BJP ಶಾಸಕರೋರ್ವರ ರಾಜೀನಾಮೆಗೆ ಹೆಚ್ಚಿದ ಒತ್ತಡ

By Kannadaprabha NewsFirst Published Oct 4, 2019, 10:30 AM IST
Highlights

ಬೆಂಗಳೂರಿನ ಬಿಜೆಪಿ ಶಾಸಕರೋರ್ವರ ರಾಜೀನಾಮೆಗೆ ಆಗ್ರಹಿಸಲಾಗಿದೆ. ಅಲ್ಲದೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. 

ಬೆಂಗಳೂರು [ಅ.04]:  ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಶಾಸಕ ಎಸ್‌.ರಘು ಅವರೆ ಕಾರಣ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷ, ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಬೆಳಗ್ಗೆ 11ಕ್ಕೆ ಹೊಸ ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಮೋಹನ್‌ ದಾಸರಿ, ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ರಘು ನಿಷ್ಪ್ರಯೋಜಕರಾಗಿದ್ದಾರೆ. ಇದರಿಂದ ಜನರು ಅಲ್ಲಿನ ಸಮಸ್ಯೆಗಳಿಗೆ ಪರ್ಯಾಯ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಶಾಸಕರು ಎಷ್ಟುಅಪ್ರಯೋಜಕರು ಎಂಬುದಕ್ಕೆ ಅವರ ಮನೆ ಮುಂದೆಯೇ ಆರು ತಿಂಗಳಿನಿಂದ ಗುಂಡಿ ಬಿದ್ದಿರುವ ರಸ್ತೆಗಳೇ ಸಾಕ್ಷಿಯಾಗಿದೆ. ತಮ್ಮದೇ ಪಕ್ಷದಲ್ಲಿದ್ದರೂ ಹಿಡಿತವನ್ನು ಕಳೆದುಕೊಂಡಿದ್ದಾರೆ ಎಂದು ದೂರಿದರು.

ಹಲವು ವರ್ಷಗಳಿಂದ ಜನರು ಮೌನವಾಗಿ ಅಲ್ಲಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಶಾಸಕರಿಂದ ಯಾವುದೇ ಪರಿಹಾರಗಳು ದೊರೆಯುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ತಿಪ್ಪಸಂದ್ರ ಮತ್ತು ಜೀವನ್‌ಭೀಮಾನಗರದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಪಾದಚಾರಿ ಮಾರ್ಗಗಳು ಇಲ್ಲವಾಗಿವೆ. ಹೀಗಾಗಲೇ ಸಮಸ್ಯೆಗಳನ್ನು ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಶಾಸಕರ ನಿರ್ಲಕ್ಷ್ಯದಿಂದ ಬೇಸತ್ತಿರುವ ಜನರು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿ.ವಿ.ರಾಮನ್‌ನಗರಕ್ಕೆ ಮೈತ್ರಿ ಸರ್ಕಾರ ನೀಡಿದ್ದ 35 ಕೋಟಿ ಅನುದಾನಕ್ಕೂ ಕತ್ತರಿಹಾಕಿ 27.5 ಕೋಟಿ ರು.ಗೆ ಇಳಿಸಲಾಗಿದೆ. ಇಷ್ಟಾದರೂ ಇಲ್ಲಿನ ಶಾಸಕ ರಘು ಅವರು ಚಕಾರ ಎತ್ತಿಲ್ಲ. ತಮ್ಮದೇ ಪಕ್ಷದಲ್ಲಿ ಹೆಚ್ಚು ಅನುದಾನವನ್ನು ಪಡೆದುಕೊಳ್ಳಲಾಗದಷ್ಟುಪ್ರಭಾವವನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಸದ್ಯ ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ಗಮನಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

click me!