ಕೊಪ್ಪಳ ಜಿಲ್ಲೆಯಲ್ಲಿ ಶೇ.90 ಗಣಿಗಾರಿಕೆ ಸಕ್ರಮ: ಸಂಸದ ರಾಜಶೇಖರ ಹಿಟ್ನಾಳ

Kannadaprabha News   | Kannada Prabha
Published : Jun 28, 2025, 10:35 PM IST
Rajashekar Hitnal

ಸಾರಾಂಶ

ಜಿಲ್ಲಾದ್ಯಂತ ನಡೆಯುತ್ತಿರುವ ಕಲ್ಲು, ಗ್ರಾವೆಲ್ ಮತ್ತು ಮರಳು ಗಣಿಗಾರಿಕೆ ಶೇ. 90ರಷ್ಟು ಸಕ್ರಮವಾಗಿಯೇ ಇದ್ದು, ಉಳಿದ ಶೇ. 10ರಷ್ಟು ವಿವಿಧ ಕಾರಣಗಳಿಂದ ಅಕ್ರಮವಾಗಿರಬಹುದು.

ಕೊಪ್ಪಳ (ಜೂ.28): ಜಿಲ್ಲಾದ್ಯಂತ ನಡೆಯುತ್ತಿರುವ ಕಲ್ಲು, ಗ್ರಾವೆಲ್ ಮತ್ತು ಮರಳು ಗಣಿಗಾರಿಕೆ ಶೇ. 90ರಷ್ಟು ಸಕ್ರಮವಾಗಿಯೇ ಇದ್ದು, ಉಳಿದ ಶೇ. 10ರಷ್ಟು ವಿವಿಧ ಕಾರಣಗಳಿಂದ ಅಕ್ರಮವಾಗಿರಬಹುದು. ಆದರೆ, ಜನರು ದುಡಿದು ತಿನ್ನುವುದು ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಕಿಡಿಕಾರಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲವೂ ಅಕ್ರಮವೆಂದು ಹೇಳಲಾಗದು.

ನಿಯಮಾನುಸಾರ ಅನುಮತಿ ಪಡೆದು, ತೆರಿಗೆ ಪಾವತಿಸಿ ರಾಜಸ್ವ ಪಾವತಿಸಿದರೆ ದುಡಿಯಲು ಗಣಿಗಾರಿಕೆ ನಡೆಸಿದರೇ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನಾನು ಹೇಳುತ್ತಿರುವುದು ಕೇವಲ ಮರಳು ಗಣಿಗಾರಿಕೆ ಕುರಿತು ಅಲ್ಲ, ಎಲ್ಲ ಗಣಿಗಾರಿಕೆಯಲ್ಲಿಯೂ ಶೇ. 90ರಷ್ಟು ಸಕ್ರಮವಾಗಿವಾಗಿಯೇ ಇವೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಜನರು ದುಡಿದು ತಿನ್ನುತ್ತಿರುವುದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು. ಮರಳು ಗಣಿಗಾರಿಕೆ ವಿರುದ್ಧ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಮವಹಿಸಿದೆ. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುತ್ತದೆ.

ಹಾಗಂತ ಎಲ್ಲ ಗಣಿಗಾರಿಕೆಯೂ ತಪ್ಪು ಎಂದು ಹೇಳುವುದು ಸರಿಯಲ್ಲ. ಅಭಿವೃದ್ಧಿಯಾಗಬೇಕು ಎಂದರೇ ಗಣಿಗಾರಿಕೆಯೂ ಆಗಬೇಕು ಎಂದ ಅವರು, ಮರಳು ಹೇರುವಾಗ ಒಂದಿಷ್ಟು ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲೊಂದು ದೇವಸ್ಥಾನ ನಿರ್ಮಿಸಲಾಗುತ್ತಿದ್ದು ಅದಕ್ಕೆ ಮರಳು ಬೇಕೆಂದು ನಮಗೆ ಕರೆ ಮಾಡಿ ಕೇಳುತ್ತಾರೆ. ಆಗ ಕೊಡಬಾರದೆ ಎಂದು ಪ್ರಶ್ನಿಸಿದರು. ಇದು ಸೇರಿದಂತೆ ಇದರ ಹೆಸರಿನಲ್ಲಿ ಒಂದಷ್ಟು ಅಕ್ರಮ ನಡೆಯುತ್ತಿದ್ದರೇ ಅದನ್ನು ಅಧಿಕಾರಿಗಳು ತಡೆಯಲಿ. ಆದರೆ, ಇಡೀ ಗಣಿಗಾರಿಕೆಯೇ ಬೇಡ ಎನ್ನುವುದು ಸರಿಯಲ್ಲ ಎಂದರು.

