ಬೆಂಗಳೂರು : ಹೊಸ ಕಟ್ಟಡ ನಿರ್ಮಾಣ ಹಾಗೂ ನವೀಕರಣದ ಕಾರಣಕ್ಕೆ ರಾಜಧಾನಿ ಬೆಂಗಳೂರಿನ ಬರೋಬ್ಬರಿ 10 ಹೆರಿಗೆ ಆಸ್ಪತ್ರೆಗಳ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ನಗರ ಆರೋಗ್ಯ ಜವಾಬ್ದಾರಿ ಹೊಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) 6 ರೆಫರಲ್ ಆಸ್ಪತ್ರೆ, 28 ಹೆರಿಗೆ ಆಸ್ಪತ್ರೆ ಹಾಗೂ 2 ಜನರಲ್ ಆಸ್ಪತ್ರೆಗಳನ್ನು ನಿರ್ವಹಣೆ ಮಾಡುತ್ತಿದೆ. ಇದರೊಂದಿಗೆ ನಮ್ಮ ಕ್ಲಿನಿಕ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಡೆಸುತ್ತಿದೆ. ಈ ಪೈಕಿ ಬರೋಬ್ಬರಿ 10 ಹೆರಿಗೆ ಆಸ್ಪತ್ರೆಗಳಿಗೆ ಹೊಸ ಕಟ್ಟಡ ನಿರ್ಮಾಣ ಹಾಗೂ ನವೀಕರಣ ಮಾಡುವುದಕ್ಕೆಂದು ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಇತರೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಯಶವಂತಪುರದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾರ್ಯಾರಂಭವಾಗಿಲ್ಲ. ಉಳಿದಂತೆ ಕೆಲವು ಆಸ್ಪತ್ರೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಬಡವರು, ಕೂಲಿ ಕಾರ್ಮಿಕರು, ವಲಸಿಗರು ಈ ಆಸ್ಪತ್ರೆಗಳನ್ನು ನಂಬಿಕೊಂಡಿದ್ದಾರೆ. ಆದರೆ, ಇದೀಗ ಆಸ್ಪತ್ರೆ ಬಂದ್ ಆಗಿರುವುದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಅಥವಾ ಇನ್ನಿತರೆ ಸರ್ಕಾರಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆ 12 ಇದ್ದು, ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ಕೇವಲ 24 ಹಾಗೂ 30 ಸಾಮರ್ಥ್ಯವಿದೆ. ಈ ಆಸ್ಪತ್ರೆಗಳನ್ನು ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಅಭಿವೃದ್ಧಿಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಸುಮಾರು 14 ಆಸ್ಪತ್ರೆಗಳಲ್ಲಿ 30 ಹಾಸಿಗೆಗೆ, 5 ಆಸ್ಪತ್ರೆಗಳನ್ನು 50 ಹಾಸಿಗೆ ಸಾಮರ್ಥ್ಯಕ್ಕೆ ಏರಿಕೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸೇವೆ ಆರಂಭಿಸಲಾಗುವುದು.
ಇನ್ನೂ ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣಗೊಂಡ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆ ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಂಡ ನಂತರ ಒಳರೋಗಿ ವಿಭಾಗ ಆರಂಭಿಸುವಕ್ಕೆ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರವಾದ (ಜಿಬಿಎ) ಬಳಿಕ ಐದು ನಗರ ಪಾಲಿಕೆ ರಚನೆ ಮಾಡಲಾಗಿದೆ. ಈ ವೇಳೆ ಪಶ್ಚಿಮ ವಲಯಕ್ಕೆ ಸೇರಿದ ಕೆಲವು ಆಸ್ಪತ್ರೆಗಳು ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಹೀಗಾಗಿ, ವೈದ್ಯಕೀಯ ಸಿಬ್ಬಂದಿಯ ಹಾಜರಾತಿ, ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆ ಪೂರ್ಣಗೊಳ್ಳದಿರುವುದಕ್ಕೆ ವೇತನ ಸಮಸ್ಯೆ ಉಂಟಾಗಿದೆ.
ಸ್ಥಗಿತಗೊಂಡಿರುವ ಹೆರಿಗೆ ಆಸ್ಪತ್ರೆಗಳು:
ಕೆಂಪೇಗೌಡ ನಗರದ ಹೆರಿಗೆ ಆಸ್ಪತ್ರೆ, ಚಾಮರಾಜಪೇಟೆಯ ಹೆರಿಗೆ ಆಸ್ಪತ್ರೆ, ಶಾಂತಿನಗರದ ಹೆರಿಗೆ ಆಸ್ಪತ್ರೆ, ತಿಮ್ಮಯ್ಯ ರಸ್ತೆ ಹೆರಿಗೆ ಅಸ್ಪತ್ರೆ, ಬೊಬ್ಬತ್ತಿ ಹೆರಿಗೆ ಅಸ್ಪತ್ರೆ, ಜಯನಗರ ಹೆರಿಗೆ ಅಸ್ಪತ್ರೆ. ಅಡುಗೋಡಿ ಹೆರಿಗೆ ಆಸ್ಪತ್ರೆ, ಯಡಿಯೂರುಹೆರಿಗೆ ಆಸ್ಪತ್ರೆ, ಆಜಾದ್ ನಗರ ಹೆರಿಗೆ ಆಸ್ಪತ್ರೆ ಹಾಗೂ ಯಶವಂತಪುರ ಹೆರಿಗೆ ಆಸ್ಪತ್ರೆ.