ಸ್ವಾವಲಂಬನೆಯ ಸಂಕೇತವಾದ ಚರಕ ಪರಂಪರೆ ಉಳಿಸಲು ನಟ ಶಿವರಾಜಕುಮಾರ್ ಕರೆ

By Kannadaprabha News  |  First Published Oct 3, 2023, 6:46 AM IST

ಸ್ವಾವಲಂಬನೆಯ ಸಂಕೇತವಾದ ಚರಕ ಪರಂಪರೆಯನ್ನು ನಾವೆಲ್ಲರೂ ಉಳಿಸಬೇಕು ಎಂದು ನಟ ಡಾ. ಶಿವರಾಜಕುಮಾರ್ ಕರೆ ನೀಡಿದರು.


 ಮೈಸೂರು : ಸ್ವಾವಲಂಬನೆಯ ಸಂಕೇತವಾದ ಚರಕ ಪರಂಪರೆಯನ್ನು ನಾವೆಲ್ಲರೂ ಉಳಿಸಬೇಕು ಎಂದು ನಟ ಡಾ. ಶಿವರಾಜಕುಮಾರ್ ಕರೆ ನೀಡಿದರು.

ನಗರದ ಶಕ್ತಿಧಾಮ ಟ್ರಸ್ಟ್ ಶಕ್ತಿಧಾಮ ವಿದ್ಯಾಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಶಕ್ತಿಧಾಮದ ಮಕ್ಕಳು ಚರಕದಿಂದ ತೆಗೆದಿದ್ದ ನೂಲಿನಿಂದ ತಯಾರಿಸಿದ ಖಾದಿ ಬಟ್ಟೆಯನ್ನು ಅವರು ಸ್ವೀಕರಿಸಿ ಮಾತನಾಡಿದರು.

Latest Videos

undefined

ಗಾಂಧಿ ಎಂದರೆ ಚರಕ ನೆನಪಾಗುತ್ತದೆ. ಚರಕ ಕೇವಲ ನೆನಪಾಗಬಾರದು. ಸ್ವಾವಲಂಬನೆಯ ಸಂಕೇತವಾದ ಆ ಪರಂಪರೆಯನ್ನು ನಾವೆಲ್ಲರೂ ಉಳಿಸಬೇಕು. ನಮ್ಮ ಶಾಲೆಯ ಮಕ್ಕಳ ಸಾಧನೆ, ಗಾಂಧಿಯನ್ನು ಅರ್ಥೈಸಿಕೊಂಡಿರುವ ಮಾರ್ಗ ಖುಷಿ ನೀಡಿದೆ. ನಟ ಕೆ.ಜೆ. ಸಚ್ಚಿದಾನಂದ ಅವರು ಚರಕದ ಮೂಲಕ ನಮ್ಮ ಮಕ್ಕಳಿಗೆ ಒಳ್ಳೆಯ ದಾರಿ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಂದೆ– ತಾಯಿ ಶಕ್ತಿಧಾಮದ ಮೇಲಿಟ್ಟದ್ದ ಕನಸು, ಬೇರೆ ರೂಪವನ್ನೇ ಈ ಗಾಂಧಿ ಜಯಂತಿಯಂದು ಪಡೆದಿದೆ. ಮಕ್ಕಳಲ್ಲಿದ್ದ ಆತ್ಮವಿಶ್ವಾಸ, ಕೌಶಲವನ್ನು ಪರಿಚಯಿಸಿದೆ. ವ್ಯಕ್ತಿತ್ವ ರೂಪಿಸಿಕೊಳ್ಳುವ, ಸಾಧನೆ ಮಾಡುವ ಶಕ್ತಿ ಹಾಗೂ ಪ್ರೀತಿಯು ನಮ್ಮ ಮಕ್ಕಳಿಗೆ ಎಲ್ಲರಿಂದಲೂ ಬರಲಿ ಎಂದರು.

ಸಂತ ಕಬೀರ ಪಾತ್ರವನ್ನು ಡಾ. ರಾಜಕುಮಾರ್ ಮಾಡಿದ್ದರು. ನಾನು ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟಿಸಿದ್ದೆ. ನೇಯ್ಗೆಯಿಂದ ಸಂಪಾದನೆಯಾಗುತ್ತದೆ ಎಂಬುದಕ್ಕಿಂತ ನೋವನ್ನು ಕಳೆಯುತ್ತೇವೆ. ನಾವು ತೆಗೆದ ನೂಲು ಮತ್ತೊಬ್ಬರಿಗೆ ಉದ್ಯೋಗ ನೀಡುತ್ತದೆ ಎಂದರು.

