ಜೋಗ್ ಪಾಲ್ಸ್, ಸಕ್ರೆಬೈಲು ಆನೆ ಬಿಡಾರ, ತ್ಯಾವರೆಕೊಪ್ಪ ಸಿಂಹಧಾಮ ಡೋರ್ ಓಪನ್

By Kannadaprabha NewsFirst Published Jun 8, 2020, 10:34 AM IST
Highlights

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಸೋಮವಾರ(ಜೂ.08)ದಿಂದ ಪ್ರವಾಸೋದ್ಯಮ ತಾಣಗಳ ಬಾಗಿಲುಗಳು ತೆರೆದಿವೆ. ಶಿವಮೊಗ್ಗದ ಪ್ರಮುಖ ಪ್ರವಾಸಿ ತಾಣಗಳಾದ ಜೋಗ್ ಜಲಪಾತ, ತ್ಯಾವರೆಕೊಪ್ಪ ಸಿಂಹಧಾಮ, ಸಕ್ರೇಬೈಲ್ ಆನೆಬಿಡಾರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜೂ.08): ಸೋಮವಾರದಿಂದ ದೇವಸ್ಥಾನಗಳ ರೀತಿಯಲ್ಲಿಯೇ ಎಲ್ಲ ಪ್ರವಾಸಿ ಕೇಂದ್ರಗಳು ಕೂಡ ಪ್ರವಾಸಿಗರಿಗೆ ತೆರೆಯಲಿದ್ದು, ಇಲ್ಲಿ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿನ ತ್ಯಾವರೆಕೊಪ್ಪ ಸಿಂಹಧಾಮ, ಆನೆ ಬಿಡಾರ ಬಹುಮುಖ್ಯ ಪ್ರವಾಸಿ ಕೇಂದ್ರವಾಗಿದೆ. ಇದೇ ರೀತಿ ಜೋಗ, ಆಗುಂಬೆ, ಕೊಡಚಾದ್ರಿ, ಕುಂದಾದ್ರಿ, ಬಳ್ಳಿಗಾವೆ ಸೇರಿದಂತೆ ಹಲವಾರು ಪ್ರವಾಸಿ ಕ್ಷೇತ್ರಗಳಿದ್ದು, ಬಳ್ಳಿಗಾವೆ ಸೇರಿದಂತೆ ಹಲವಾರು ಪ್ರವಾಸಿ ಕೇಂದ್ರಗಳು ದೇವಸ್ಥಾನದ ವ್ಯಾಪ್ತಿಯಲ್ಲಿ ಬರಲಿದ್ದು, ಅಲ್ಲಿ ಇತರೆ ದೇವಸ್ಥಾನಗಳಂತೆ ಸಿದ್ಧತೆಗಳು ನಡೆದಿವೆ.

ಇತ್ತ ಜೋಗದಲ್ಲಿ ನೀರಿಲ್ಲದೆ ಇರುವುದರಿಂದ, ಆಗುಂಬೆಯಲ್ಲಿ ಮೋಡದ ವಾತಾವರಣದ ಕಾರಣ ಪ್ರವಾಸಿಗರು ಸಹಜವಾಗಿಯೇ ಇರುವುದಿಲ್ಲ. ಉಳಿದಂತೆ ಕುಪ್ಪಳ್ಳಿ, ಸಕ್ರೆಬೈಲು ಆನೆ ಬಿಡಾರ, ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಸೋಮವಾರದಿಂದ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದು, ಇಲ್ಲಿ ಎಲ್ಲ ರೀತಿಯ ಸಿದ್ದತೆ ನಡೆದಿದೆ.

ತ್ಯಾವರೆಕೊಪ್ಪ ಸಿಂಹಧಾಮ:

ಕಳೆದ ಎರಡೂವರೆ ತಿಂಗಳಿಂದ ಮುಚ್ಚಿರುವ ತ್ಯಾವರೆಕೊಪ್ಪ ಸಿಂಹಧಾಮ ಲಾಕ್‌ಡೌನ್‌ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಮುಖ್ಯ ದ್ವಾರದ ಬಳಿಯೇ ಎಲ್ಲ ಪ್ರವಾಸಿಗರಿಗೂ ಸ್ಯಾನಿಟೈಸೇಶನ್‌ ಮಾಡಲಾಗುವುದು. ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದ್ದು, ಆಕಸ್ಮಿಕವಾಗಿ ಮಾಸ್ಕ್‌ ಧರಿಸದೆ ಬಂದಿದ್ದರೆ ಅಲ್ಲಿಯೇ ಮಾಸ್ಕ್‌ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.

