ನಟ ದರ್ಶನ್ ತೂಗುದೀಪಗೆ ಕೋರ್ಟ್‌ನಿಂದ 6 ವಾರಗಳ ಕಾಲ ಜಾಮೀನು ಮಂಜೂರು ಮಾಡಿದ ನಂತರ ಬಳ್ಳಾರಿ ಸೆಂಟ್ರಲ್ ಜೈಲಿನಿಂದ 131 ದಿನಗಳ ನಂತರ ಹೊರಗೆ ಬಂದಿದ್ದಾರೆ.
ಬಳ್ಳಾರಿ (ಅ.30): ನಟ ದರ್ಶನ್ ತೂಗುದೀಪಗೆ ಕೋರ್ಟ್‌ನಿಂದ 6 ವಾರಗಳ ಕಾಲ ಜಾಮೀನು ಮಂಜೂರು ಮಾಡಿದ ನಂತರ ಬಳ್ಳಾರಿ ಸೆಂಟ್ರಲ್ ಜೈಲಿನಿಂದ 131 ದಿನಗಳ ನಂತರ ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಹೊರಗೆ ಬಂದಿದ್ದಾರೆ. ಇನ್ನು ನಟ ದರ್ಶನ್ ಕರೆದೊಯ್ಯಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಳ್ಳಾರಿ ಜೈಲಿನ ಬಳಿ ಕಾಯುತ್ತಿದ್ದಾರೆ.
ನಟ ದರ್ಶನ್ ಅವರಿಗೆ ಇಂದು ಬೆಳಗ್ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಿತ್ತು. ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು 6 ವಾರಗಳ ಕಾಲ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ, ಜಾಮೀನು ಪಡೆಯುವುದಕ್ಕೆ ಮುನ್ನ 7 ಷರತ್ತುಗಳನ್ನು ಹಾಕಲಾಗಿತ್ತು. ದರ್ಶನ್ ಜಾಮೀನು ಪ್ರಕ್ರಿಯೆಯನ್ನು ಮಧ್ಯಾಹ್ನದೊಳಗೆ ಪೂರ್ಣಗೊಳಿಸಿದ ನಂತರ ಕೋರ್ಟ್ ಜಾಮೀನು ಆದೇಶವನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲಿಯೇ ಸಂಜೆ 5.30ರ ವೇಳೆ ನಟ ದರ್ಶನ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ನಟ ದರ್ಶನ್ 6 ವಾರಗಳ ಜಾಮೀನಿಗೆ 7 ಷರತ್ತುಗಳನ್ನು ವಿಧಿಸಿ ಕೋರ್ಟ್; ಕಾನೂನಿಗೆ ವಂಚಿಸೋಕೆ ಆಗೊಲ್ಲ!
ದರ್ಶನ್ ಜೈಲಿನಿಂದ ಹೊರಗೆ ಬರುವಾಗ ಎಲ್ಲ ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊರಗೆ ಬಂದಿದ್ದಾರೆ. ಆದರೆ, ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಬಂದಿದ್ದು, ಬೆನ್ನು ನೋವು ತೀವ್ರವಾಗಿ ಉಲ್ಬಣಗೊಂಡಿದೆ ಎಂಬ ಲಕ್ಷಣಗಳು ಕಂಡುಬರುತ್ತಿವೆ. ಇನ್ನು ದರ್ಶನ್ ಮನೆಗೆ ಹೋದ ನಂತರ ಒಂದು ವಾರದೊಳಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುವುದಕ್ಕೆ ಸೂಚಿಸಲಾಗಿದೆ.
ದರ್ಶನ್ ಕರೆದುಕೊಂಡು ಹೋಗಲು ಸೆಂಟ್ರಲ್ ಜೈಲಿನ ಬಳಿ ಇರುವ ಕನಕದುರ್ಗಮ್ಮ ದೇವಸ್ಥಾನದ ಬಳಿ ಕಾರುಗಳನ್ನು ನಿಲ್ಲಿಸಲಾಗಿದೆ. ಇನ್ನು ದರ್ಶನ್ ಬಿಡುಗಡೆಯಾಗಿ ಹೊರಗೆ ಬರುತ್ತಿದ್ದಂತೆ ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಲಾಟೆ, ನೂಕಾಟ ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆಯಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಇನ್ನು ನಟ ದರ್ಶನ್ ಕಾರು, ಬಳ್ಳಾರಿ, ಹಗರಿ, ಚೆಳ್ಳಗುರ್ಕಿ, ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.