ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌: ಸಚಿವ

By Kannadaprabha News  |  First Published Jul 26, 2023, 8:00 AM IST

ಹೊಸ ತಂತ್ರಜ್ಞಾನ ಆಧಾರಿತ, ಟ್ರ್ಯಾಕಿಂಗ್‌ ವ್ಯವಸ್ಥೆಯುಳ್ಳ 108 ಆ್ಯಂಬುಲೆನ್ಸ್‌ ಸೇವೆಯನ್ನು ಶೀಘ್ರವೇ ರಾಜ್ಯದಾದ್ಯಂತ ವಿಸ್ತರಿಸಲಾಗುವುದು.


 ತುಮಕೂರು : ಹೊಸ ತಂತ್ರಜ್ಞಾನ ಆಧಾರಿತ, ಟ್ರ್ಯಾಕಿಂಗ್‌ ವ್ಯವಸ್ಥೆಯುಳ್ಳ 108 ಆ್ಯಂಬುಲೆನ್ಸ್‌ ಸೇವೆಯನ್ನು ಶೀಘ್ರವೇ ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ಅಂತೆಯೇ ಮೆಡಿಕಲ್‌ ಮೊಬೈಲ್‌ ಯೂನಿಟ್‌, 104 ಕಾಲ್‌ ಸೆಂಟರ್‌ ವ್ಯವಸ್ಥೆ, ಆಸ್ಪತ್ರೆಗಳಿಗೆ ಸಕಾಲದಲ್ಲಿ ಔಷಧ ಪೂರೈಕೆ ಮುಂತಾದ ಸುಧಾರಣಾ ಕ್ರಮಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ನಗರದ ಜಿಲ್ಲಾ ಗೆ ಮಂಗಳವಾರ ಸಚಿವರು ಭೇಟಿ ನೀಡಿ, ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದ ನಂತರ ಆಡಿಟೋರಿಯಂನಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆಸಿದರು. ದಾಸ್ತಾನು ನಿಗಮದ ಕಾರ್ಯ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಸಕಾಲದಲ್ಲಿ ಜಿಲ್ಲೆಗಳಿಗೆ ಔಷಧಿ ಒದಗಿಸುವ ಕ್ರಮಕೈಗೊಳ್ಳಲಾಗುವುದು. 262 ಹೊಸ 108 ಆ್ಯಂಬುಲೆನ್ಸ್‌ ವಾಹನಗಳನ್ನು ಖರೀದಿ ಮಾಡಲಾಗಿದ್ದು, ಒಟ್ಟು 750 ಆ್ಯಂಬುಲೆನ್ಸ್‌ ವಾಹನಗಳು ಸೇವೆಯಲ್ಲಿ ಇರಲಿದೆ ಎಂದರು.

