ಕೆ.ಆರ್.ಮಾರುಕಟ್ಟೆ ಬಿಡಿಗಾಸು ಬಾಡಿಗೆ ಪರಿಷ್ಕರಿಸಿ ಹೊರಡಿಸಿದ್ದ ಆದೇಶ ಬರೋಬ್ಬರಿ 12 ವರ್ಷಗಳ ಬಳಿಕ ಜಾರಿ!

Gowthami K   | Kannada Prabha
Published : Jul 10, 2026, 09:25 AM IST
KR Market

ಸಾರಾಂಶ

ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಮಳಿಗೆಗಳ ಬಾಡಿಗೆಯನ್ನು ಪರಿಷ್ಕರಿಸಿ 2014ರಲ್ಲಿ ಹೊರಡಿಸಿದ್ದ ಆದೇಶವು ಹೈಕೋರ್ಟ್ ತೀರ್ಪಿನ ನಂತರ ಇದೀಗ ಜಾರಿಯಾಗುತ್ತಿದೆ. ಇದರಿಂದಾಗಿ, ವ್ಯಾಪಾರಿಗಳು ಪ್ರತಿ ಚದರಡಿಗೆ ಸರಾಸರಿ 98 ರು. ನಂತೆ ಪರಿಷ್ಕೃತ ಬಾಡಿಗೆಯನ್ನು 2014ರಿಂದಲೇ ಬಡ್ಡಿ ಸಮೇತ ಪಾವತಿಸಬೇಕಾಗಿದ್ದು, ಇದು ಪಾಲಿಕೆಯ ಆದಾಯವನ್ನು ಹೆಚ್ಚಿಸಲಿದೆ.

ಬೆಂಗಳೂರು: ಕೋಟ್ಯಂತರ ರು. ವಹಿವಾಟು ನಡೆಯುವ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಕೆ.ಆರ್. ಮಾರುಕಟ್ಟೆಯಲ್ಲಿನ ಮಳಿಗೆಗಳಿಗೆ ವಿಧಿಸಲಾಗುತ್ತಿದ್ದ ಬಿಡಿಗಾಸು ಬಾಡಿಗೆಯನ್ನು ಪರಿಷ್ಕರಿಸಿ 2014ರಲ್ಲಿ ಹೊರಡಿಸಿದ್ದ ಆದೇಶ ಬರೋಬ್ಬರಿ 12 ವರ್ಷಗಳ ಬಳಿಕ ಜಾರಿಯಾಗುತ್ತಿದೆ.

ಪ್ರತಿ ಚದರಡಿಗೆ 98 ರು. ಬಾಡಿಗೆ ನಿಗದಿಪಡಿಸಿ ಹಿಂದಿನ ಬಿಬಿಎಂಪಿ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಇತ್ಯರ್ಥವಾದ ಹಿನ್ನೆಲೆಯಲ್ಲಿ ಜಿಬಿಎ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಅವರು ಗುರುವಾರ ಜಾರಿಗೊಳಿಸಿ ಆದೇಶಿದ್ದಾರೆ. ಇನ್ನು ಮುಂದೆ ಮಳಿಗೆ ಬಾಡಿಗೆದಾರರು ಹೊಸ ದರದಲ್ಲಿ ಬಾಡಿಗೆ ಪಾವತಿಸಬೇಕು.

