ಬಿಸಿಲೂರಿನಲ್ಲಿ ಕನ್ನಡ ಜಾತ್ರೆ: ಸಮ್ಮೇಳನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

By Kannadaprabha News  |  First Published Feb 5, 2020, 7:39 AM IST

ಕವಿ ಎಚ್ಚೆಸ್ವಿ ಅಧ್ಯಕ್ಷತೆಯಲ್ಲಿ 3 ದಿನಗಳ ಕಾಲ ಸಮ್ಮೇಳನ| ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ| ಬೆಳಗ್ಗೆ 8ಕ್ಕೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ| ಗುಲ್ಬರ್ಗಾ ವಿವಿ ಆವರಣದ 35 ಎಕರೆ ವಿಶಾಲ ಪ್ರದೇಶದಲ್ಲಿ ಭವ್ಯ ವೇದಿಕೆ ನಿರ್ಮಾಣ|  60 ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಒಟ್ಟು 60 ಕಲಾ ತಂಡಗಳು ಭಾಗಿ| ಭದ್ರತೆಗಾಗಿ 4 ಸಾವಿರ ಪೊಲೀಸರ ನಿಯೋಜನೆ, ಊಟಕ್ಕಾಗಿ 200 ಕೌಂಟರ್‌| 


ಕಲಬುರಗಿ(ಫೆ.05): ಸಾಹಿತ್ಯಾಸಕ್ತರಿಗೆ ರಸದೌತಣ ಉಣಬಡಿಸಲು, ನುಡಿಜಾತ್ರೆಯ ತೇರೆಳೆಯಲು ಶರಣ- ದಾಸ- ಸೂಫಿ- ತತ್ವಪದ ಸಾಹಿತ್ಯದ ತವರೂರು, ಸಪ್ತ ನದಿಗಳ ಬೀಡು ಕಲಬುರಗಿ ಜಿಲ್ಲೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಇಲ್ಲಿನ ಗುಲ್ಬರ್ಗ ವಿವಿಯ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ ಅದ್ಧೂರಿ ಚಾಲನೆ ದೊರೆಯಲಿದೆ.

"

Tap to resize

Latest Videos

undefined

ಕಲಬುರ್ಗಿಯಲ್ಲಿ ಕನ್ನಡ ನುಡಿಜಾತ್ರೆ: ಕಲ್ಯಾಣ ಕರ್ನಾಟಕದ ನಿರೀಕ್ಷೆಗಳೇನು?

ಸುದೀರ್ಘ 33 ವರ್ಷಗಳ ಬಳಿಕ ಕಾಯಕ ಸಂಸ್ಕೃತಿಯ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯು ಸಾಹಿತ್ಯ ಸಮ್ಮೇಳನ ಆತಿಥ್ಯ ವಹಿಸಿದ್ದು, ಕನ್ನಡದ ಅಕ್ಷರ ಜಾತ್ರೆಯ ತೇರೆಳೆಯಲು ಇಡೀ ಜಿಲ್ಲೆ ನವೋಲ್ಲಾಸದಿಂದ ಸಿದ್ಧಗೊಂಡಿದೆ. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸುವ ಲಕ್ಷಾಂತರ ಮಂದಿ ಸಾಹಿತ್ಯಾಭಿಮಾನಿಗಳನ್ನು ಸ್ವಾಗತಿಸಲು ಈಗಾಗಲೇ ನಗರದ ಬೀದಿ ಬೀದಿಗಳು ತಳಿರು- ತೋರಣ, ಕನ್ನಡ ಧ್ವಜಗಳೊಂದಿಗೆ ಸಿಂಗಾರಗೊಂಡು ನಿಂತಿದೆ. ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ 23 ಸಾವಿರದಷ್ಟು ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಶ್ರೀವಿಜಯ ವೇದಿಕೆ: 