Tap to resize

Latest Videos

ರೋಗಿಗಳು ಆಸ್ಪತ್ರೆಗೆ ಬಂದಾಗ ವೈದ್ಯರು ಮೊದಲಿಗೆ ರೋಗಿಗಳನ್ನು ಚೆನ್ನಾಗಿ ಮಾತನಾಡಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಆಸ್ಪತ್ರೆಗಳು ಸೇವೆ ಆಧಾರಿತ ಕೇಂದ್ರಗಳಾಗಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಹಿಡಿದು ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಮಾನವೀಯತೆಯಿಂದ ರೋಗಿಗಳ ಸೇವೆ ಮಾಡಬೇಕು. ಜಿಲ್ಲಾಸ್ಪತ್ರೆ ಹೊರತುಪಡಿಸಿ ಪಿಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ಕೆಲವೆಡೆ ಕೇವಲ ಬಯೋಮೆಟ್ರಿಕ್‌ ಹಾಜರಾತಿ ನೀಡಿ ವೈದ್ಯರು ಹೊರಹೋಗುತ್ತಾರೆ ಎನ್ನುವ ದೂರುಗಳಿದ್ದು, ಇದು ಸಲ್ಲದು. ಕಡ್ಡಾಯವಾಗಿ ವೈದ್ಯರು 8 ತಾಸು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಬೇಕು. ಜಿಲ್ಲಾ ಪಂಚಾಯತ್‌ ಸಿಇಒ ಅವರು ಈ ಕುರಿತಂತೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಕೇಂದ್ರ ಕಚೇರಿಯಿಂದ ಔಷಧ ಪೂರೈಕೆ ಸಕಾಲದಲ್ಲಿ ಆಗದಿದ್ದಲ್ಲಿ ಸ್ಥಳೀಯವಾಗಿಯೇ ಔಷಧಿ ಖರೀದಿಸಿ ರೋಗಿಗಳಿಗೆ ಪೂರೈಸಲು ಅವಕಾಶ ನೀಡಲಾಗಿದೆ. ಅನಾವಶ್ಯಕವಾಗಿ ರೋಗಿಗಳನ್ನು ಹೊರಗಡೆಯಿಂದ ಔಷಧಿ ಖರೀದಿಸುವಂತೆ ಸೂಚಿಸಬಾರದು ಮತ್ತು ಆಸ್ಪತ್ರೆಯ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಪೂರೈಸುವಂತೆ ಸೂಚಿಸಿದರು. ಸಿ ಸೆಕ್ಷನ್‌ ಹೆರಿಗೆ ಪ್ರಕರಣಗಳನ್ನು ಕಡಿಮೆ ಮಾಡಬೇಕು ಹಾಗೂ ಸಹಜ ಹೆರಿಗೆಗೆ ಪೋ›ತ್ಸಾಹಿಸಬೇಕು. ಜಿಲ್ಲೆಯಲ್ಲಿ ಸಿ ಸೆಕ್ಷನ್‌ ಹೆರಿಗೆ ಪ್ರಕರಣ ಶೇ.50ರಷ್ಟಿದ್ದು, ಇದು ಕಡಿಮೆಯಾಗಬೇಕು. ಇನ್ನು ಮುಂದೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಿ ಸೆಕ್ಷನ್‌ ಪ್ರಕರಣ ಕುರಿತಂತೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಕೀಲು ಮೂಳೆ ವಿಭಾಗದಲ್ಲಿ ಅನಸ್ತೇಷಿಯ ಕೊರತೆ ಇದ್ದು, ಎನ್‌ಎಚ್‌ಎಂ ಅಡಿಯಲ್ಲಿ ಅನಸ್ತೇಷಿಯ ತಜ್ಞರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ಅವರಿಗೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ಎಚ್‌ಐವಿ ಪ್ರಕರಣಗಳು ಹೆಚ್ಚಾಗದಂತೆ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯದ ಕುರಿತು ಅರಿವು ಮೂಡಿಸಬೇಕು. ಟ್ರಾಮಾ ಕೇರ್‌ ಸೆಂಟರ್‌ನ ಸಿಬ್ಬಂದಿ ನೇಮಕಾತಿ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟುಬೇಗ ಪೂರ್ಣಗೊಳಿಸುವಂತೆ, ಜಿಲ್ಲಾ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ ಒಬ್ಬರು ಇದ್ದು, ಮತ್ತೊಬ್ಬರನ್ನು ನೇಮಕ ಮಾಡುವ ಸಂಬಂಧ ಪರಿಶೀಲಿಸುವುದಾಗಿ ತಿಳಿಸಿದರು.

ಜಿಲ್ಲಾಸ್ಪತ್ರೆಯ ಬ್ಲಡ್‌ ಬ್ಯಾಂಕ್‌ನಲ್ಲಿ ಇಬ್ಬರು ತಂತ್ರಜ್ಞರು ಇದ್ದು, ಕನಿಷ್ಠ ಮೂರು ತಂತ್ರಜ್ಞರನ್ನು ನೇಮಕ ಮಾಡುವ ಸಂಬಂಧ ಪರಿಶೀಲಿಸಲಾಗುವುದು. ಜಿಲ್ಲೆಯಲ್ಲಿ ಟಿಬಿ ಕಾಯಿಲೆಯಿಂದ ಮರಣ ಹೊಂದುವ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿಯಬೇಕು. ಬೀದಿ ನಾಯಿ ಕಡಿತ ಪ್ರಕರಣಗಳು ಹೆಚ್ಚಿರುವ ಕುರಿತು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ, ಸಾಕಷ್ಟುಔಷಧಿ ದಾಸ್ತಾನು ಹೊಂದಬೇಕು ಹಾಗೂ ಪಾಲಿಕೆ ವತಿಯಿಂದ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಗಳನ್ನು ಆಯೋಜಿಸಿ ಚುಚ್ಚು ಮದ್ದು ನೀಡಬೇಕು ಎಂದು ತಿಳಿಸಿದರು.

