ವಿಶ್ವಕರ್ಮ ಸಮಾಜ ಎಸ್‌ಟಿಗೆ ಸೇರಿಸಿ : ಕೆ.ಪಿ. ನಂಜುಂಡಿ

By Kannadaprabha News  |  First Published Feb 28, 2023, 6:41 AM IST

ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಿ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನುಕೂಲ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಆಗ್ರಹಿಸಿದರು.


  ಹಗರಿಬೊಮ್ಮನಹಳ್ಳಿ  :  ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಿ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನುಕೂಲ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಆಗ್ರಹಿಸಿದರು.

ಸೋಮವಾರ ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ 25ನೇ ವರ್ಷದ ಮೌನೇಶ್ವರ ಮಹೋತ್ಸವ ಹಾಗೂ 121ನೇ ವರ್ಷದ ವಿಶ್ವಕರ್ಮ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ವಿಶ್ವಕರ್ಮ ಸಮುದಾಯದವರು ಬಡವರು- ಶ್ರೀಮಂತರು ಎಂಬ ತಾರತಮ್ಯ ಮಾಡದೇ ಕುಲಕಸುಬನ್ನು ನಿರ್ವಹಿಸುತ್ತಾ ಬಂದಿದ್ದಾರೆ. ವಿಶ್ವಕರ್ಮ ಸಮಾಜ 41 ಉಪಪಂಗಡಗಳನ್ನು ಹೊಂದಿದೆ. ದೇಶದಲ್ಲಿ 11 ಕೋಟಿ ಜನಸಂಖ್ಯೆ, ರಾಜ್ಯದಲ್ಲಿ 30- 40 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮಾಜ, ಇದುವರೆಗೂ ಒಬ್ಬ ಶಾಸಕರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿಲ್ಲ ಎಂದರು.

ಹಂಪಿ, ಬೇಲೂರು, ಹಳೇಬೀಡು ಮುಂತಾದೆಡೆ ಶಿಲ್ಪಕಲೆ ನಿರ್ಮಿಸಿ ಪ್ರಖ್ಯಾತಿ ಹೊಂದಿರುವ ಸಮಾಜವನ್ನು ಗುರುತಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಉತ್ಸವಗಳಲ್ಲಿ ವಿಶ್ವಕರ್ಮ ಸಮುದಾಯವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿ. 1972ರಲ್ಲಿ ದೇವರಾಜ ಅರಸು ಅವರು ವಿಶ್ವಕರ್ಮ ಸಮಾಜವನ್ನು 132 ಜಾತಿಗಳನ್ನು ಹೊಂದಿರುವ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿದ್ದರು. ವಿಶ್ವಕರ್ಮ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸರ್ಕಾರವನ್ನು ಹೋರಾಟದ ಮೂಲಕ ಎಚ್ಚರಿಸಬೇಕಿದೆ ಎಂದರು.

ಮಾಜಿ ಶಾಸಕ ನೇಮರಾಜನಾಯ್ಕ ಮಾತನಾಡಿ, ವಿಶ್ವಕರ್ಮ ಸಮಾಜದ ಜನತೆ ಶಿಲ್ಪಕಲೆಯಲ್ಲಿ ನಿಪುಣರು. ಸಮಾಜದ ಅಭಿವೃದ್ಧಿಗೆ ಪೂರಕ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.

ಸಮಾಜದ ಗುರುನಾಥ ಸ್ವಾಮೀಜಿ, ಬಸವರಾಜ ಪುರೋಹಿತರು ಸಾನ್ನಿಧ್ಯ ವಹಿಸಿದ್ದರು. ಶಿಕ್ಷಕರಾದ ಮೌನೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ವಟುಗಳಿಗೆ ಉಪನಯನ, ಮೌನೇಶ್ವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಿತು.

ವಿಶ್ವಕರ್ಮ ಸಮಾಜದ ಬ್ರಹ್ಮಗಣೇಶ್‌, ತಾಲೂಕು ಅಧ್ಯಕ್ಷ ಬಸವರಾಜ ಬಡಿಗೇರ್‌, ಬಿ.ಜಿ. ಬಡಿಗೇರ್‌, ಸಿ.ಎಚ್‌. ಸಿದ್ದರಾಜು, ಎ. ರಾಘವೇಂದ್ರ, ಮಂಜುನಾಥ, ಕೆ. ಧನುಂಜಯ, ಬಸವರಾಜ ಮಾಲವಿ, ಮೌನೇಶ್‌, ಕೊಟ್ರೇಶ್‌  ಆಚಾರ್ಯ ಇತರರಿದ್ದರು.

click me!