
ಬೆಂಗಳೂರು (ಜು.17): ನಗರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ರಸ್ತೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿತ್ತಿಪತ್ರಗಳನ್ನು ಅಂಟಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಬಿಎಂಪಿಯ ಪಶ್ಚಿಮ ವಲಯದ ವ್ಯಾಪ್ತಿಗೆ ಬರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17 ಮುಖ್ಯ ರಸ್ತೆಗಳು, 259 ವಾರ್ಡ್ ರಸ್ತೆಗಳಿವೆ. ಪ್ರಮುಖ ರಸ್ತೆಯಾದ ಸಂಪಿಗೆ ರಸ್ತೆಯಲ್ಲಿ ಐದಾರು ತಿಂಗಳಿಂದ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇನ್ನು 90ಕ್ಕೂ ಅಧಿಕ ವಾರ್ಡ್ ರಸ್ತೆಗಳ ಅಭಿವೃದ್ಧಿಗಾಗಿ ಚರಂಡಿಗಳು, ಪಾದಚಾರಿ ಮಾರ್ಗ ಮತ್ತು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಜನರು ಓಡಾಡಲು ಮತ್ತು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿದ ಹಿನ್ನೆಲೆಯಲ್ಲಿ ಇದೀಗ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಅವಾಚ್ಯ ಪದದಿಂದ ನಿಂದಿಸಿ ‘.... ಅಧಿಕಾರಿಗಳಾ ರಸ್ತೆ ಸರಿಪಡಿಸಿ’ ಎಂದು ಮುದ್ರಿಸಿದ ಭಿತ್ತಿಪತ್ರಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ರೋಲರ್ ಮಾಡಿ 30 ದಿನ ಬಿಡಬೇಕು: ಮಳೆಗಾಲ ಮುಕ್ತಾಯಗೊಳ್ಳುವವರೆಗೆ ಕಾಮಗಾರಿ ಮಾಡಬಾರದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಆದರೆ, ಸ್ವತಃ ಪಾಲಿಕೆಯಿಂದ ಮೂರ್ನಾಲ್ಕು ತಿಂಗಳ ಹಿಂದೆ ಕೈಗೊಂಡಿದ್ದ ಕಾಮಗಾರಿಯಲ್ಲಿ ಜಲಮಂಡಳಿಯು ಒಳಚರಂಡಿ ಮತ್ತು ನೀರಿನ ಕೊಳವೆಯನ್ನು ಅಳವಡಿಸುತ್ತಿದೆ. ಈ ಕೊಳವೆ ಅಳವಡಿಸಿದ ಜಾಗದಲ್ಲಿ ವೆಟ್ ಮಿಕ್ಸ್ ಮತ್ತು ಜಲ್ಲಿಕಲ್ಲಿನ ಮಿಶ್ರಣವನ್ನು ಹಾಕಿ ರೋಲರ್ ಮಾಡಿ ಕನಿಷ್ಠ 15-30 ದಿನ ಬಿಡಬೇಕು. ನಂತರ, ರಸ್ತೆಗೆ ಡಾಂಬರೀಕರಣ ಮಾಡಿದಲ್ಲಿ ಮಾತ್ರ ಡಾಂಬರ್ ದೀರ್ಘಕಾಲ ಬಾಳಿಕೆ ಬರುತ್ತದೆ. ಇಲ್ಲವಾದಲ್ಲಿ ಗುಂಡಿ ಬಿದ್ದು ಹಾಳಾಗುತ್ತದೆ. ಹೀಗಾಗಿ ಕಾಮಗಾರಿ ತಡವಾಗುತ್ತಿದೆ ಎಂದು ಪಾಲಿಕೆ ಎಂಜಿನಿಯರ್ ಹೇಳುತ್ತಾರೆ.
ರಾಜ್ಯಾದ್ಯಂತ ಅಭಿಯಾನ?: ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಲ್ಲೇಶ್ವರದಲ್ಲಿ ಅಂಟಿಸಲಾದ ಬಿತ್ತಿ ಪತ್ರಗಳ ಬಗ್ಗೆ ಬಾರೀ ಚರ್ಚೆ ಆಗುತ್ತಿದ್ದು, ಈ ರೀತಿಯ ಅಭಿಯಾನವನ್ನು ರಾಜ್ಯಾದ್ಯಂತ ಆರಂಭಿಸಬೇಕು. ಕೇವಲ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರೆ ಸಾಲದು ಶಾಸಕರು, ಸಚಿವರು ಹಾಗೂ ಗುತ್ತಿಗೆದಾರರಿಗೂ ಚಳಿ ಬಿಡಸಬೇಕಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿವೆ.