ನುಡಿ ಹಬ್ಬಕ್ಕಾಗಿ ಗುಲ್ಬರ್ಗ ವಿವಿಯ 35 ಎಕರೆ ಪ್ರದೇಶದಲ್ಲಿ ಭವ್ಯ ವೇದಿಕೆ ನಿರ್ಮಾಣಗೊಂಡಿದೆ. ಪ್ರಧಾನ ವೇದಿಕೆ ‘ಶ್ರೀವಿಜಯ’ಗೆ ರಾಷ್ಟ್ರಕೂಟ ರಾಜಮನೆತನದ ಮಳಖೇಡ ಕೋಟೆಯ ಪಾರಂಪರಿಕ ಸ್ಪರ್ಶ ನೀಡಲಾಗಿದೆ. ಸಮ್ಮೇಳನಾಧ್ಯಕ್ಷರಾದ ಒಲವಿನ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಮಂಗಳವಾರವೇ ಕಲಬುರಗಿಗೆ ಆಗಮಿಸಿದ್ದು, ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಧ್ವಜಾರೋಹಣದೊಂದಿಗೆ ಮುನ್ನುಡಿ:

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆಳಗ್ಗೆ 8ಕ್ಕೆ ಸಮ್ಮೇಳನದ ಪ್ರಧಾನ ವೇದಿಕೆಯ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ಕಲಬುರಗಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಅವರು ನಾಡ ಧ್ವಜಾರೋಹಣ ನೇರವೇರಿಸುವ ಮೂಲಕ ನುಡಿ ಜಾತ್ರೆಗೆ ಮುನ್ನುಡಿ ಬರೆಯಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ:

ನಗರದ ಸ್ವಾಮಿ ರಮಾನಂದತೀರ್ಥ ಮುಖ್ಯ ಬೀದಿಯಲ್ಲಿರುವ ಎಸ್‌.ಎಂ. ಪಂಡಿತ ರಂಗ ಮಂದಿರ ಪ್ರಾಂಗಣದಿಂದ ಸಮ್ಮೇಳನಾಧ್ಯಕ್ಷ ವೆಂಕಟೇಶಮೂರ್ತಿ ಅವರು ಆಸೀನರಾಗಿರುವ ಸಾಲಂಕೃತ ರಥದ ಭವ್ಯ ಮೆರವಣಿಗೆ ಬೆಳಗ್ಗೆ 8.30ರಿಂದ ಆರಂಭಗೊಳ್ಳಲಿದ್ದು, ಇದರೊಂದಿಗೆ ಸಾಹಿತ್ಯ ಸಮ್ಮೇಳನದ ಮುನ್ನುಡಿ ಆರಂಭಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮೆರವಣಿಗೆಯು ಸುಮಾರು 6.50 ಕಿ.ಮೀ. ದೂರ ಕ್ರಮಿಸಿ, ಗುಲ್ಬರ್ಗ ವಿವಿ ಆವರಣದಲ್ಲಿರುವ ಶ್ರೀವಿಜಯ ಪ್ರಧಾನ ವೇದಿಕೆ ತಲುಪಿದೆ.

5 ಸಾವಿರ ಶಾಲಾ ಮಕ್ಕಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಜತೆ ಸಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ 60 ಕಲಾ ತಂಡಗಳು, ನಾಡಿನ ಸಂಸ್ಕೃತಿ ಬಿಂಬಿಸುವ 10 ಸ್ತಬ್ಧಚಿತ್ರಗಳು ಮೆರವಣಿಗೆಯ ಸೌಂದರ್ಯವನ್ನು ಇಮ್ಮಡಿಗೊಳಿಸಲಿವೆ.

ಬಿಎಸ್‌ವೈ ಉದ್ಘಾಟನೆ:

ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 11.30ಕ್ಕೆ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಗೋವಿಂದ ಕಾರಜೋಳ ಸ್ವಾಗತ ಕೋರಲಿದ್ದು, ಮನು ಬಳಿಗಾರ್‌ ಆಶಯ ನುಡಿಗಳನ್ನಾಡಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಡಾ.ಎಚ್‌.ಎಸ್‌.ವೆಂಟಕೇಶಮೂರ್ತಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಮೊದಲ ದಿನವಾದ ಬುಧವಾರ ಪ್ರಧಾನ ವೇದಿಕೆ ಹಾಗೂ ಸಮಾನಾಂತರ ವೇದಿಕೆಯಲ್ಲಿ ಒಟ್ಟು 4 ವಿಚಾರಗೋಷ್ಠಿಯಗಳು ನಡೆಯಲಿವೆ.

