Chikkamagaluru: ಎಳೆಯರ ಕನಸುಗಳು ಬಾಡಲು ಬಿಡಬಾರದು: ಡಿಸಿ ರಮೇಶ್

By Govindaraj SFirst Published Aug 3, 2022, 3:30 PM IST
Highlights

ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದ ರಕ್ಷಣೆ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಪ್ರತಿ ಮಗುವಿಗೂ ತನ್ನದೇ ಆದ ಕನಸುಗಳಿದ್ದು, ಎಳೆಯ ಮನಸುಗಳ ಕನಸುಗಳು ಬಾಡಲು ಬಿಡದಂತೆ ಅವರಿಗೆ ಸಿಗಬೇಕಾದ ಹಕ್ಕುಗಳನ್ನು ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು. 

ಚಿಕ್ಕಮಗಳೂರು (ಆ.03): ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದ ರಕ್ಷಣೆ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಪ್ರತಿ ಮಗುವಿಗೂ ತನ್ನದೇ ಆದ ಕನಸುಗಳಿದ್ದು, ಎಳೆಯ ಮನಸುಗಳ ಕನಸುಗಳು ಬಾಡಲು ಬಿಡದಂತೆ ಅವರಿಗೆ ಸಿಗಬೇಕಾದ ಹಕ್ಕುಗಳನ್ನು ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು. 

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಾಂಶುಪಾಲರು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯರಿಗೆ ಮಕ್ಕಳ ರಕ್ಷಣಾ ಸಂಬಂಧಿತ ಕಾಯ್ದೆಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯ​ಕ್ರ​ಮ​ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕಮಗಳೂರು: ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಗಲಾಟೆ ಪ್ರಕರಣ, ಆರೋಪಿಗಳ ಬಂಧನ

ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಶಾಶ್ವತ ಪರಿಹಾರಕ್ಕಾಗಿ 1989ರಲ್ಲಿ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಅಂಗೀಕರಿಸಿ ಜಾರಿಗೆ ತಂದಿತು. ಈ ಒಡಂಬಡಿಕೆಗೆ ಭಾರತ ಒಪ್ಪಿ 1992 ಡಿಸೆಂಬರ್‌ 11ರಂದು ಸಹಿ ಮಾಡಿದೆ. ಅದರ ಪ್ರಕಾರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಬದುಕುವ, ರಕ್ಷಣೆ, ವಿಕಾಸ ಹೊಂದುವ ಹಾಗೂ ಭಾಗವಹಿಸುವ ಹಕ್ಕುಗಳನ್ನು ಕಡ್ಡಾಯವಾಗಿ ಮಕ್ಕಳಿಗೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ 2021- 22ರಲ್ಲಿ 96 ಬಾಲ್ಯವಿವಾಹ ಪ್ರಕರಣಗಳಲ್ಲಿ 86 ವಿವಾಹಗಳನ್ನು ತಡೆ ಹಿಡಿದಿದ್ದು, ಈ ವರ್ಷ ಪತ್ತೆಯಾದ 24 ಬಾಲ್ಯವಿವಾಹಗಳನ್ನು ತಡೆಹಿಡಿಯಲಾಗಿದೆ. ಬಡತನ ನಿವಾರಣೆ ಹಾಗೂ ಉತ್ತಮ ಶಿಕ್ಷಣ ಪೂರೈಕೆಯಿಂದ ಸಮಾಜವನ್ನು ಬಾಲ್ಯ ವಿವಾಹ ಪಿಡುಗಿನಿಂದ ಮುಕ್ತವಾಗಿಸಬಹುದು ಎಂದು ಹೇಳಿದರು. ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಚ್‌. ಅಕ್ಷಯ್‌ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್‌ ಹಾಗೂ ನ್ಯಾಯಾಂಗವು ಕೇವಲ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬಹುದು. ಆದರೆ, ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳೊಡನೆ ಒಡನಾಟ ಹೊಂದಿರುವ ಕಾರಣ ಮುಂಚಿತವಾಗಿ ಇಂತಹ ಪ್ರಕರಣಗಳನ್ನು ತಡೆಯಬಹುದು ಎಂದರು.

