ಶಿರಸಿ ನಾಡಗುಳಿಯಲ್ಲಿ ಓಡಾಡುವ ಕಪ್ಪುಚಿರತೆ; ತಲೆಕೆಡಿಸಿಕೊಳ್ಳದ ಜನ!

By Kannadaprabha News  |  First Published Aug 24, 2022, 2:05 PM IST
  • ಶಿರಸಿ ನಾಡಗುಳಿಯಲ್ಲಿ ಓಡಾಡುವ ಕಪ್ಪುಚಿರತೆ
  • ಅಪಾಯಕಾರಿ ಕಾಡುಪ್ರಾಣಿ ಬಗ್ಗೆ ತಲೆಕೆಡಿಸಿಕೊಳ್ಳದ ಜನತೆ
  • ಇಲ್ಲಿಯವರೆಗೆ ಯಾರಿಗೂ ಹಾನಿಯಾಗಿಲ್ಲ

ಮಂಜುನಾಥ ಸಾಯೀಮನೆ

 ಶಿರಸಿ (ಆ.24) : ಅರಣ್ಯ ಇಲಾಖೆಯವರೇ ತಂದು ಬಿಟ್ಟಿದ್ದಾರೆ ಎನ್ನಲಾದ ಚಿರತೆ ಮರಿ ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಪಕ್ಕದಲ್ಲೇ ಓಡಾಡಿಕೊಂಡು ದೊಡ್ಡದಾಗುತ್ತಿದೆ. ಪದೇ ಪದೇ ಕಾಣಿಸಿಕೊಂಡರೂ ಗ್ರಾಮಸ್ಥರು ತಲೆಕೆಡಿಸಿಕೊಂಡಿಲ್ಲ, ಚಿರತೆಯೂ ಯಾರಿಗೂ ಹಾನಿ ಮಾಡುತ್ತಿಲ್ಲ ! ತಾಲೂಕಿನ ನೆಗ್ಗು ಗ್ರಾಪಂನ ನಾಡಗುಳಿ ಗ್ರಾಮದ ಸುತ್ತಮುತ್ತ ಇರುವ ಕಪ್ಪು ಚಿರತೆ ಒಂದರ ಕಥೆ ಇದು! ಸುತ್ತ ದಟ್ಟಾರಣ್ಯದಿಂದ ಆವೃತ್ತವಾಗಿರುವ ನಾಡಗುಳಿಗೆ ಮುಖ್ಯ ರಸ್ತೆಯಿಂದ ಮೂರು ಕಿ.ಮೀ. ತೆರಳಬೇಕು. ಸುತ್ತ ಎತ್ತರದ ಹಸಿರು ತುಂಬಿದ ಬೆಟ್ಟಗಳು, ಕಣ್ಣು ಹಾಯಿಸಿದಷ್ಟೂಕಾಣುವ ಹಸಿರು ಇಲ್ಲಿ ಅಪರೂಪಕ್ಕೆ ಆಗಮಿಸಿದವರಿಗೆ ಭೂಲೋಕ ಸ್ವರ್ಗದ ಕಲ್ಪನೆ ಮೂಡಿಸುತ್ತವೆ. ಆದರೆ ಇಂತಹ ಸನ್ನಿವೇಶಗಳೇ ನಾಡಗುಳಿ ಜನತೆಗೆ ಜೀವನವನ್ನು ಸಂಕಷ್ಟಕ್ಕೆ ತಂದಿಟ್ಟಿದೆ.

