ಕರ್ನಾಟಕ ರಾಜ್ಯದಲ್ಲಿ 1 ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್‌ಎಸ್‌ಆರ್‌ಪಿ)ವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು: ಕರ್ನಾಟಕ ರಾಜ್ಯದಲ್ಲಿ 1 ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್‌ಎಸ್‌ಆರ್‌ಪಿ)ವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ/ಅಸ್ತಿತ್ವದಲ್ಲಿರುವ ಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಹಾಗೂ ಮಧ್ಯಮ ಮತ್ತು ಭಾರೀ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ. ವಾಹನ ಮಾಲೀಕರು ತಮ್ಮ ವಾಹನಗಳಿಗೆ ಫೆಬ್ರವರಿ 17, 2024 ರೊಳಗಾಗಿ ನೋಂದಣಿ ಫಲಕ ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ.
undefined
ಡಿ.1 ರಂದು ವಿಶ್ವ ಏಡ್ಸ್ ದಿನ
ತುಮಕೂರು: ವಿಶ್ವ ಏಡ್ಸ್ ದಿನ-೨೦೨೩ ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ 1 ರಂದು ಜಿಲ್ಲಾ ಮಟ್ಟದ ಜಾಥಾ ಕಾರ್ಯಕ್ರಮವನ್ನು ಕೊರಟಗೆರೆ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ತಾಲೂಕು ಮಟ್ಟದ ಜಾಥಾವು ಅಂದು ಬೆಳಿಗ್ಗೆ 9 ಗಂಟೆಗೆ ತುಮಕೂರು ನಗರದ ಮಹಾನಗರಪಾಲಿಕೆ ಮುಂಭಾಗದಿಂದ ಅಶೋಕ ರಸ್ತೆಯ ಮಾರ್ಗವಾಗಿ ಚರ್ಚ್ ಸರ್ಕಲ್ ಮೂಲಕ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದವರೆಗೆ ಸಾಗಲಿದೆ.
ಅಂದು ಸರ್ಕಾರಿ, ಖಾಸಗಿ ಬಸ್ ನಿಲ್ದಾಣ, ಮಾರುಕಟ್ಟೆ, ರೈಲ್ವೆ ನಿಲ್ದಾಣದಲ್ಲಿ ಸ್ಟಾಲ್ ಹಾಕಿ ಹೆಚ್.ಐ.ವಿ.ಗೆ ಸಂಬಂಧಿಸಿದಂತೆ ಮಾಹಿತಿಯನ್ನೊಳಗೊಂಡ ಕರಪತ್ರಗಳನ್ನು ವಿತರಿಸಲಾಗುವುದು ಹಾಗೂ ಸಂಜೆ 6 ಗಂಟೆಗೆ ಮಹಾ ನಗರಪಾಲಿಕೆ ಮುಂಭಾಗದಲ್ಲಿ ಮೇಣದ ಬತ್ತಿಯಿಂದ ದೀಪ ಬೆಳಗಿಸುವ ಮೂಲಕ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂತಶ್ರೇಷ್ಟ ಕನಕದಾಸರ ಜಯಂತಿ: ಐವರು ಸಾಧಕರಿಗೆ ಸನ್ಮಾನ
ತುಮಕೂರು: ಜಿಲ್ಲಾಡಳಿತ, ಜಿ.ಪಂ., ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕಸಾಪ, ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಸಮಸ್ತ ಕುರುಬರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಕಾರದೊಂದಿಗೆ ಗುರುವಾರ ಬೆಳಿಗ್ಗೆ 10.30 ಗಂಟೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ “ಸಂತಶ್ರೇಷ್ಟ ಕನಕದಾಸ ಜಯಂತಿ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕುರುಬ ಸಮುದಾಯದ ಐವರು ಸಾಧಕರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತದೆ.
