* ಅನುದಾನ ಬಳಕೆಗೆ ಹಲವು ಅಡ್ಡಿ-ನಿವಾರಣೆಗೆ ಯತ್ನ
* ಕಲ್ಯಾಣ ಕರ್ನಾಟಕ ಅನುದಾನ ಬಳಕೆ ಹಾಗೂ 371 ಜೆ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಷರತ್ತು
* 371 ಜೆ ಸ್ಥಾನಮಾನದಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ವಿಶೇಷ ಅನುದಾನ ಲಭ್ಯ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.28): ಈಗ ರಾಜ್ಯಾದ್ಯಂತ ರಾಜಕೀಯಕ್ಕಾಗಿ ತೆರೆಮರೆಯಲ್ಲಿ ನಾನಾ ಸಭೆಗಳು ನಡೆಯುತ್ತಿವೆ. ನಾಯಕತ್ವಕ್ಕಾಗಿ ಸದ್ದಿಲ್ಲದೆ ಗುಂಪು ಗುಂಪಾಗಿ ಶಾಸಕರು, ಸಚಿವರು ಸಭೆ ನಡೆಸುತ್ತಿದ್ದಾರೆ. ಈ ನಡುವೆ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕಾಗಿ ಪಕ್ಷಾತೀತವಾಗಿ ಶಾಸಕರು, ಸಚಿವರು ಸಭೆ ನಡೆಸಲು ಮುಂದಾಗಿದ್ದಾರೆ. ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಈ ಪ್ರಯತ್ನ ಈಗ ಕೈಗೂಡುವ ಹೊತ್ತಲ್ಲಿ ರಾಜಕೀಯ ಬಣ್ಣ ಬಳಿಯುತ್ತಾರೋ ಎಂದು ಮತ್ತೆ ಮೀನಾಮೇಷ ಮಾಡಲಾಗುತ್ತಿದೆ. ಆದರೂ ಸಭೆ ನಡೆಯುವುದು ಪಕ್ಕಾ ಎನ್ನುತ್ತವೆ ಉನ್ನತ ಮೂಲಗಳು.
ಅರಣ್ಯ ಇಲಾಖೆಯ ಸಚಿವ ಆನಂದ ಸಿಂಗ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ಅವರು ನೇತೃತ್ವದಲ್ಲಿ , ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸಭೆ ಸೇರಲು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಯುತ್ತಿದೆ.
ಏನೇನು ಸಮಸ್ಯೆ?:
ಕಲ್ಯಾಣ ಕರ್ನಾಟಕಕ್ಕೆ 371 ಜೆ ದಕ್ಕಿದೆ. ಸಂವಿಧಾನವನ್ನೇ ತಿದ್ದುಪಡಿ ಮಾಡಿ, ಈ ಭಾಗದ ಕಲ್ಯಾಣಕ್ಕಾಗಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ, ಅದು ಸರಿಯಾಗಿ ಸದ್ಬಳಕೆಯಾಗುತ್ತಿಲ್ಲ ಮತ್ತು ನಾನಾ ಅಡ್ಡಿಗಳು ಎದುರಾಗಿವೆ. ಹೀಗಾಗಿ ಅದು ಇದ್ದರೂ ಪ್ರಯೋಜನವಾಗುತ್ತಿಲ್ಲ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 1,492 ಕೋಟಿ ರು. ಅನುದಾನ
ಶಿಕ್ಷಕರ ನೇಮಕಾತಿ:
ಪೊಲೀಸ್ ನೇಮಕಾತಿ ಸೇರಿದಂತೆ ಇತರೆ ನೇಮಕಾತಿಯಲ್ಲಿಯೂ ಅಳವಡಿಸಿರುವ ಷರತ್ತುಗಳು ಹಾಗೂ ಈ ಭಾಗವರಿಗೆ ಬಡ್ತಿ ನೀಡುವುದಕ್ಕಾಗಿ ಇರುವ ದಾರಿ ಸೇರಿದಂತೆ ಎಲ್ಲದಕ್ಕೂ ಷರತ್ತು ವಿಧಿಸಲಾಗಿದೆ. ಇದರಿಂದ ಬಡ್ತಿಯೂ ಆಗುತ್ತಿಲ್ಲ ಮತ್ತು ನೇಮಕಾತಿಯೂ ನಡೆಯುತ್ತಿಲ್ಲ. ಇದರಿಂದ 371ಜೆ ಇದ್ದರೂ ಕೊರಗುವಂತೆ ಆಗಿದೆ. ಹೀಗಾಗಿ, ಈ ಷರತ್ತುಗಳನ್ನು ಸಡಿಲಿಕೆ ಮಾಡಬೇಕು ಎಂದು ಆಗ್ರಹಿಸಲು ಸಭೆ ಸೇರಲಾಗುತ್ತಿದೆ.
