಂಗಲೆ ರಹಸ್ಯ.. ಒಂದೇ ರಾತ್ರಿ ಕುಟುಂಬ ನಾಪತ್ತೆ?
ಕಲಬುರಗಿ: ನಿವೃತ್ತ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ. ಬ್ಯಾಂಕ್ ಲಾಕರ್‌ನಲ್ಲಿ ₹9 ಲಕ್ಷ ಹಳೆಯ ನೋಟು, 20 ತೊಲೆ ಚಿನ್ನ ಪತ್ತೆ!