4 ಸಾವಿರ ಪೊಲೀಸ್‌ ಕಣ್ಗಾವಲು:

ಸಮ್ಮೇಳನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಡ್ರೋನ್‌ ಹಾಗೂ ಸಿಸಿಟೀವಿ ಕ್ಯಾಮೆರಾ ಕಣ್ಗಾವಲು ಇರಲಿದೆ. 4 ಎಸ್ಪಿ, 15 ಡಿವೈಎಸ್ಪಿ, 25 ಸಿಪಿಐ, 200 ಪಿಎಸ್‌ಐ ಸೇರಿದಂತೆ ಭದ್ರತೆಗೆಂದು 4 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜತೆಗೆ 10 ಕೆಎಸ್‌ಆರ್‌ಪಿಸಿ ತುಕಡಿ, 500 ಗೃಹರಕ್ಷಕ ದಳದ ಸಿಬ್ಬಂದಿ, 700 ಸಂಚಾರ ಪೊಲೀಸರು ಭದ್ರತಾ ಪಡೆಯಲಿದ್ದಾರೆ.

200 ಊಟದ ಕೌಂಟರ್‌:

ಸಾಹಿತ್ಯದ ರಸದೌತಣದ ಜತೆಗೆ ಕಲಬುರಗಿಯ ಖಡಕ್‌ ರೊಟ್ಟಿದೇಸಿಯೂಟವನ್ನು ಉಣಬಡಿಸಲು ಸ್ವಾಗತ ಸಮಿತಿಯವರು ಸಜ್ಜಾಗಿದ್ದು, ಈಗಾಗಲೇ 1500 ಮಂದಿ ಅಡುಗೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಗೊಂದಲ ಉಂಟಾಗಬಾರದೆಂಬ ಕಾರಣ 200 ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ರೊಟ್ಟಿ, ಪಲ್ಯದ ಜತೆಗೆ ಉತ್ತರ ಕರ್ನಾಟಕ ಭಾಗದ ರುಚಿರುಚಿಯಾದ ಸಿಹಿತಿಂಡಿಗಳು ಸಾಹಿತ್ಯಸಕ್ತರ ನಾಲಿಗೆ ತಣಿಸಲಿವೆ.

113 ಕಡೆ ವಸತಿ ಸೌಲಭ್ಯ:

3 ದಿನಗಳ ನಡೆಯಲಿರುವ ಸಮ್ಮೇಳನದಲ್ಲಿ 23 ಸಾವಿರ ನೋಂದಾಯಿತ ಪ್ರತಿನಿಧಿಗಳು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದ್ದು, ಅತಿಥಿಗಳ ವಾಸ್ತವ್ಯಕ್ಕೆಂದು 113 ಕಡೆ ವಸತಿ ಸೌಲಭ್ಯ ಒದಗಿಸಲಾಗಿದೆ. 60 ಲಾಡ್ಜ್‌, 10 ಕಲ್ಯಾಣ ಮಂಟಪ, 9 ಅತಿಥಿ ಗೃಹ, 6 ಸರ್ಕಾರಿ ಅತಿಥಿ ಗೃಹ, 10 ಖಾಸಗಿ ಶಾಲೆಗಳು, 10 ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿಧಿಗಳ ನೋಂದಣಿಗೆ 20 ಕೌಂಟರ್‌ ತೆರೆಯಲಾಗಿದೆ. 500 ಮಾಧ್ಯಮ ಪ್ರತಿನಿಧಿಗಳಿಗಾಗಿ ಮೀಡಿಯಾ ಸೆಂಟರ್‌ ಸ್ಥಾಪಿಸಲಾಗಿದೆ.
 

click me!