'ಬಳ್ಳಾರಿಗೆ ಶ್ರೀರಾಮುಲು ಬಿಟ್ಟು ಬೇರೆಯವರು ಜಿಲ್ಲಾ ಉಸ್ತುವಾರಿ ಆದ್ರೆ ನಾನು ಒಪ್ಪೋದಿಲ್ಲ'

By Kannadaprabha News  |  First Published Feb 24, 2021, 1:45 PM IST

ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಮಂತ್ರಿಯಾದರೆ ಒಪ್ಪುತ್ತೇನೆ| ಶಾಸಕ ಜಿ. ಸೋಮಶೇಖರ ರೆಡ್ಡಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ ಆನಂದ ಸಿಂಗ್‌| ನಾನು ಅಥವಾ ಶ್ರೀರಾಮುಲು ಬಿಟ್ಟರೆ ಬೇರೆಯವರಿಗೆ ಈ ಜಿಲ್ಲೆ ಬಗ್ಗೆ ನಾಲೇಜ್‌ ಇರೋದಿಲ್ಲ. ಹೀಗಾಗಿ ನಾವಿಬ್ಬರಲ್ಲಿ ಯಾರಾದರೂ ನನ್ನ ಅಭ್ಯಂತರವಿಲ್ಲ: ಸಿಂಗ್‌| 
 


ಬಳ್ಳಾರಿ(ಫೆ.24): ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾದರೆ ನಾನು ಸ್ವಾಗತ ಮಾಡುವೆ. ಒಂದು ವೇಳೆ ಬೇರೆಯವರು ಬಂದರೆ ನಾನು ಒಪ್ಪೋದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶ್ರೀರಾಮುಲು ಜಿಲ್ಲಾ ಉಸ್ತುವಾರಿಯಾಗಬೇಕು ಎಂದು ಹೇಳಿಕೆ ನೀಡಿದ್ದ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು. ಬಳ್ಳಾರಿ ಜಿಲ್ಲೆಗೆ ಶ್ರೀರಾಮುಲು ಮಂತ್ರಿಯಾಗಿರಬೇಕು. ಇಲ್ಲವೇ ನಾನೇ ಮಂತ್ರಿಯಾಗಿ ಮುಂದುವರಿಯಬೇಕು. ಬೇರೆಯವರು ಮಂತ್ರಿಯಾಗಲು ನಾನು ಒಪ್ಪಲು ಸಾಧ್ಯವೇ ಇಲ್ಲ. ನಾನು ಅಥವಾ ಶ್ರೀರಾಮುಲು ಬಿಟ್ಟರೆ ಬೇರೆಯವರಿಗೆ ಈ ಜಿಲ್ಲೆ ಬಗ್ಗೆ ನಾಲೇಜ್‌ ಇರೋದಿಲ್ಲ. ಹೀಗಾಗಿ ನಾವಿಬ್ಬರಲ್ಲಿ ಯಾರಾದರೂ ನನ್ನ ಅಭ್ಯಂತರವಿಲ್ಲ ಎಂದರು.

Tap to resize

Latest Videos

ಸಚಿವ ಶ್ರೀರಾಮುಲು ಬಹಿರಂಗ ಚರ್ಚೆಗೆ ಬರಲಿ ಎಂದ ಕಾಂಗ್ರೆಸ್‌ ಶಾಸಕ

ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಬೇಕು ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಪೂರ್ಣ ಮನಸ್ಸಿನಿಂದಲೇ ಹೇಳಿದ್ದಾರೆಯೇ? ಹಾಗಿದ್ದರೆ ಖಂಡಿತ ನಾನು ಶ್ರೀರಾಮುಲುಗೆ ಬಿಟ್ಟುಕೊಡಲು ಸಿದ್ಧನಿದ್ದೇನೆ. ಅಷ್ಟೇ ಅಲ್ಲ ಉಸ್ತುವಾರಿ ಸಚಿವರಾಗಲಿ ಎಂದು ನಾನೇ ಸ್ವಾಗತ ಮಾಡುತ್ತೇನೆ ಎಂದು ಶಾಸಕ ರೆಡ್ಡಿ ಈ ಹಿಂದೆ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಚಿವರನ್ನು ಮಾತ್ರ ಉಸ್ತುವಾರಿ ಮಾಡುತ್ತಾರೆ. ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಂತ್ರಿಯಲ್ಲ. ಹೀಗಾಗಿ ಅವರನ್ನು ಬಳ್ಳಾರಿ ಉಸ್ತುವಾರಿ ಮಂತ್ರಿಯನ್ನಾಗಿಸಲು ಬರೋದಿಲ್ಲ. ನೋಡೋಣ ಒಂದು ವೇಳೆ ಮುಖ್ಯಮಂತ್ರಿಗಳು ಸೋಮಶೇಖರ ರೆಡ್ಡಿ ಅವರನ್ನು ಮಂತ್ರಿ ಮಾಡಿದರೆ ಅವರೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಜತೆ ನನಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವು ಚೆನ್ನಾಗಿಯೇ ಇದ್ದೇವೆ ಎಂದು ಇದೇ ವೇಳೆ ಸಚಿವ ಸಿಂಗ್‌ ಸ್ಪಷ್ಟಪಡಿಸಿದರು.
 

click me!