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ಮಾತನಾಡಿ, ಹೋಬಳಿ ಮಟ್ಟದಲ್ಲಿ ಸುಸಜ್ಜಿತವಾದ ಆ್ಯಂಬುಲೆನ್ಸ್‌ ವಾಹನಗಳನ್ನು ಒದಗಿಸಿಕೊಡಬೇಕು. ವೈದ್ಯರು ಕೇಂದ್ರ ಸ್ಥಾನದಲ್ಲಿರಬೇಕಾದರೆ ಅವರಿಗೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸುಧಾರಿತ ವಸತಿ ಗೃಹ ವ್ಯವಸ್ಥೆಯಾಗಬೇಕು. 400 ಹಾಸಿಗೆಗಳುಳ್ಳ ತುಮಕೂರು ಜಿಲ್ಲಾಸ್ಪತ್ರೆಗೆ ಪ್ರತಿ ದಿನ ಓಪಿಡಿ ವಿಭಾಗಕ್ಕೆ 1000ಕ್ಕೂ ಹೆಚ್ಚು ರೋಗಿಗಳು ಬರುವ ಕಾರಣ ಮತ್ತಷ್ಟುಹಾಸಿಗೆಗಳನ್ನು ನೀಡುವ ವ್ಯವಸ್ಥೆಯಾಗಬೇಕು, ತುಮಕೂರು ಜಿಲ್ಲೆಯ ಕೈಗಾರಿಕಾ ಕಾರಿಡಾರ್‌ ಮತ್ತು ಎಚ್‌ಎಎಲ್‌ ಫ್ಯಾಕ್ಟರಿ ಘಟಕಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಜನರು ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುವ ಕಾರಣ ಮುಂದಿನ ದೂರದೃಷ್ಟಿಇಟ್ಟುಕೊಂಡು ಸೂಕ್ತ ಆರೋಗ್ಯ ಯೋಜನೆಯನ್ನು ತಯಾರಿಸಿಕೊಂಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌, ಸುರೇಶ್‌ ಗೌಡ, ಡಾ. ರಂಗನಾಥ್‌, ಆರೋಗ್ಯ ಇಲಾಖೆಯ ಆಯುಕ್ತರಾದ ರಣದೀಪ್‌, ಆರೋಗ್ಯ ಇಲಾಖೆಯ ಪ್ರಿನ್ಸಿಪಾಲ್‌ ಸೆಕ್ರೆಟರಿ ಅನಿಲ್‌ ಕುಮಾರ್‌, ಎನ್‌ಎಚ್‌ಎಂ ವ್ಯವಸ್ಥಾಪಕ ನಿರ್ದೇಶಕ ನವೀನ್‌ ಭಟ್‌, ಪಾಲಿಕೆ ಮೇಯರ್‌ ಪ್ರಭಾವತಿ ಸುಧೀಶ್ವರ್‌, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್‌, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ವೀಣಾ ಹಾಗೂ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಶೀಘ್ರವೇ ಸಿಬ್ಬಂದಿ ನೇಮಕ: ಆರೋಗ್ಯ ಸಚಿವ

ಎಬಿಎಆರ್‌ಕೆ ಯೋಜನೆಗೆ ಹೆಚ್ಚು ಜನ ನೋಂದಣಿಯಾಗುವ ಹಾಗೆ ನೋಡಿಕೊಳ್ಳಬೇಕು. ಇದರಿಂದ ಜಿಲ್ಲಾಸ್ಪತ್ರೆಗೆ 10ಕೋಟಿ ಆದಾಯ ಬಂದಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನು ನಿಮ್ಮ ಹಂತದಲ್ಲಿಯೇ ಮಾಡಿಕೊಳ್ಳಲು ಅನುಕೂಲವಾಗಲಿದೆ. ಸಿಬ್ಬಂದಿ ಕೊರತೆ ಕುರಿತು ಶೀಘ್ರವೇ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರೊಂದಿಗೆ ಚರ್ಚಿಸಿ ಸಿಬ್ಬಂದಿ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು. ಸ್ಥಳೀಯವಾಗಿ ಸಿಬ್ಬಂದಿ ನೇಮಕ ಮಾಡುವ ಅಧಿಕಾರವಿದ್ದಲ್ಲಿ ಶೀಘ್ರವೇ ನೇಮಕಾತಿ ಮಾಡುವಂತೆ ಮತ್ತು ಅವಶ್ಯಕತೆ ಇಲ್ಲದ ಕಡೆ ಇರುವ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಅವಶ್ಯಕತೆ ಇರುವ ಕಡೆ ವರ್ಗಾಯಿಸಿ ವೈದ್ಯರ ಕೊರತೆ ನೀಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚಿಸಿದರು.

click me!