ಮತ್ತೊಮ್ಮೆ ಮಂಡ್ಯ ಕಾಂಗ್ರೆಸ್ ನಲ್ಲಿ ಒಳಜಗಳ ಸ್ಫೋಟ

By Kannadaprabha NewsFirst Published Jul 16, 2018, 10:48 AM IST
Highlights

ಮತ್ತೊಮ್ಮೆ ಮಂಡ್ಯದ ಕಾಂಗ್ರೆಸ್ ನಾಯಕರ ನಡುವೆ ಒಳಜಗಳ ಸ್ಫೋಟವಾಗಿದೆ. ಕಾಂಗ್ರೆಸ್ ನಾಯಕರ ನಡುವೆಯೇ ಕಿತ್ತಾಟ ನಡೆದಿದ್ದು, ಇದರಿಂದ ಬೇಸತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರು. 

ಮಂಡ್ಯ: ಜಿಲ್ಲಾ ಕಾಂಗ್ರೆಸ್  ಕಾರ್ಯಕರ್ತರಲ್ಲಿ ಉಂಟಾದ ಕಚ್ಚಾಟ, ಗದ್ದಲದಿಂದ ಬೇಸತ್ತು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಾರಂಭವನ್ನೇ ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದ ಘಟನೆ ಭಾನುವಾರ ನಗರದಲ್ಲಿ ನಡೆಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ದಿನೇಶ್ ಗುಂಡೂರಾವ್ ಸಮ್ಮುಖದಲ್ಲೇ ಕಾರ‌್ಯಕರ್ತರ ಕಚ್ಚಾಟ, ಗುದ್ದಾಟ ನಡೆಯಿತು.

ಇದರಿಂದ ಬೇಸತ್ತ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆಯಿಂದ ಹೊರ ನಡೆದರು. ಸಭೆ ಆರಂಭವಾಗಿ ಕೆಪಿಸಿಸಿ ಅಧ್ಯಕ್ಷರು ಮಾತನಾಡುತ್ತಿದ್ದ ವೇಳೆ ಪಕ್ಷ ಕಾರ‌್ಯಕರ್ತನೊಬ್ಬ ಎದ್ದುನಿಂತು, ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್ ಅವರು ಸೋತ ನಂತರ ಕ್ಷೇತ್ರ ಪ್ರವಾಸ ನಡೆಸಿ  ಕಾರ್ಯಕರ್ತರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿಲ್ಲ. 

ಅವರು ಚುನಾವಣೆ ವೇಳೆ ಸರಿಯಾಗಿ ಕೆಲಸವನ್ನೂ ಮಾಡಲಿಲ್ಲ. ಇವರನ್ನು ನಂಬಿದ್ದರಿಂದ ಊರಿನಲ್ಲಿ ತಲೆ ತಗ್ಗಿಸಿ ನಡೆಯುವಂತಾಗಿದೆ ಎಂದು ಕಿಡಿಕಾರಿದರು. ಈ ಹೇಳಿಕೆಯಿಂದ ಕೆರಳಿದ ಗಣಿಗ ರವಿ ಬೆಂಬಲಿಗರು ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಗುಂಪಿನ ನಡುವೆ ಗುದ್ದಾಟ, ಪರಸ್ಪರ ತಳ್ಳಾಟ ಆರಂಭ ವಾಯಿತು. ಮಂಡ್ಯದಲ್ಲಿ ಈ ರೀತಿಯ ಗದ್ದಲ ಇತ್ತೀಚೆಗೆ ಮಾಮೂಲಿ ಎಂಬಂತಾಗಿದೆ.

click me!