Tap to resize

Latest Videos

ಕಪ್ಪುಚಿರತೆ ಮರಿ ತುಂಟಾಟ ಕ್ಯಾಮೆರಾದಲ್ಲಿ ಸೆರೆ

ಕಡಿದಾದ ಇಳಿಜಾರು, ಕಿತ್ತೆದ್ದು ಹೋಗಿರುವ ಡಾಂಬರು ರಸ್ತೆಗಳು ಇಲ್ಲಿಯ ಜನತೆಯ ದೈನಂದಿನ ಜೀವನದ ಭಾಗವಾಗಿವೆ. ಕೆಲವೆಡೆ ಮಣ್ಣಿನ ರಸ್ತೆಗಳು ವಾಹನಗಳಿಗೆ ಸುಸ್ತು ಹೊಡೆಸುತ್ತವೆ. ಅಡ್ಡಡ್ಡ ತಿರುಗಿಸುತ್ತವೆ. ಕಿರಿದಾದ ನಾಡಗುಳಿ ರಸ್ತೆಯಲ್ಲಿ ತಿರುವಿನ ಆಚೆ ಯಾವ ಕಾಡು ಪ್ರಾಣಿ ಕಾದಿದೆಯೋ ಎಂಬ ಆತಂಕ ಸಂಚರಿಸುವ ಪ್ರತಿಯೊಬ್ಬರಿಗೂ ಕಾಡುವುದು ಇಲ್ಲಿ ಸಾಮಾನ್ಯ. ಕಳೆದ ನಾಲ್ಕು ವರ್ಷಗಳ ಹಿಂದೆ ರಸ್ತೆ ಪಕ್ಕದಲ್ಲಿ ಕಪ್ಪು ಚಿರತೆ ಮರಿಯೊಂದು ಕಾಣಿಸಿಕೊಂಡಿತ್ತು. ದೊಡ್ಡ ಚಿರತೆಯೂ ಆಸುಪಾಸಿನಲ್ಲಿಯೇ ಇರಬಹುದು ಎಂದು ಸ್ಥಳೀಯರು ಆತಂಕಗೊಂಡಿದ್ದರು. ಆದರೆ, ಈ ಮರಿ ರಸ್ತೆ ಪಕ್ಕದಲ್ಲಿಯೇ ಓಡಾಡಿಕೊಂಡು, ಜನ ಕಂಡೊಡನೇ ಕಾಡಿನ ಕಡೆ ಓಡಿ ಹೋಗುತ್ತದೆ.

ಅರಣ್ಯ ಇಲಾಖೆ ಬೇರೆಡೆಯಿಂದ ಚಿರತೆ ಮರಿಯನ್ನು ತಂದು ಇಲ್ಲಿ ಬಿಟ್ಟಿರಬಹುದು ಎಂದು ಅಂದಾಜಿಸಿದ್ದಾರೆ. ಆ ಬಳಿಕ ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿದೆಯಾದರೂ ಜನ ಅಂಜುತ್ತಿಲ್ಲ. ಸುಮ್ಮನೆ ನಿಂತು ಚಿರತೆ ಕಾಡಿನೆಡೆ ಹೋದ ಬಳಿಕ ತಮ್ಮ ಪ್ರಯಾಣ ಮುಂದುವರಿಸುತ್ತಿದ್ದಾರೆ. ಕಾಡುಕೋಣಗಳು ಪದೇ ಪದೇ ಕೃಷಿ ಭೂಮಿಗೆ ದಾಳಿ ಮಾಡುತ್ತಿವೆ. ಬೆಳಗಿನ ವೇಳೆ ಇಲ್ಲಿ ರಸ್ತೆಯ ಪಕ್ಕದಲ್ಲಿಯೇ ಹಿಂಡು ಹಿಂಡು ಕಾಡುಕೋಣಗಳು ನಿಂತಿರುತ್ತವೆ. ಯಾವುದಾದರೂ ದಿಕ್ಕಿನೆಡೆ ಹೋಗಿ ಇಲ್ಲಿಯ ಕೃಷಿ ತೋಟಗಳಿಗೆ ನುಗ್ಗುತ್ತಿವೆ. ಕೆಲ ರಾತ್ರಿ ಮನೆ ಬಾಗಿಲಿನವರೆಗೂ ಬಂದಿವೆ. ಕಾಡು ಪ್ರಾಣಿಗಳ ಹಾವಳಿಗೆ ಬೇಸತ್ತು ಹೋಗಿದ್ದೇವೆ ಎನ್ನುತ್ತಾರೆ ನಾಡಗುಳಿಯ ಕೃಷಿಕ ಭಾಸ್ಕರ ಹೆಗಡೆ.