ಅನುದಾನ ಬಳಕೆಗೂ ಕೊಕ್ಕೆ:
371 ಜೆ ಸ್ಥಾನಮಾನದಡಿ ಈ ಭಾಗಕ್ಕೆ ಪ್ರತ್ಯೇಕ ವಿಶೇಷ ಅನುದಾನ ಲಭ್ಯವಾಗುತ್ತದೆ. ಸರ್ಕಾರವೂ ಪ್ರತಿ ವರ್ಷವೂ . 1500 ಕೋಟಿ ಘೋಷಣೆ ಮಾಡುತ್ತದೆ. ಈಗಲೂ 1448 ಕೋಟಿಗೆ ರಾಜ್ಯಪಾಲರ ಅನುಮೋದನೆಯಾಗಿದೆ. ಆದರೆ, ವಾಸ್ತವದಲ್ಲಿ ಇದ್ಯಾವುದು ಬಳಕೆ ಮಾಡಲು ಆಗುತ್ತಿಲ್ಲ. ಇರುವ ನೂರೆಂಟು ಷರತ್ತಿನಿಂದಾಗ ಶೇ. 30ರಷ್ಟು ಅನುದಾನ ಬಳಕೆ ಮಾಡಲು ಆಗುತ್ತಿಲ್ಲ.
ಈ ಅನುದಾನವನ್ನು ಹೀಗೆ ಬಳಕೆ ಮಾಡಬೇಕು, ಇದಕ್ಕೆ ಬಳಕೆ ಮಾಡಬೇಕು ಎನ್ನುವ ಷರತ್ತುಗಳು ಮುಳುವಾಗಿವೆ. ಹೀಗಾಗಿ, ಇದೆಲ್ಲವನ್ನು ಸಡಿಲಿಕೆ ಮಾಡಿ, ಕೊಟ್ಟಿರುವ ಅನುದಾನವನ್ನು ಆಯಾ ವರ್ಷವೇ ಬಳಕೆ ಮಾಡುವಂತೆ ಆಗಬೇಕು. ಅಲ್ಲದೆ ಬಾಕಿ ಉಳಿಯುವ ಅನುದಾನವನ್ನು ಬ್ಯಾಕ್‌ಲಾಗ್ ಅಡಿ ಮತ್ತೆ ಮರು ಬಳಕೆ ಮಾಡಿಕೊಳ್ಳುವಂತಾಗಬೇಕು ಎನ್ನುವ ಬಗ್ಗೆ ಶಾಸಕರು, ಸಚಿವರು ಚರ್ಚೆ ಮಾಡಲು ಮುಂದಾಗಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ: ಜನತಾ ಮಹಾ ಅಧಿವೇಶನಕ್ಕೆ ಸಿದ್ಧತೆ
ದಿನಾಂಕ ನಿಗದಿಯಾಗುತ್ತಿಲ್ಲ:
ಈಗಾಗಲೇ ಕಲ್ಯಾಣ ಕರ್ನಾಟಕ ಶಾಸಕರು ಮತ್ತು ಸಚಿವರು ಚರ್ಚೆ ಮಾಡಿರುವಂತೆ ಬೆಂಗಳೂರಿನಲ್ಲಿ ಸಭೆ ನಡೆಸುವ ಕುರಿತು ದಿನಾಂಕ ನಿಗದಿಯಾಗಿ ಆಗಾಗ ಮುಂದೂಡುತ್ತಲೇ ಬರಲಾಗಿದೆ. ಈಗಲೂ ಜುಲೈ 1ರಂದು ಸಭೆ ನಿಗದಿಯಾಗಿದೆ ಎನ್ನಲಾಗುತ್ತಿದೆಯಾದರೂ ಅದು ಸ್ಪಷ್ಟವಾಗುತ್ತಿಲ್ಲ. ಸಾರಥ್ಯ ವಹಿಸಿ, ಸಭೆ ನಡೆಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಸಭೆ ನಡೆಸಿದರೆ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಇದುವರೆಗೂ ಗುಟ್ಟು ಬಿಟ್ಟುಕೊಡುತ್ತಿಲ್ಲ. ಜು. 1ರಂದು ಬೆಂಗಳೂರಿನ ಎಲ್‌ಎಚ್‌ನಲ್ಲಿಯೇ ನಿಗದಿಯಾಗಿದೆ ಎನ್ನಲಾಗುತ್ತಿದೆಯಾದರೂ ಖಚಿತಪಡಿಸುತ್ತಿಲ್ಲ.
ಕಲ್ಯಾಣ ಕರ್ನಾಟಕ ಅನುದಾನ ಬಳಕೆ ಹಾಗೂ 371 ಜೆ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಷರತ್ತುಗಳನ್ನು ಸಡಿಲಿಕೆ ಮಾಡುವ ದಿಸೆಯಲ್ಲಿ ಚರ್ಚೆಯಾಗಿರುವುದು ನಿಜ. ಈ ಕುರಿತು ಈ ಭಾಗದ ಶಾಸಕರು, ಸಚಿವರ ಸಭೆ ನಡೆಸಲು ತಯಾರಿ ನಡೆಯುತ್ತಿದೆಯಾದರೂ ನಿರ್ದಿಷ್ಟ ದಿನಾಂಕ ನಿಗದಿಯಾಗಿಲ್ಲ ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ತಿಳಿಸಿದ್ದಾರೆ.