ಪೊಕ್ಸೊ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ಬದ್ಧತೆ ಇರಬೇಕು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಮಾಹಿತಿ ಇದ್ದಲ್ಲಿ ಕಡ್ಡಾಯವಾಗಿ ವ್ಯಾಪ್ತಿಯಲ್ಲಿ ಇರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಥವಾ ಪೊಲೀಸರಿಗೆ ತಿಳಿಸಲು ಹಾಗೂ ಮಕ್ಕಳಲ್ಲಿ ವರ್ತನೆ ಅಥವಾ ಮಾನಸಿಕವಾಗಿ ತೀರಾ ಬದಲಾವಣೆ ಕಂಡು ಬಂದಲ್ಲಿ ತಜ್ಞರೊಡನೆ ಆಪ್ತ ಸಮಾಲೋಚನೆಗೆ ಒಳಪಡಿಸಲು ಮನವಿ ಮಾಡಿದರು. ಪೊಕ್ಸೊ ಕಾಯ್ದೆಯಡಿ ಬಂಧಿತರಾಗುತ್ತಿರುವ ಆರೋಪಿಗಳಲ್ಲಿ ಶೇ.85ರಷ್ಟು ಜನ ಮಗುವಿಗೆ ಪರಿಚಯ ಇರುವವರು ಹಾಗೂ ಶೇ.65ರಷ್ಟು ಜನ ಮಗುವಿನ ಸಂಬಂಧಿಕರಾಗಿರುತ್ತಾರೆ. ಇದು ಸಮಾಜಕ್ಕೆ ನಾಚಿಕೆಯಾಗುವ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಓ ಜಿ.ಪ್ರಭು ಮಾತನಾಡಿ, ಸಾಮಾನ್ಯವಾಗಿ ಸಮಾಜದಲ್ಲಿ ಆರ್ಥಿಕ ಅಭದ್ರತೆಯಿಂದ ಪಿಡುಗುಗಳು ಹುಟ್ಟುತ್ತವೆ. ಆದ್ದರಿಂದ ದೇಶದ ಪ್ರತಿ ವ್ಯಕ್ತಿಯನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಬೇಕು ಎಂದರು. ದೇಶದ ಅಭಿವೃದ್ಧಿಗೆ ಮೂಲ ಬಂಡವಾಳ ಮಾನವ ಸಂಪನ್ಮೂಲವಾಗಿದೆ. ಅದಕ್ಕೆ ಭದ್ರ ಬುನಾದಿ ಶಿಕ್ಷಣ. ಪ್ರತಿ ಮಗುವಿನ ಮೌಲ್ಯಯುತ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಉತ್ತಮ ಶಿಕ್ಷಣದ ಜೊತೆಗೆ ಬಾಹ್ಯ ಜ್ಞಾನಕ್ಕೆ ಮಹತ್ವ ನೀಡಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಕಾಫಿನಾಡು ಚಂದು ಯಾರು?, ಇವರ ಆಸೆ ಏನು?

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎ.ಎಸ್‌. ಸೋಮ ಪ್ರತಿಜ್ಞಾವಿಧಿ ಬೋಧಿಸಿದರು. ಚೈಲ್ಡ್‌ ವೆಲ್‌ಫೇರ್‌ ಟ್ರಸ್ಟ್‌ ಕಾರ್ಯಕಾರಿ ನಿರ್ದೇಶಕ ಡಾ.ವಾಸುದೇವ ಶರ್ಮಾ ಮಕ್ಕಳ ರಕ್ಷಣಾ ಸಂಬಂಧಿ ಕಾಯ್ದೆಗಳ ಕುರಿತು ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ್‌, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟನಾಯ್ಕ್‌, ವಕೀಲರ ಸಂಘದ ಅಧ್ಯಕ್ಷ ಸುಧಾಕರ್‌, ಜಿಪಂ ಉಪ ಕಾರ್ಯದರ್ಶಿ ಕಿಶೋರ್‌ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ ಉಪಸ್ಥಿತರಿದ್ದರು.

click me!