6 ತಿಂಗಳ ಬಳಿಕ ಕಾಕನಕೋಟೆ ಅರಣ್ಯದಲ್ಲಿ ಕರಿ ಚಿರತೆ ಪ್ರತ್ಯಕ್ಷ!

ಸರ್ವಋುತು ರಸ್ತೆ ನಿರ್ಮಿಸಲು ಆಗ್ರಹ: ಪ್ರತಿದಿನ ಸಂಜೆಯ ವೇಳೆಗೆ ನಾಲ್ಕು ಕಿ.ಮೀ. ದೂರದ ಗೌಳಿಗೆ ತೆರಳಿ ಡೈರಿಗೆ ಹಾಲು ಹಾಕಿ ಬರಬೇಕಾಗಿದೆ. ಏರು ದಿನ್ನೆಗಳೇ ತುಂಬಿರುವ ಈ ರಸ್ತೆಗಳಲ್ಲಿ ಮೊಬೈಲ್‌ ಸಿಗ್ನಲ್‌ ಸಹ ಇರುವುದಿಲ್ಲ. ಕಾಡು ಪ್ರಾಣಿಗಳು ಬೆನ್ನತ್ತಿ ಬಂದರೆ ಅಸಮರ್ಪಕ ರಸ್ತೆಯಲ್ಲಿ ವೇಗವಾಗಿ ಮನೆಗೂ ಬರಲಾಗುವುದಿಲ್ಲ. ಹೀಗಾಗಿ, ನಾಡಗುಳಿ ರಸ್ತೆಯನ್ನು ಸರ್ವ ಋುತು ರಸ್ತೆಯಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಗರಕ್ಕೆ ತೆರಳಿ ವಾಪಸ್‌ ಮನೆಗೆ ಬೆಳಕಿರುವಾಗಲೇ ಬರಬೇಕಾಗುತ್ತದೆ. ಕಾಡು ಪ್ರಾಣಿಗಳು ಎದುರಾದರೆ ಎಂಬ ಭಯ ನಮಗೆ ಸದಾ ಕಾಡುತ್ತದೆ.

-ಭಾಸ್ಕರ ಹೆಗಡೆ, ನಾಡಗುಳಿ ಗ್ರಾಮಸ್ಥ

ಯಲ್ಲಾಪುರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ: ತಾಲೂಕಿನ ಮಂಚೀಕೇರಿ ಅರಣ್ಯ ವಲಯದ ಕುಂದರಗಿ ಶಾಖಾ ವ್ಯಾಪ್ತಿಯ ಮಾವಿನಕಟ್ಟಾ, ಕುಂದರಗಿ, ಭರಣಿ ಗ್ರಾಮಗಳ ಪರಿಸರದ ಅರಣ್ಯದಲ್ಲಿ ಕಳೆದ 5-6 ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಕಾಡಿನತ್ತ ಓಡಿಸಿದ ಬಗ್ಗೆ ವರದಿಯಾಗಿದೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಚಿರತೆಯೊಂದು ಸಂಚರಿಸುತ್ತಿರುವುದು ಸಾರ್ವಜನಿಕರ ಭಯಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ಹೆಗಡೆ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟಮಾರ್ಗದರ್ಶನದಂತೆ ವಲಯಾರಣ್ಯಾಧಿಕಾರಿ ಅಮಿತ್‌ ಚವ್ಹಾಣ ತಮ್ಮ ಸಿಬ್ಬಂದಿ ನೆರವಿನೊಂದಿಗೆ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲಾಯಿತು. ಈ ಮೂಲಕ ಚಿರತೆಯನ್ನು ದಟ್ಟಅರಣ್ಯ ಪ್ರದೇಶದತ್ತ ಓಡಿಸುವಲ್ಲಿ ಯಶಸ್ವಿಯಾದರು.ಅರಣ್ಯ ಇಲಾಖೆಯ ತುರ್ತು ಸ್ಪಂದನೆಯ ಈ ಕಾರ್ಯಕ್ಕೆ ಈ ಪ್ರದೇಶದ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದರು.

click me!