ಜನಪದ ಸೇವಾ ಟ್ರಸ್ಟ್ ಸಂತೋಷ್ ಕೌಲಗಿ ಮಾತನಾಡಿ, ಶಕ್ತಿಧಾಮದ ಮಕ್ಕಳು ಗಾಂಧಿಯನ್ನು ಚರಕದ ಮೂಲಕ ನೋಡಿದ್ದಾರೆ. ಈ ಮಾದರಿ ಶಾಲೆಯ ಪೋಷಕರಾದ ಶಿವರಾಜ್ ಕುಮಾರ್ ಅವರು ಅಸಲಿ ಖಾದಿ ಉತ್ಪನ್ನಗಳ ರಾಯಭಾರಿಯಾಗಬೇಕು. ರೈತರು, ನೇಕಾರರಿಗೆ ಆಸರೆಯಾಗಬೇಕು ಎಂದು ಮನವಿ ಮಾಡಿದರು.

ಶಕ್ತಿಧಾಮದ ಪೋಷಕಿ ಗೀತಾ ಶಿವರಾಜಕುಮಾರ್, ಪುಣೆಯ ಹಿರಿಯ ನೂಲುಗಾರ ಮಾಧವ ಸಹಸ್ರ ಬುದ್ಧೆ, ತುಲಾ ಖಾದಿ ಸಂಸ್ಥೆಯ ಸಂಸ್ಥಾಪಕ ಅನಂತ ಶಯನ, ಸೂಫಿ ಗಾಯಕ ಮೀರ್ ಮುಖ್ತಿಯಾರ್ ಆಲಿ, ನಟ ಕೆ.ಜೆ. ಸಚ್ಚಿದಾನಂದ, ಲೇಖಕ ಉದಯ್ ಗಾಂವ್ಕರ್, ಟ್ರಸ್ಟಿಗಳಾದ ಸದಾನಂದ, ಚೇತನ್, ಸೌಮ್ಯ, ಶಕ್ತಿಧಾಮದ ನಿರ್ದೇಶಕಿ ಮಂಜುಳಾ, ಮೈಸೂರು ನೂಲುಗಾರರ ಬಳಗದ ಅಭಿಲಾಷ್ ಇದ್ದರು.

ತಾವೇ ನೂಲಿದ ಬಟ್ಟೆ ಪಡೆದ ಮಕ್ಕಳು

ಶಕ್ತಿಧಾಮದ 9ನೇ ತರಗತಿಯ 25 ಮಕ್ಕಳು ನಾಲ್ಕು ತಿಂಗಳಿಂದ ಚರಕದಿಂದ 650 ಲಡಿ (ದಾರದ ಉಂಡೆ) ತೆಗೆದಿದ್ದರು. ಈ ನೂಲಿನಿಂದ 320 ಮೀಟರ್ ಬಟ್ಟೆಯನ್ನು ಮೇಲುಕೋಟೆಯ ನೇಕಾರರು ತಯಾರಿಸಿದ್ದರು. ಇದನ್ನು ನೇಕಾರರು ಶಕ್ತಿಧಾಮದ ಪೋಷಕರಾದ ನಟ ಶಿವರಾಜಕುಮಾರ್ ಅವರಿಗೆ ಹಸ್ತಾಂತರಿಸಿದರು. ಶಿವರಾಜಕುಮಾರ್ ಭಾವುಕರಾಗಿಯೇ ಬಟ್ಟೆಯನ್ನು ಸ್ವೀಕರಿಸಿದರು.

ನಾನೂ ಚರಕದಿಂದ ನೂಲು ತೆಗೆಯಲು ನಿತ್ಯ ಒಂದು ಗಂಟೆ ಮೀಸಲಿಡಲು ನಿರ್ಧರಿಸಿದ್ದೇನೆ. ನೂಲು ತೆಗೆಯುವಾಗ ದಾರ ಕಿತ್ತು ಹೋಗುವುದು ಸಾಮಾನ್ಯ. ಅದು ನಮ್ಮ ತಾಳ್ಮೆ, ಸಂಯಮ ಬೇಡುತ್ತದೆ. ಬೇಸರವಾದಾಗ ಚರಕದಿಂದ ನೂಲು ತೆಗೆಯುತ್ತಿದ್ದರೆ, ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ನಾವೇ ತಯಾರಿಸಿದ ನೂಲು, ಬಟ್ಟೆಯಾಗಿ ಧರಿಸಿದಾಗ ಆಗುವ ತೃಪ್ತಿಯನ್ನು ಹೇಳಲಾಗದು.

- ಡಾ. ಶಿವರಾಜಕುಮಾರ್, ನಟ

click me!