
ಶಿರಾ : ಜ್ಞಾನದ ಮಟ್ಟ ಹೆಚ್ಚಳಕ್ಕೆ ಜ್ಞಾನ ವಿಕಾಸ ಕೇಂದ್ರಗಳು ಸಹಕಾರಿಯಾಗಲಿದ್ದು, ಸದಾ ಖುಷಿ, ಖುಷಿಯಿಂದ ಜೀವನ ನಡೆಸಿದರೆ ಆರೋಗ್ಯ ಭಾಗ್ಯ ನಿಮ್ಮದಾಗಲಿದ್ದು, ಮಕ್ಕಳ ಶಿಕ್ಷಣದ ಪ್ರಗತಿ ಜೊತೆಗೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿಕೊಡಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು.
ತಾಲೂಕಿನ ಕಗ್ಗಲಡು ಗ್ರಾಮದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಮಹಿಳಾ ಜ್ಞಾನ ವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಬ್ಬ ಮನುಷ್ಯ ಉತ್ತಮ ಆರೋಗ್ಯ, ಸಂಸ್ಕಾರ, ಉತ್ತಮ ಆಲೋಚನೆ ಜೊತೆಗೆ ಸಮಾಜದಲ್ಲಿ ತನ್ನಂತೆ ಇತರರು ಎಂಬ ಭಾವನೆಯಿಂದ ಬಾಳುವವನೆ ನಿಜವಾದ ಶ್ರೀಮಂತ. ಆರ್ಥಿಕ ಅಭಿವೃದ್ಧಿಯ ಆಲೋಚನೆಯೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡು ಸಮಾಜಮುಖಿ ಚಿಂತನೆಯಲ್ಲಿ ತೊಡಗಿಕೊಂಡಾಗ ಜೀವನ ಸಾರ್ಥಕತೆ ಕಾಣಲಿದೆ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಂದಕುಂಟೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಸಿ. ಹೇಮರಾಜು ಬಹುಮಾನ ವಿತರಣೆ ಮಾಡಿದರು. ಮೇಲ್ವಿಚಾರಕ ವಿಜಯ ಕೃಷ್ಣ, ಭೈರವಿ ಸಂಘದ ಅಧ್ಯಕ್ಷೆ ಶಾರದಮ್ಮ, ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಮತಾ, ಸೇವಾ ಪ್ರತಿನಿಧಿ ನಾಗರಾಜ್, ಹೇಮಾ ಸೇರಿದಂತೆ ಹಲವರು ಹಾಜರಿದ್ದರು.