ಹುಮನಾಬಾದ್: ಎಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

By Web DeskFirst Published Oct 4, 2019, 3:19 PM IST
Highlights

ಕಿರಿಯ ಅಭಿಯಂತರ ವಿಜಯ ರೆಡ್ಡಿ ಮನೆ ಮೇಲೆ ದಾಳಿ | ಅಕ್ರಮ ಆಸ್ತಿ ಹೊಂದಿದ್ದಾರೆಂಬ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳ ರೇಡ್ | ನಿರ್ಣಾದಲ್ಲಿನ ಮನೆ, ಫಾರ್ಮ್‌ಹೌಸ್‌ನಲ್ಲಿ ದಾಖಲೆ ಹುಡುಕಾಟ | ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ನಗದು ದೊರಕಿರುವ ಮಾಹಿತಿ ಲಭ್ಯ|

ಹುಮನಾಬಾದ್ [ಅ.4]: ಪಂಚಾಯತ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಿರಿಯ ಅಭಿಯಂತರ ವಿಜಯ ರೆಡ್ಡಿ ನಿವಾಸ, ಫಾರ್ಮಹೌಸ್ ಮತ್ತಿತರ ಕಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಬೀದರ್ ಹಾಗೂ ಕಲಬುರಗಿ ಎಸಿಬಿ ಅಧಿಕಾರಿಗಳ ತಂಡ ದಾಖಲಾತಿ ಹಾಗೂ ಬ್ಯಾಂಕ್‌ನ ಖಾತೆ ಸೇರಿ ಹಲವಾರು ಮಾಹಿತಿಗಳನ್ನ ಕಲೆ ಹಾಕುವ ಕಾರ್ಯ ನಡೆಸಿದರು.

ಬೀದರ್ ಡಿವೈಎಸ್‌ಪಿ ಬಿ.ಬಿ. ಪಾಟೀಲ್ ಹಾಗೂ ಶರಣಬಸಪ್ಪ ಕೊಡ್ಲಾ ಅಧಿಕಾರಿಗಳ ನೇತೃತ್ವದ ಸುಮಾರು 15ರಿಂದ 20 ಅಧಿಕಾರಿಗಳ ತಂಡ ಪಟ್ಟಣದ ಬಸವನಗರ ಬಡಾವಣೆಯಲ್ಲಿರುವ ವಿಜಯ ರೆಡ್ಡಿ ನಿವಾಸದ ಮೇಲೆ ಬೆಳಿಗ್ಗೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗ್ಗೆ 10 ಗಂಟೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಕಚೇರಿಗೆ ಭೇಟಿ ನೀಡಿದ ಕಲಬುರಗಿ ಇನ್ಸಪೆಕ್ಟರ್ ಗುರುಪಾದ ಬಿರಾದರ ನೇತೃತ್ವದ ಅಲ್ಲಿರುವ ದಾಖಲೆಗಳನ್ನ ಮಧ್ಯಾಹ್ನದ ವರೆಗೆ ಪರಿಶೀಲನೆ ಕಾರ್ಯ ನಡೆಯಿತು. ಅವರು ಕೈಗೊಂಡ ವಿವಿಧ ಕಾಮಗಾರಿಗಳ ಕುರಿತು ಮಾಹಿತಿಗಳನ್ನ ಕಲೆ ಹಾಕಿದ ಅಧಿಕಾರಿಗಳು ತಾಲೂಕಿನ ಸ್ವಗ್ರಾಮ ನಿರ್ಣಾದಲ್ಲಿರುವ ಅವರ ಮನೆಯ ಮೇಲೆ ಡಿವೈಎಸ್‌ಪಿ ಸುಧಾ ಹಾದಿ ಹಾಗೂ ಮೊಹಮ್ಮದ್ ಇಸ್ಮಾಯಿಲ್ ನೇತೃತ್ವದ ತಂಡ ದಾಳಿ ಮಾಡಿ ಕಟುಂಬದವರನ್ನ ಒಂದೆಡೆ ಸೇರಿಸಿ ಮನೆಯಲ್ಲಿರುವ ದಾಖಲೆ ಪರಿಶೀಲಿಸಿದ್ದಾರೆ.

ಅಲ್ಲದೆ ವಿಜಯರೆಡ್ಡಿ ಹೆಸರಿನಲ್ಲಿರುವ ಕೃಷಿ ಭೂಮಿ, ಕೃಷಿಯೇತರ ಭೂಮಿ ಮತ್ತಿತರ ಆಸ್ತಿಗಳ ದಾಖಲೆಪರಿಶೀಲನೆ ಕಾರ್ಯ ನಡೆಯಿತು. ವಿಜಯ ರೆಡ್ಡಿ 1984 ರಿಂದ ಪಟ್ಟಣದ ಪಂಚಾಯತರಾಜ್ ಎಂಜಿನಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಲೂಕಿನ ನಿರ್ಣಾ, ಮುತ್ತಂಗಿ, ಕಲ್ಲೂರ, ಬೆಳಕೇರಾ ಗ್ರಾಮ ಪಂಚಾಯತಿಗಳ ನಿರ್ವಹಣೆ ಮಾಡುತ್ತಿದ್ದಾರೆ. ಜೊತೆಗೆ ಹುಮನಾಬಾದ್ ಹಾಗೂ ಪಟ್ಟಣಗಳಲ್ಲಿನ ಕಾಮಗಾರಿಗಳ ಜವಾಬ್ದಾರಿಯನ್ನ ವಸಿಕೊಂಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. 

ಬೆಳಗಿನ ಜಾವ ಹುಮನಾಬಾದ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ ಸಂದರ್ಭದಲ್ಲಿ ವಿಜಯರೆಡ್ಡಿ ಮನೆಯಲ್ಲಿ ಇರಲಿಲ್ಲ. ಪಟ್ಟಣ ಹಾಗೂ ನಿರ್ಣಾ ಗ್ರಾಮದಲ್ಲಿ ಏಕ ಕಾಲಕ್ಕೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ನಿರ್ಣಾ ಗ್ರಾಮದಿಂದ ಅವರನ್ನ ಪಟ್ಟಣಕ್ಕೆ ಕರೆತರಲಾಗಿತ್ತು.

ಮೂಲಗಳ ಪ್ರಕಾರ ವಿಜಯರೆಡ್ಡಿ ಮನೆಯಲ್ಲಿ 55 ತೊಲೆ ಚಿನ್ನ ಹಾಗೂ ಲಕ್ಷಾಂತರ ರುಪಾಯಿ ನಗದು ಸಹ ದೊರೆತಿವೆ ಎಂದು ತಿಳಿದು ಬಂದಿದೆ.
 

click me!