ಬೆಳಗಾವಿ (ಸೆ.07): ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷ (ಆಪ್) ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ. ಎರಡೂ ಪಾಲಿಕೆಗಳಲ್ಲಿ ಆಮ್ ಆದ್ಮಿ ಪಕ್ಷ ಶೂನ್ಯ ಸಂಪಾದನೆ ಮಾಡಿದೆ.
ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷ 27 ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ 41 ಕಡೆ ಸ್ಪರ್ಧಿಸಿತ್ತು. ಆದರೆ, ಎರಡೂ ಕಡೆ ಪಕ್ಷದ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದರು.
ಕರ್ನಾಟಕದಲ್ಲಿ ಅಸಾದುದ್ದೀನ್ ಓವೈಸಿ ಕಸರತ್ತು: ವಿಶ್ಲೇಷಣೆ
ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದಾಗ ಒಂದಷ್ಟುನಿರೀಕ್ಷೆಗಳಿತ್ತು. ಆಮ್ ಆದ್ಮಿ ಪಕ್ಷದ ಸ್ಪರ್ಧೆ ಬಿಜೆಪಿಗೆ ಹೊಡೆತ ನೀಡಬಹುದೆಂದೇ ಭಾವಿಸಲಾಗಿತ್ತು. ಆದರೆ, ಬಹುತೇಕ ಕಡೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಗಳಿಸಿದ ಮತಗಳ ಸಂಖ್ಯೆ 300 ದಾಟಲಿಲ್ಲ. ಬೆಳಗಾವಿ, ಹು-ಧಾ. ಪಾಲಿಕೆ ಚುನಾವಣೆಯಲ್ಲಿ ಖಾತೆ ತೆರೆಯುವ ಮೂಲಕ ಉತ್ತರ ಕರ್ನಾಟಕದ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಬೇಕೆಂಬ ಆಮ್ ಆದ್ಮಿ ಪಕ್ಷದ ಕನಸು ಭಗ್ನವಾಯಿತು.