ಮರಳು ಸಾಗಾಟದ ಲಾರಿ, ಟ್ರ್ಯಾಕ್ಟರಿಗೆ ನನ್ನ ಸೇರಿದಂತೆ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿಕೊಂಡರೇ ತಪ್ಪೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮರಳು ಸಾಗಾಟ ಸೇರಿದಂತೆ ಯಾವುದೇ ವಾಹನಕ್ಕೆ ನನ್ನ ಫೋಟೋ ಹಾಕಿಕೊಂಡು ಹೊಡೆಯುತ್ತಿದ್ದರೇ ಅದು ಅಭಿಮಾನದಿಂದ ಕಾರ್ಯಕರ್ತರು ಹಾಕಿಕೊಳ್ಳುತ್ತಿರಬಹುದು. ಆದರೆ, ಅವರು ಅಕ್ರಮವಾಗಿ ಮರಳು ಹೇರುತ್ತಿದ್ದರೇ ಅವರ ಮೇಲೆ ಕ್ರಮವಹಿಸಲಿ ಎಂದರು.

ಜುಲೈ ಅಂತ್ಯಕ್ಕೆ ಕ್ರಸ್ಟ್‌ಗೇಟ್‌ ಕಾಮಗಾರಿ ಪೂರ್ಣ: ತುಂಗಭದ್ರಾ ಜಲಾಯಶದ ಕ್ರಸ್ಟ್‌ಗೇಟ್‌ 19ರ ಕಾಮಗಾರಿ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ತುಂಡರಿಸಿದ್ದ ಕ್ರಸ್ಟ್‌ಗೇಟ್‌ 19ಕ್ಕೆ ಸ್ಟಾಪ್‌ಲಾಗ್‌ ಎಲಿಮೆಂಟ್‌ ಅಳವಡಿಸಿದ್ದರಿಂದ ರೈತರ ಎರಡು ಬೆಳೆಗೆ ನೀರು ಕೊಡಲು ಅನುಕೂಲವಾಯಿತು. ಆದರೆ, ತಜ್ಞರು ಆಗಮಿಸಿ ಪರಿಶೀಲಿಸಿದ ಬಳಿಕ ಗೇಟ್‌ನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಸಬೇಕೆಂದು ಹೇಳಿದರು.

ಇದೀಗ ಟೆಂಡರ್‌ ಪ್ರಕಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಉಳಿದ ಗೇಟ್‌ಗಳು ಸಹ ಸವಕಳಿಯಾಗಿವೆ ಎಂದು ಕೇಂದ್ರ ಜಲ ಆಯೋಗದ ತಜ್ಞರು ವರದಿ ನೀಡಿದ್ದು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಮಾಡುವಂತೆ ಶಿಫಾರಸು ಮಾಡಿದ್ದಾರೆ. ಈ ಕುರಿತು ತುಂಗಭದ್ರಾ ಬೋರ್ಡ್‌ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು. ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರೋಬ್ಬರಿ 12ರಿಂದ 13 ಲಕ್ಷ ಎಕರೆ ನೀರಾವರಿ ಪ್ರದೇಶ ಹೊಂದಿದೆ. ಹೀಗಾಗಿ, ರೈತ ಹಿತದೃಷ್ಟಿಯಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಮಾಡದೆ, ತಂತ್ರಜ್ಞಾನ ಬಳಸಿಕೊಂಡು ನೀರು ಸಂಗ್ರಹಣೆಯನ್ನು ಪ್ರತಿ ವರ್ಷದಂತೆ ಮಾಡಬೇಕು ಎಂದು ರೈತರ ಪರವಾಗಿ ಮನವಿ ಮಾಡಿದ್ದು, ತುಂಗಭದ್ರಾ ಬೋರ್ಡ್ ಈ ದಿಸೆಯಲ್ಲಿ ಕ್ರಮ ವಹಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

PREV
Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್