ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ 932 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.4.97ರಷ್ಟಿದೆ. 902 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ 16 ವರ್ಷದ ಬಾಲಕ ಮೃತಪಟ್ಟ ವರದಿಯಾಗಿದೆ.
ಬೆಂಗಳೂರು (ಜು.09): ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ 932 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.4.97ರಷ್ಟಿದೆ. 902 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ 16 ವರ್ಷದ ಬಾಲಕ ಮೃತಪಟ್ಟ ವರದಿಯಾಗಿದೆ. ಯುವಕ ಕಳೆದ ಗುರುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನ್ನು. ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕ ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ನಗರದಲ್ಲಿ ಸದ್ಯ 6,062 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 93 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6323 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 829 ಮಂದಿ ಮೊದಲ ಡೋಸ್, 2119 ಮಂದಿ ಎರಡನೇ ಡೋಸ್ ಮತ್ತು 3375 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಮತ್ತೆ 1000ಕ್ಕೂ ಅಧಿಕ ಕೋವಿಡ್ ಕೇಸ್: 21 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಪತ್ತೆ
ನಗರದಲ್ಲಿ 17030 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 13277 ಆರ್‌ಟಿಪಿಸಿಆರ್ ಹಾಗೂ 3753 ಮಂದಿಗೆ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್ ಪ್ರದೇಶ ಸೃಷ್ಟಿಯಾಗಿಲ್ಲ. ಆರ್‌ಆರ್‌ನಗರ ವಲಯದಲ್ಲಿ ಒಂದು ಪ್ರದೇಶ ಕಂಟೈನ್ಮೆಂಟ್‌ನಿಂದ ಮುಕ್ತವಾಗಿದೆ. ನಗರದಲ್ಲಿ ಒಟ್ಟು 21 ಕಂಟೈನ್ಮೆಂಟ್ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಮಾತನಾಡುವವನಿಗಿಂತ ಮೌನಿಗೆ ಕೋವಿಡ್ ಸಾಧ್ಯತೆ: ಇಬ್ಬರು ವ್ಯಕ್ತಿಗಳು ಮಾಸ್ಕ್ ಇಲ್ಲದೆ ಮಾತುಕತೆಯಲ್ಲಿ ತೊಡಗಿದ್ದಾಗ ಒಬ್ಬ ವ್ಯಕ್ತಿ ಮಾತ್ರ ಮಾತನಾಡುತ್ತಿದ್ದು, ಮತ್ತೊಬ್ಬ ವ್ಯಕ್ತಿ ಮೌನವಾಗಿದ್ದರೆ ಮೌನವಾಗಿರುವ ವ್ಯಕ್ತಿಗೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇಬ್ಬರೂ ವ್ಯಕ್ತಿಗಳು ಮಾತನಾಡುತ್ತಿದ್ದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂಬ ಹೊಸ ವಿಷಯವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.
ರಾಜ್ಯಗಳಿಗೆ ಮತ್ತಷ್ಟು ಕೋವಿಡ್ ಮುನ್ನೆಚ್ಚರಿಕೆ ಸೂಚನೆ: ಕೇಂದ್ರ ಸರ್ಕಾರ ತಾಕೀತು
ನಾಲ್ಕು ಅಡಿ ಅಂತರದಲ್ಲಿ ನಿಂತು ವ್ಯಕ್ತಿಗಳು ಪರಸ್ಪರ ಮಾತನಾಡುತ್ತಿದ್ದಾಗ ಎಂಜಲಿನ ಸಣ್ಣ ಹನಿ (ಡ್ರಾಪ್‌ಲೆಟ್) ಹರಡುವ ರೀತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಇಬ್ಬರು ವ್ಯಕ್ತಿಗಳು ಮಾತನಾಡುವಾಗ ಪರಸ್ಪರ ಕಣ್ಣಿನ ಸಂಪರ್ಕ ಇಟ್ಟುಕೊಂಡೆ ತಲೆಯನ್ನು ಪರಸ್ಪರ ವಿರುದ್ಧ ದಿಕ್ಕಿಗೆ 9 ಡಿಗ್ರಿ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಕೊರೋನಾ ಸೋಂಕು ಗಾಳಿಯ ಮೂಲಕ ಹರಡುತ್ತದೆ ಎಂಬ ಕಾರಣಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.