ಒಳಗೆ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಹುಲಿ, ಸಿಂಹದ ಆವರಣದ ಒಳಗೆ ಪ್ರವಾಸಿಗರನ್ನು ಕರೆದೊಯ್ಯುವ ವಾಹನವನ್ನು ಈಗಾಗಲೇ ಸ್ಯಾನಿಟೈಸೇಶನ್‌ ಮಾಡಿದ್ದು, ಪ್ರತಿ ದಿನವೂ ಆಗಾಗ್ಗೆ ಸ್ಯಾನಿಟೈಸೇಶನ್‌ ಮಾಡುತ್ತಿರಲಾಗುತ್ತದೆ. ಸಿಂಹಧಾಮದ ಗೇಟ್‌ನಿಂದ ಪ್ರವೇಶ ಪಡೆಯುವ ಯಾವುದೇ ವಾಹನವಿದ್ದರೂ ರಾಸಾಯನಿಕ ತುಂಬಿದ ಹೊಂಡವೊಂದರ ಮೂಲಕವೇ ಹಾದು ಹೋಗಬೇಕು. ಈ ರೀತಿಯ ವ್ಯವಸ್ಥೆ ಇಲ್ಲಿ ಮಾಡಲಾಗಿದೆ.

ಪ್ರತಿ ಪ್ರವಾಸಿಗರ ದೇಹದ ಉಷ್ಣಾಂಶ ಪರೀಕ್ಷೆ ನಡೆಸಲಾಗುತ್ತದೆ. ಪ್ರವಾಸಿಗರ ಮೇಲೆ ನಿಗಾ ಇಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಸಿಬ್ಬಂದಿಗಳ ಕಾರ್ಯವೈಖರಿಯನ್ನು ನೋಡಲು ನೂಡಲ್‌ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ತ್ಯಾವರೆಕೊಪ್ಪ ಸಿಂಹಧಾಮದ ನಿರ್ದೇಶಕ ಮುಕುಂದ್‌ ತಿಳಿಸಿದ್ದಾರೆ. ಅಲ್ಲಲ್ಲಿ ಜಾಗೃತಿ ಮೂಡಿಸುವ ಬ್ಯಾನರ್‌ ಅಳವಡಿಸಲಾಗಿದೆ. ಒಳಾವರಣ ಪ್ರವೇಶಿಸುವ ಬಸ್ಸುಗಳಲ್ಲಿ ಶೇ. 50 ರಷ್ಟುಮಾತ್ರ ಪ್ರವಾಸಿಗರಿರುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇವರ ದರ್ಶನ ಭಾಗ್ಯ..!

ಸಕ್ಕರೆ ಬೈಲು ಆನೆ ಬಿಡಾರದಲ್ಲಿ ಸೋಮವಾರದಿಂದ ಪ್ರವಾಸಿಗರನ್ನು ಒಳಗೆ ಬಿಟ್ಟುಕೊಳ್ಳಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಸ್ಯಾನಿಟೈಸೇಶನ್‌, ಮಾಸ್ಕ್‌ ಕಡ್ಡಾಯ,ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ.

ಕುಪ್ಪಳ್ಳಿ ತೆರೆಯೊಲ್ಲ:

ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ ಸೋಮವಾರ ತೆರೆಯುವ ಸಾಧ್ಯತೆ ಇಲ್ಲವಾಗಿದೆ. ಇದುವರೆಗೆ ಪ್ರತಿಷ್ಠಾನದಿಂದ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಇದುವರೆಗೆ ಯಾವುದೇ ಸಿದ್ಧತೆ ನಡೆಸಿಲ್ಲ ಎಂದು ಕುಪ್ಪಳ್ಳಿಯ ಮೂಲಗಳು ತಿಳಿಸಿವೆ. ಭಾನುವಾರ ಸುಮಾರು 200 ಜನ ಪ್ರವಾಸಿಗರು ಆಗಮಿಸಿದ್ದು, ಅವರನ್ನು ವಾಪಸ್ಸು ಕಳುಹಿಸಲಾಗಿದೆ.
 

click me!