ಲಸಿಕಾಕರಣದಲ್ಲಿ ಜಿಲ್ಲೆ ಶೇ.96ರಷ್ಟುಸಾಧನೆ: ಸಚಿವ

By Kannadaprabha NewsFirst Published Jan 27, 2023, 6:07 AM IST
Highlights

ಜೆ.ಇ.ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಶೇ.96ರಷ್ಟುಸಾಧನೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

 ತುಮಕೂರು :  ಜೆ.ಇ.ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಶೇ.96ರಷ್ಟುಸಾಧನೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ಮಾಡಿ ಮಾತನಾಡಿದರು.

ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ ಹಾಗೂ ಕೈಗಾರಿಕಾ ವಲಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ವೇಗವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬೆಂಗಳೂರಿನ ಮೇಲಿರುವ ಒತ್ತಡವನ್ನು ತಗ್ಗಿಸುವ ಸಲುವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ 25 ಸೆಪ್ಟೆಂಬರ್‌ 2021ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 99 ಕೋಟಿ ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ಪೆರಿಪೆರೆಲ್‌ ಕ್ಯಾನ್ಸರ್‌ ಕೇಂದ್ರವನ್ನು ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ್ದಾರೆ. ಅಲ್ಲದೆ, 20 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆ ಹಾಗೂ 50 ಲಕ್ಷ ವೆಚ್ಚದಲ್ಲಿ 10 ಹಾಸಿಗೆಗಳುಲ್ಲ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಪಾಪನೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಸಂಸದರು ಹಾಗೂ ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 1.5 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯದ ಉನ್ನತೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಶ್ರೀ ಸಾಮಾನ್ಯನಿಗೂ, ಶ್ರೀಮಂತನಿಗೂ ಸರಿಸಮನಾದ ಹಕ್ಕುಗಳು ದೊರೆಯುವಂತೆ ನಮ್ಮ ಸಂವಿಧಾನವನ್ನು ರೂಪಿಸಲಾಗಿದ್ದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇತರೆ ದೇಶಗಳಿಗೆ ಮಾದರಿಯಾಗಿದೆ ಎಂದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ 26 ಜನವರಿ 1950 ಭಾರತೀಯರಾದ ನಾವೆಲ್ಲರೂ ಅತ್ಯಂತ ಹೆಮ್ಮೆ ಪಡುವಂತಹ ದಿನ. ಶತ ಶತಮಾನಗಳ ಸ್ವಾತಂತ್ರ್ಯದ ಕನಸು ಪರಿಪೂರ್ಣವಾಗಿ ಸಾಕಾರಗೊಂಡ ದಿನ. ಭಾರತ ಸರ್ವತಂತ್ರ ಸ್ವತಂತ್ರವಾದ ದಿನ. ಭಾರತೀಯರ ಸ್ವಾತಂತ್ರ್ಯದ ಕನಸನ್ನು ನನಸಾಗಿಸಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ಮಾನವೀಯ ಮೌಲ್ಯಗಳೊಂದಿಗೆ ಭಾರತೀಯರೆಲ್ಲರಿಗೂ ಸರ್ವಸಮ್ಮತವಾಗುವಂತೆ ರೂಪಿಸಿ, ಸಂವಿಧಾನದ ರೂಪದಲ್ಲಿ ಜಾರಿಗೊಳಿಸಿ ತಮಗೆ ತಾವು ಅರ್ಪಿಸಿಕೊಂಡ ದಿನವಾಗಿದೆ. 395 ವಿಧಿಗಳು, 8 ಅನುಸೂಚಿಗಳು ಹಾಗೂ 22 ಅಧ್ಯಾಯಗಳನ್ನೊಳಗೊಂಡ ಭಾರತದ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತು. ಇದೇ ದಿನವನ್ನು ಪ್ರತಿವರ್ಷ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಸಿರು ಕ್ರಾಂತಿ ಮೂಲಕ ಆಹಾರ ಸ್ವಾವಲಂಬನೆ ಸಾಧಿಸಲಾಗಿದೆ. ಕೈಗಾರಿಕಾ ಕ್ರಾಂತಿ ಮೂಲಕ ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಸಂಶೋಧನೆಗಳು, ಸಂಪರ್ಕ ಕ್ಷೇತ್ರಗಳ ಪ್ರಗತಿಯಿಂದಾಗಿ ಭಾರತವು ಪ್ರಪಂಚದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದುವರೆದ ರಾಷ್ಟ್ರಗಳು ಭಾರತದ ಸಾಧನೆಯನ್ನು ಬೆರುಗು ಕಣ್ಣಿನಿಂದ ಗಮನಿಸುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜ್ಯೋತಿಗಣೇಶ್‌, ಎಂಎಲ…ಸಿ ರಾಜೇಂದ್ರ, ಚಿದಾನಂದಗೌಡ, ಮೇಯರ್‌ ಪ್ರಭಾವತಿ ಎಂ.ಸುಧೀಶ್ವರ್‌, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಸಿಇಓ ವಿದ್ಯಾಕುಮಾರಿ, ಎಸ್ಪಿ ರಾಹುಲ… ಕುಮಾರ್‌ ಶಹಪೂರ್‌ವಾಡ್‌, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದಿಂದ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ 10 ನಮ್ಮ ಕ್ಲಿನಿಕ್‌ಗಳನ್ನೂ ತೆರೆಯಲು ಅನುಮೋದನೆ ನೀಡಲಾಗಿದ್ದು, ಮರಳುರು ದಿನ್ನೆ, ಮೇಳೆಕೋಟೆ , ಮಧುಗಿರಿ, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ತಲಾ ಒಂದು ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಜಯಪುರ, ದೇವರಾಯಪಟ್ಟಣ, ದಿಬ್ಬೂರು, ಸತ್ಯಮಂಗಲ ಹಾಗೂ ಬಿದಿರುಮಳೆ ತೋಟ ಈ 5 ನಗರಗಳಲ್ಲಿ ಶೀಘ್ರವಾಗಿ ಪ್ರಾರಂಭವಾಗಲಿದ್ದು ಜನರ ಸೇವೆಗೆ ಲಭ್ಯವಾಗಲಿದೆ.

click me!