ಭಾರಿ ಮಳೆಯಿಂದಾಗಿ ಪಟ್ಟಣದ ಯಲ್ಲಮ್ಮನ ತೋಟದ ಕೆರೆ, ನೆಗಳೂರ ಕೆರೆ ಸೇರಿದಂತೆ ಅನೇಕ ಹಳ್ಳಗಳು ಮೈದುಂಬಿ ಹರಿಯುತ್ತಿವೆ| 27 ವರ್ಷಗಳ ಬಳಿಕ ನೆಗಳೂರಿನ ಸಣ್ಣ ಕೆರೆ ತುಂಬಿದ್ದು, ನೆಗಳೂರಿನ ಜನತೆ ಸಂಸತಗೊಂಡಿದ್ದು, ಕೋಡಿ ಬಿದ್ದಿರುವ ಕೆರೆಯನ್ನು ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ| ಕಳೆದ 2 ವರ್ಷಗಳಿಂದ ತುಂಬದೇ ಇದ್ದ ಪಟ್ಟಣದ ಯಲ್ಲಮ್ಮನ ತೋಟದ ಕೆರೆ ಸಹ ತುಂಬಿದೆ|
ಗುತ್ತಲ(ಅ.7): ಭಾರಿ ಮಳೆಯಿಂದಾಗಿ ಪಟ್ಟಣದ ಯಲ್ಲಮ್ಮನ ತೋಟದ ಕೆರೆ ಹಾಗೂ ತುಂಬಿದ್ದು, ನೆಗಳೂರ ಕೆರೆ, ಅನೇಕ ಹಳ್ಳಗಳು ಭಾನುವಾರ ಮೈದುಂಬಿ ಹರಿಯುತ್ತಿವೆ.
ಶನಿವಾರ ಹಾಗೂ ಭಾನುವಾರ ಸುರಿದ ಮಳೆಯಿಂದಾಗಿ 27 ವರ್ಷಗಳ ಬಳಿಕ ನೆಗಳೂರಿನ ಸಣ್ಣ ಕೆರೆ ತುಂಬಿದ್ದು, ನೆಗಳೂರಿನ ಜನತೆ ಸಂಸತಗೊಂಡಿದ್ದು, ಕೋಡಿ ಬಿದ್ದಿರುವ ಕೆರೆಯನ್ನು ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಕಳೆದ 2ವರ್ಷಗಳಿಂದ ತುಂಬದೇ ಇದ್ದ ಪಟ್ಟಣದ ಯಲ್ಲಮ್ಮನ ತೋಟದ ಕೆರೆ ಸಹ ತುಂಬಿದೆ. ಕುಂಬಾರಗಟ್ಟಿಹಳ್ಳ ಸಹ ಮೈದುಂಬಿ ಹರಿಯುತ್ತಿದೆ.
ಮನೆಗಳಿಗೆ ನುಗ್ಗಿದ ಹಳ್ಳದ ನೀರು
ಹಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ಪಟ್ಟಣದ 10ನೇ ವಾರ್ಡ್‌ನಲ್ಲಿನ ಹಾವೇರಿ ರಸ್ತೆಯ ಹತ್ತಿರದ ನೂತನ ಬಡಾವಣೆಯ ಮನೆಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯಲ್ಲಿನ ನೀರನ್ನು ಹೊರ ಹಾಕಲು ಸಹ ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಹಳ್ಳದ ನೀರು ಹಾವೇರಿ ರಸ್ತೆಯ ಮೇಲೆ ಹರಿದಾಡಿದೆ. ಕಚ್ಚಾ ಚರಂಡಿಗಳ ನೀರು ಸಹ ರಸ್ತೆ ಮೇಲೆ ಹರಿದು ಆ ಪ್ರದೇಶದಲ್ಲಿ ದುರ್ನಾತದ ವಾಸನೆಗೆ ಅಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ.