ಕೆ.ಆರ್. ಮಾರುಕಟ್ಟೆ 7.96 ಎಕರೆ ವಿಸ್ತೀರ್ಣ ಹೊಂದಿದ್ದು ಈ ಪೈಕಿ 3.09 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ, ವಿವಿಧ ಗಾತ್ರದ 1269 ಮಳಿಗೆಗಳನ್ನು ನಿರ್ಮಿಸಲಾಗಿದೆ. 2014ರವರೆಗೂ ಮಳಿಗೆಗಳಿಗೆ ಪ್ರತಿ ಚದರಡಿಗೆ 25 ರು.ನಂತೆ ಬಾಡಿಗೆ ಪಾವತಿ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ 2014ರಲ್ಲಿ ಅಂದಿನ ಬಿಬಿಎಂಪಿ ಆಯುಕ್ತರು ಬಾಡಿಗೆ ಪರಿಷ್ಕರಿಸುವ ಸಂಬಂಧ ‘ಚಾರ್ಟರ್ಡ್ ಎಂಜಿನಿಯರ್ ಮತ್ತು ರಿಜಿಸ್ಟ್ರಾರ್ಡ್ ವ್ಯಾಲ್ಯುವರ್’ ಮೂಲಕ ವೈಜ್ಞಾನಿಕವಾಗಿ ಬಾಡಿಗೆ ನಿಗದಿಪಡಿಸಲು ವರದಿಯನ್ನು ಪಡೆದುಕೊಂಡಿದ್ದರು. ಮೌಲ್ಯಮಾಪಕರು ಅಧ್ಯಯನ ನಡೆಸಿ 2014ರ ಅಕ್ಟೋಬರ್‌ನಲ್ಲಿ ಪ್ರತಿ ಚದರಡಿಗೆ ಸರಾಸರಿ 98 ರು. ಬಾಡಿಗೆ ಸಂಗ್ರಹಿಸಬಹುದು ಎಂದು ವರದಿ ನೀಡಿದ್ದರು. ಆದರೆ, ಇದನ್ನು ಪ್ರಶ್ನಿಸಿ ವ್ಯಾಪಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇತ್ತೀಚೆಗೆ ಪ್ರಕರಣ ಇತ್ಯರ್ಥಗೊಳಿಸಿದ ಹೈಕೋರ್ಟ್‌ ಬಾಡಿಗೆ ದರ ನಿಗದಿಯ ನಿರ್ಧಾರವನ್ನು ಆಯುಕ್ತರೇ ತೆಗೆದುಕೊಳ್ಳಬಹುದು ಎಂದು ಆದೇಶಿಸಿತ್ತು.

ಕೋಟ್ಯಂತರ ರು.  ಬಾಡಿಗೆ ಬಾಕಿ 

ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ನೂರಾರು ವ್ಯಾಪಾರಿಗಳು ಹತ್ತಾರು ವರ್ಷಗಳಿಂದ ಬಾಡಿಗೆ ಕಟ್ಟಿಲ್ಲ. ಅನೇಕರು ತಮ್ಮ ಹೆಸರಿಗೆ ಇರುವ ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ಕೊಟ್ಟು ಲಕ್ಷಾಂತರ ರು. ಆದಾಯ ಗಳಿಸುತ್ತಿದ್ದಾರೆ. ಆದರೆ, ಪಾಲಿಕೆಗೆ ಒಂದೇ ಒಂದು ನಯಾ ಪೈಸೆ ಆದಾಯ ಬರುತ್ತಿಲ್ಲ. ಈಗ ಕೇಂದ್ರ ನಗರ ಪಾಲಿಕೆ ಆಯುಕ್ತರು ಹೊರಡಿಸಿರುವ ಬಾಡಿಗೆ ಪರಿಷ್ಕರಣೆ ಆದೇಶ ಜಾರಿಯಾದರೆ ಪಾಲಿಕೆಗೆ ಕೋಟ್ಯಂತರ ರು. ಆದಾಯ ಬರುತ್ತದೆ.

  • ಬಾಡಿಗೆ ದರ (ಪ್ರತಿ ಚದರಡಿ)
  • ಅಪ್ಪರ್ ಬೇಸ್ಮೆಂಟ್ 122.50 ರು.
  • ಗ್ರೌಂಡ್ ಫ್ಲೋರ್ 122.50 ರು.
  • ಮೊದಲನೇ ಮಹಡಿ 83.50 ರು.
  • 2ನೇ ಮಹಡಿ 68.60 ರು.

ಬಾಡಿಗೆ ಪರಿಷ್ಕರಣೆ ಮಾಡಿ 2014ರಲ್ಲಿ ಹೊರಡಿಸಿದ್ದ ಆದೇಶ ಜಾರಿಗೊಳಿಸಲಾಗಿದೆ. ಹೀಗಾಗಿ, ಬಾಡಿಗೆದಾರರು 2014ರಿಂದ ಈವರೆಗೆ ಪರಿಷ್ಕೃತ ಬಾಡಿಗೆಯನ್ನು ಬಡ್ಡಿ ಸಮೇತ ಪಾಲಿಕೆಗೆ ಪಾವತಿಸಬೇಕು.

 ಜಿ. ಜಗದೀಶ್,  ಆಯುಕ್ತ, ಕೇಂದ್ರ ನಗರ ಪಾಲಿಕೆ

PREV
Read more Articles on
click me!

Recommended Stories

ಮೈಸೂರಲ್ಲಿ ಕೆಸರು ಗದ್ದೆಯೂ ಇಲ್ಲ, ಕೋಣಗಳೂ ಇಲ್ಲ: ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ!
ರಾಜ್ಯದ ರೈತರ ಸಾಲ ಕೇಂದ್ರವೇ ಮನ್ನಾ ಮಾಡಲಿ: ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