ರಂಗಭೂಮಿ ಕ್ಷೇತ್ರದಿಂದ ಜಿ.ಕೆ. ಕೃಷ್ಣಮೂರ್ತಿ, ಸರ್ಕಾರಿ ಸೇವೆ ಕ್ಷೇತ್ರದಿಂದ ಸಿ.ಟಿ. ಮುದ್ದು ಕುಮಾರ್, ಜಾನಪದ ಕ್ಷೇತ್ರದಿಂದ ಎನ್. ಮರಿಸ್ವಾಮಿ, ಸಮಾಜ ಸೇವೆಯಿಂದ ಭೂಷಣ್ ಎಂ.ಎನ್.ಎನ್., ಹಾಗೂ ಶಿಕ್ಷಣ ಕ್ಷೇತ್ರದಿಂದ ಪಾತಲಿಂಗಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಜನತಾ ದರ್ಶನ ದಲ್ಲಿ ರೈತರ ನೋಂದಣಿಗೆ ಅವಕಾಶ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಯ ಒಂದು ತಾಲೂಕಿನಲ್ಲಿ ಹಮ್ಮಿಕೊಳ್ಳುವ “ಜನತಾ ದರ್ಶನ” ಕಾರ್ಯಕ್ರಮದಲ್ಲಿ ಕೃಷಿ ಇಲಾಖಾ ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪರಿಶಿಷ್ಟ ಜಾತಿ ರೈತರಿಗೆ ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕವನ್ನು ವಿತರಿಸಲು ರೈತರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತ ಪರಿಶಿಷ್ಟ ಜಾತಿಯ ರೈತ ಬಾಂಧವರು ನಿಗಧಿತ ಅರ್ಜಿ ನಮೂನೆಯೊಂದಿಗೆ, ಜಾತಿ ಪ್ರಮಾಣ ಪತ್ರ, 20ರು. ಛಾಪಾ ಕಾಗದ, ಆರ್.ಟಿ.ಸಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಕೊಳವೆ ಬಾವಿ ಕುರಿತು ದೃಢೀಕರಣ ಪತ್ರದ ದಾಖಲಾತಿ ಕಾರ್ಯಕ್ರಮದಲ್ಲಿ ಸಲ್ಲಿಸಿ ನೋಂದಣಿಗೆ ಕೋರಿದ್ದಾರೆ.
ತೋಟಗಾರಿಕೆ ಇಲಾಖೆ: ರೈತರಿಗೆ ವಿವಿಧ ಸೌಲಭ್ಯ
ಗುಬ್ಬಿ: ತಾಲೂಕಿನಲ್ಲಿ ತೋಟಗಾರಿಕೆಯಿಂದ ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಲಾಭ ಪಡೆಯಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ. ಎಲ್ಲಾ ರೈತರಿಗೆ ತೆಂಗು ಬೆಳೆಯನ್ನು ಬೆಳೆಯಲು ಉತ್ತೇಜಿಸಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೆಂಗು ಪ್ರದೇಶ ವಿಸ್ತರಣಾ ಕಾರ್ಯಕ್ರಮದಡಿ ಪ್ರತಿ ಫಲಾನುಭವಿಗೆ ಗರಿಷ್ಟ 1 ಹೆಕ್ಟೇರ್‌ವರೆಗೆ 123 ಸಂಖ್ಯೆಯ ತೆಂಗಿನ ಸಸಿಗಳನ್ನು ಉಚಿತವಾಗಿ ನೀಡಲು ಅವಕಾಶವಿರುತ್ತದೆ.
ಕೂಡಲೇ ಆಸಕ್ತರು ದಾಖಲಾತಿಗಳೊಂದಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.
ಆರೋಗ್ಯ ತುಮಕೂರು ಅಭಿಯಾನ
ತುಮಕೂರು: ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾ.ಆಡಳಿತ, ತಾ.ಪಂ., ತಾ.ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಕೊರಟಗೆರೆ ಸಂಯುಕ್ತಾಶ್ರಯದಲ್ಲಿ ಕೊರಟಗೆರೆ ಸರ್ಕಾರಿ ಪ.ಪೂ ಕಾಲೇಜು ಆವರಣದಲ್ಲಿ ಡಿ.೧ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ವಿವಿಧ 10 ಕಾಯಿಲೆಗಳ ಸಮಗ್ರ ಆರೋಗ್ಯ ತಪಾಸಣೆಯನ್ನು ಜಿಲ್ಲೆಯ 30ವರ್ಷ ಮೇಲ್ಪಟ್ಟ 17ಲಕ್ಷ ನಾಗರಿಕರಿಗೆ ಮಾಡಲಾಗುವುದು ಹಾಗೂ ಅವಶ್ಯವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ತಾ.ಮಟ್ಟದ/ ಜಿಲ್ಲಾ ಮಟ್ಟದ/ ರಾಜ್ಯ ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು.
ಜಿಲ್ಲಾ ಮಟ್ಟದ ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ರವರು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಅವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಲಿದ್ದಾರೆ.