ಶನಿವಾರ ಸುರಿದ ಮಳೆಗೆ ತತ್ತರಿದ್ದ ರೈತರು ಭಾನುವಾರ ಬೆಳಗಿನ ಜಾವ ಸುರಿದ ಮಳೆಗೆ ಬೆಳೆದುನಿಂತ ಮೆಕ್ಕೆಜೋಳ, ಮೆಣಸಿಕಾಯಿ, ಹತ್ತಿ ಸೇರಿದಂತೆ ತರಕಾರಿ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಮಳೆಗೆ ಕೆಲ ಮನೆಗಳ ಭಾಗಶಃ ಬಿದ್ದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಆತಂಕದಿಂದ ಮನೆಯಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದ್ದು ಕಳೆದ 2 ತಿಂಗಳ ಹಿಂದೆ ಮನೆ ಬಿದ್ದು ಹಾನಿ ಅನುಭವಿಸಿದವರಿಗೆ ಸರ್ಕಾರದ ಹಣ ಇನ್ನೂ ಬಂದಿಲ್ಲ. ಆಗಲೇ ಮತ್ತೇ ಮನೆಗಳು ಬಿದ್ದಿದ್ದು, ಕಳೆದ ಬಾರಿ ಬಿದ್ದ ಮನೆಗಳು ಭಾನುವಾರ ಮತ್ತೇ ಹಾನಿಗೆ ಒಳಗಾಗಿವೆ.
ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದ ಪರಿಣಾಮ ಹಾವನೂರ- ಹುಳ್ಯಾಳ ರಸ್ತೆಯಲ್ಲಿ ಅನೇಕ ವಿದ್ಯುತ್ ಕಂಬಗಳು ಭಾಗಿದ್ದು ವಿದ್ಯುತ್ ವ್ಯತ್ಯಯವಾದ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು.
ತೀವ್ರ ಮಳೆಯಿಂದಾಗಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿನ ವಿದ್ಯುತ್ ಪರಿವರ್ತಕ ಸುಟ್ಟಕಾರಣ ವಿದ್ಯುತ್ ವ್ಯತ್ಯಯವಾಗಿ ಸಾರ್ವಜನಿಕರ ಪರದಾಡಿದರು.
ಈ ಬಗ್ಗೆ ಮಾತನಾಡಿದ ನೆಗಳೂರ ಗ್ರಾಮಸ್ಥ ರವಿ ಬಾಲಣ್ಣನವರ ಅವರು, ನೆಗಳೂರಿನ ಸಣ್ಣ ಕೆರೆ ಸುಮಾರು 27 ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿರುವುದು ಅತ್ಯಂತ ಸಂತಸವಾಗಿದೆ. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರಿಗೆ ಸಹಾಯವಾಗುವುದು ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಮನೆ ಬಿದ್ದು, ಮನೆಯಲ್ಲಿದ್ದ ಸಾಮಗ್ರಿ, ಕೋಳಿಗಳು ನೀರಲ್ಲಿ ಕೊಚ್ಚಿ ಹೋಗ್ಯಾವು, ನಮ್ಮ ಕಷ್ಟ ಕೇಳಾಕ ಯಾವ ಅಧಿಕಾರಿ, ವಾರ್ಡ್ ಮೆಂಬರ್ ಬಂದಿಲ್ಲ, ನಾವು ವೋಟು ಹಾಕಾಕ ಮಾತ್ರ ಬೇಕು ಇವರಿಗೆ ಎಂದು ವಡ್ಡರ ಪಟ್ಟಣದ 10ನೇ ವಾರ್ಡಿನ ನಿವಾಸಿ ಶಾಂತಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಷ್ಟಪಟ್ಟು ಕಾಲುವೆ ನೀರು ಹಾಯಿಸಿ, ಸಾಲ ಮಾಡಿ ಬೀಜ ಗೊಬ್ಬರ ಹಾಕಿದ್ದ ಮೆಕ್ಕೆಜೋಳ ಭಾರಿ ಮಳೆಯ ಅವಕೃಪೆಯಿಂದ ಬೆಳೆ ನೆಲಕ್ಕೆ ಬಿದ್ದಿದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂಗ್ ಆಗೇತಿ, ಹೊಲ ನೋಡಿದರ ಏನ್ ಮಾಡಬೇಕು ಅಂತಾ ತಿಳಿವಲ್ದು ಅಂತ ರೈತ ಮಂಜುನಾಥ ಅವರು ಹೇಳಿದ್ದಾರೆ.