ಹೆಬ್ಬಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಅನುದಾನ ದುರ್ಬಳಕೆ:
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ 650 ಕೋಟಿ ಅನುದಾನದಲ್ಲಿ ಶೇ.40ರಷ್ಟುಮಾತ್ರ ಬಳಕೆ ಮಾಡಿದ್ದಾರೆ. ಉಳಿದ ಶೇ.60ರಷ್ಟುಲೂಟಿಯಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಕ್ಷೇತ್ರದ ಶಾಸಕ ಬೈರತಿ ಸುರೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಆಗ್ರಹಿಸಿದ್ದಾರೆ.
ಶನಿವಾರ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ .650 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕೇವಲ ಶೇ.40ರಷ್ಟುಮಾತ್ರ ಕೆಲಸವಾಗಿದ್ದು, ಉಳಿದ ಶೇ.60ರಷ್ಟುಅನುದಾನ ಲೂಟಿಯಾಗಿದೆ. ಅಹಂಕಾರದಿಂದ ಮರೆಯುತ್ತಿರುವ ಭ್ರಷ್ಟಶಾಸಕನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸಬೇಕು. ಅಲ್ಲದೇ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುರೇಶ್ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಪೂಜೆ ನೆರವೇರಿಸುವ ಮೊದಲೇ ಹಣ ಪಡೆದುಕೊಳ್ಳುತ್ತಾರೆ. ಕ್ಷೇತ್ರದ ಗುತ್ತಿಗೆದಾರರು ಶಾಸಕರ ದಬ್ಬಾಳಿಕೆಗೆ ಸುಸ್ತಾಗಿದ್ದಾರೆ. ಪ್ರತಿ ಕಾಮಗಾರಿಗೂ ಶಾಸಕರಿಗೆ ಶೇ.20, ಅಧಿಕಾರಿಗಳಿಗೆ ಶೇ.30ರಷ್ಟುಲಂಚ ಕೊಡಬೇಕು. ಜತೆಗೆ ನನ್ನನ್ನೂ ಸೇರಿದಂತೆ ಬಿಜೆಪಿಯ ಕಾರ್ಯಕರ್ತರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಬಿಜೆಪಿ ಸರ್ಕಾರ ನೀಡುತ್ತಿರುವ ಅನುದಾನದ ಬಗ್ಗೆ ಮರೆಮಾಚಿ ಸ್ವಂತ ಹಣದಿಂದ ಕಾಮಗಾರಿ ಕೈಗೊಳ್ಳುತ್ತಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಹೆಬ್ಬಾಳ ಕ್ಷೇತ್ರದಲ್ಲಿ ನಾನು ಸಕ್ರಿಯವಾಗಿ ಓಡಾಡಲು ಆರಂಭಿಸಿದ ಬಳಿಕ ಹಾಲಿ ಶಾಸಕರು ಕಂಗೆಟ್ಟಿದ್ದಾರೆ. ಕಟ್ಟಾಅವರು ಕ್ಷೇತ್ರಕ್ಕೆ ಬಂದರೆ ಕಹಿ ಲಡ್ಡು ಮತ್ತು ವಿಷದ ಲಡ್ಡು ತಿಂದಂತೆ ಆಗುತ್ತದೆ ಎನ್ನುತ್ತಿದ್ದಾರೆ. ನಾನು ಸಚಿವನಾಗಿದ್ದ ವೇಳೆ ಕೊಳಚೆ ಪ್ರದೇಶದಲ್ಲಿ ನೆಲೆಸಿರುವ ನೂರಾರು ಬಡವರಿಗೆ ಹಕ್ಕು ಪತ್ರವನ್ನು ನೀಡಲಾಗಿತ್ತು. ಆದರೆ, ಶಾಸಕರು ತನ್ನ ಕೈಯಿಂದ .60 ಲಕ್ಷ ಖರ್ಚು ಮಾಡಿ ಹಕ್ಕು ಪತ್ರ ಕೊಡಿಸಿದ್ದೇನೆ ಎಂದು ಪ್ರಚಾರ ಪಡೆಯುತ್ತಿದ್ದು, ಯಾವ ಕಾರಣಕ್ಕಾಗಿ .60 ಲಕ್ಷ ವೆಚ್ಚ ಮಾಡಿದರು ಎಂದು ಸ್ಪಷ್ಟನೆ ನೀಡಬೇಕು. ಈ ಬಗ್ಗೆ ತನಿಖೆ ಮಾಡುವಂತೆ ಮುಖ್ಯಮಂತ್ರಿಗೆ ಒತ್ತಾಯ ಮಾಡುವೆ ಎಂದರು.
ಇನ್ನು, ಸರ್ಕಾರ ನೀಡುತ್ತಿರುವ ಹಕ್ಕುಪತ್ರದಲ್ಲಿ ಕಾನೂನು ಬಾಹಿರವಾಗಿ ತಮ್ಮ ಭಾವಚಿತ್ರ ಮುದ್ರಿಸಿಕೊಂಡು ಹಂಚುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.