ಕೃಷಿ ಚಟುವಟಿಕೆ: 'ಮುಕ್ತ ಸಂಚಾರಕ್ಕೆ ರೈತರಿಗೆ ಗ್ರೀನ್‌ಪಾಸ್‌ ನೀಡಲು ಕ್ರಮ'

By Kannadaprabha NewsFirst Published Apr 9, 2020, 10:21 AM IST
Highlights

ಕೃಷಿ ಚಟುವಟಿಕೆ, ಸಾಗಾಣಿಕೆಗೆ ನಿರ್ಬಂಧವಿಲ್ಲ| ಬೆಳಗ್ಗೆಯಿಂದ ಸಂಜೆವರೆಗೆ ಕೃಷಿ ಸಂಬಂಧ ಅಂಗಡಿ ತೆರೆಯಿರಿ|ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳ ರಫ್ತಿಗೆ ತಕರಾರಿಲ್ಲ| ಪೊಲೀಸರು ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಎಲ್ಲೂ ತಕರಾರು ಮಾಡುವಂತಿಲ್ಲ|

ಬಳ್ಳಾರಿ(ಏ.09): ರೈತರು ಬೆಳೆದ ಬೆಳೆ ತೆಗೆದುಕೊಂಡು ಹೋಗುವುದಕ್ಕೆ, ಮಾರುಕಟ್ಟೆಗೆ ಸಾಗಿಸಲಿಕ್ಕೆ, ಕೃಷಿ ಪರಿಕರಗಳ ಖರೀದಿ ಹಾಗೂ ಕೃಷಿ ಸಂಬಂಧಿತ ಇನ್ನಿತರ ಮುಕ್ತವಾಗಿ ಸಂಚಾರ ಮಾಡುವುದಕ್ಕಾಗಿ ರೈತರಿಗ ಗ್ರೀನ್‌ ಪಾಸ್‌ ನೀಡಲು ಸೂಚಿಸಲಾಗಿದೆ ಎಂದು  ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ, ಪೊಲೀಸ್‌, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಬುಧವಾರ ಸಂಜೆ ಮಾತನಾಡಿದರು. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬೇರೆ ರಾಜ್ಯಗಳಿಗೆ ಕೃಷಿ ಉತ್ಪನ್ನ ಸಾಗಿಸಲು ಯಾವುದೇ ಅಡ್ಡಿಯಿಲ್ಲ. ಪೊಲೀಸರು ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಎಲ್ಲೂ ತಕರಾರು ಮಾಡುವಂತಿಲ್ಲ ಎಂದು ಸೂಚನೆ ನೀಡಿದ್ದೇವೆ. ಹೀಗಾಗಿ ರೈತರು ಚಿಂತಿಸುವ ಅಗತ್ಯವಿಲ್ಲ ಎಂದು ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ. 

ಹೋಂ ಕ್ವಾರಂಟೈನ್‌ ಪಾಲಿಸದ ಬಳ್ಳಾರಿ ವ್ಯಕ್ತಿ ಪೊಲೀಸರ ವಶಕ್ಕೆ

ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಇಲ್ಲಿನ ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಸಾಗಾಣಿಕೆ ಸಮಸ್ಯೆಯಾಗುತ್ತಿದೆ. ಕೃಷಿ ವೆಚ್ಚ ಹೆಚ್ಚಾಗುತ್ತಿದೆ ಎಂದು ರೈತರು ಹೇಳುತ್ತಿದ್ದು, ಬಳ್ಳಾರಿಯಲ್ಲಿಯೇ ಮಾರುಕಟ್ಟೆಆರಂಭಿಸಬೇಕು ಎಂದು ಕೇಳಿಕೊಂಡಿದ್ದಾರೆ. ಈ ಸಂಬಂಧ ಎಪಿಎಂಸಿ ಸಚಿವರು ಹಾಗೂ ಬ್ಯಾಡಗಿ ವರ್ತಕರ ಜತೆ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರೈತರ ಬೆಳೆಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರ ಹಿತ ಕಾಯುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವೂ ಆಗಿದೆ. ಕೃಷಿ ಚಟುವಟಿಕೆಗೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬಳ್ಳಾರಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೂ ಬೆಳೆಗಾರರಿಗೆ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿ ಬಳಿ ಚರ್ಚಿಸಿ ಅವರಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎಂದು ಯೋಚಿಸಲಾಗುವುದು. ಬೆಳೆಹಾನಿಗೆ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರೈತರ ಹಿತ ಕಾಯಲು ನಾವು ಬದ್ಧರಿದ್ದೇವೆ ಎಂದರು.

ಹೊರ ರಾಜ್ಯಗಳಿಂದ ಬರುವ ಕೃಷಿ ಯಂತ್ರಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

click me!