ಗಂಗಾವತಿ: 14 ಲಕ್ಷ ಮೊತ್ತದ ಬೀಜ ದಾಸ್ತಾನು ಜಪ್ತಿ

By Kannadaprabha News  |  First Published Jun 3, 2021, 3:30 PM IST

* ಪರವಾನಗಿ ಇಲ್ಲದೆ ಬಿತ್ತನೆ ಬೀಜ ಸಂಗ್ರಹ, ಕೃಷಿ ಇಲಾಖೆ ಅಧಿಕಾರಿಗಳ ದಾಳಿ
* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ
* ಬಿತ್ತನೆ ಬೀಜಗಳ ಬಗ್ಗೆ ರೈತರಿಂದ ದೂರು


ಗಂಗಾವತಿ(ಜೂ.03): ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದ ಬಳಿ ಪರವಾನಗಿ ಇಲ್ಲದೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ಮೌಲ್ಯದ ಬೀಜ ಜಪ್ತಿ ಮಾಡಿದ್ದಾರೆ.

ಬುಧವಾರ ಬೆಳಗ್ಗೆ ಮಾಹಿತಿ ಪಡೆದ ಕೊಪ್ಪಳದ ಕೃಷಿ ಇಲಾಖೆಯ ವಿಚಕ್ಷಣ ದಳದ ಸಹಾಯಕ ಕೃಷಿ ನಿರ್ದೇಶಕ ನಿಂಗಪ್ಪ ಅವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಸೀಡ್ಸ್‌ ಸೆಂಟರ್‌ ಮೇಲೆ ದಾಳಿ ನಡೆಸಲಾಯಿತು. 4 ಕ್ವಿಂಟಲ್‌ ತೊಗರಿ ಬೀಜ, 4 ಕ್ವಿಂಟಲ್‌ ಮೆಕ್ಕೆಜೋಳದ ಬೀಜ ಮತ್ತು 45 ಕ್ವಿಂಟಲ್‌ ಸೆಜ್ಜೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಂದಾಜು 14 ಲಕ್ಷ ಮೌಲ್ಯದ ದಾಸ್ತಾನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಈ ಅಂಗಡಿಯ ಮಾಲೀಕ ಶಂಕರಪ್ಪ ಮೇಟಿ ಎನ್ನುವವರ ಮೇಲೆ ದೂರು ದಾಖಲಿಸಲಾಗಿದೆ. ಶಂಕ್ರಪ್ಪ ಮೇಟಿ ಎನ್ನುವವರು ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿ ಬೀಜದ ವ್ಯಾಪಾರದ ಅಂಗಡಿಯ ಪರವಾನಗಿ ಪಡೆದು ಗಂಗಾವತಿಯಲ್ಲಿ ಮಾರಾಟ ಮಾಡುತ್ತಿದ್ದರು. ಮುದಗಲ್‌ನಲ್ಲಿ ಪರವಾನಗಿ ಪಡೆದಿರುವುದಾಗಿ ಹೇಳಿದರು. ಆದರೆ ಪರಿಶೀಲನೆ ಬಳಿಕ ಅಲ್ಲಿಯೂ ಪರವಾನಗಿ ಪಡೆದಿಲ್ಲ ಎಂಬ ಅಂಶ ತಿಳಿಯಿತು. ಹೀಗಾಗಿ ದೂರು ದಾಖಲಿಸಿದ್ದಾರೆ.

ಕೊಪ್ಪಳ: ತುರವಿಹಾಳ ಶ್ರೀಗಳು 14 ದಿನಕ್ಕೇ ಗುಣಮುಖ

ನಕಲಿಯೋ, ಅಸಲಿಯೋ?:

ಕಳೆದ ಹಲವಾರು ವರ್ಷಗಳಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ತಳಿಗಳ ಬೀಜ ಮಾರಾಟ ಮಾಡುತ್ತಿದ್ದ ಶಂಕರಪ್ಪ ಮೇಟಿ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೃಷಿ ಅಧಿಕಾರಿಗಳು, ಅವರು ಮಾರುತ್ತಿರುವ ಬಿತ್ತನೆ ಬೀಜಗಳು ಅಸಲಿಯೋ, ನಕಲಿಯೋ ಎಂದು ಪರೀಕ್ಷಿಸಲು ಬೀಜಗಳ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಗಂಗಾವತಿ ನಗರ ಸೇರಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ನಕಲಿ ಬಿತ್ತನೆ ಬೀಜಗಳ ಬಗ್ಗೆ ಕಳೆದ ವರ್ಷ ರೈತರಿಂದ ದೂರು ಬಂದಿತ್ತು. ಈಗ ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ಪರವಾನಗಿ ಇಲ್ಲದೆ ವಿವಿಧ ತಳಿಗಳ ಬೀಜಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರಿಂದ ಇದರ ಹಿಂದೆ ದೊಡ್ಡ ಜಾಲ ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡುವರು ಬಹಳಷ್ಟು ಅಂಗಡಿ ಮಾಲೀಕರು ಪರವಾನಗಿ ಪಡೆದಿಲ್ಲ, ಅಂಗಡಿಗಳಲ್ಲಿ ದರ ಪಟ್ಟಿ ಅಳವಡಿಸಿಲ್ಲ, ರಶೀದಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದು ತಿಂಗಳು ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು. ಈಗ ಪರವಾನಗಿ ಇಲ್ಲದೆ ಮಾರಾಟ ಮಾಡುವ ಅಂಗಡಿ, ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ಕೆ. ಕುಮಾರಸ್ವಾಮಿ, ಸಂತೋಷ ಪಟ್ಟದಕಲ್ಲು ದಾಳಿಯ ನೇತೃತ್ವ ವಹಿಸಿದ್ದರು.
 

click me!