ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿದ್ದ 5 ಮಂದಿ ಪೊಲೀಸ್ ಸಿಬ್ಬಂದಿ ಗುಣಮುಖರಾಗಿದ್ದು, ಅವರನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಉಡುಪಿ(ಜೂ. 05): ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿದ್ದ 5 ಮಂದಿ ಪೊಲೀಸ್ ಸಿಬ್ಬಂದಿ ಗುಣಮುಖರಾಗಿದ್ದು, ಅವರನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕಳೆದ ವಾರ 4 ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿತ್ತು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ತಗಲಿದ್ದ ಒಟ್ಟು 9 ಮಂದಿ ಪೊಲೀಸ್ ಸಿಬ್ಬಂದಿ ಬಿಡುಗಡೆಯಾಗಿದ್ದಾರೆ. ಇದರಿಂದ ಪೊಲೀಸ್ ಇಲಾಖೆಯಲ್ಲಿದ್ದ ಆತಂಕ ದೂರವಾಗಿದೆ.
ಗಡಿಯಿಂದ 2 ಮೀಟರ್ ಹಿಂದೆ ಸರಿದ ಚೀನಾ ಸೇನೆ
ಗುರುವಾರ ಬಿಡುಗಡೆಯಾದ ಪೊಲೀಸರಲ್ಲಿ ಶಂಕರನಾರಾಯಣ ಠಾಣೆಯ ಮಹಿಳಾ ಸಿಬ್ಬಂದಿಯೂ ಸೇರಿದ್ದಾರೆ. ಇತರ 4 ಮಂದಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾಗಿದ್ದಾರೆ.
ನಿಜವಾದ ಯೋಧರು: ಡಿಸಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕೊರೋನಾ ತಡೆಯುವಲ್ಲಿ ಪೊಲೀಸರು ಹಗಲಿರಳು ನಿಷ್ಠೆಯಿಂದ ದುಡಿದಿದ್ದಾರೆ. ಪರಿಣಾಮ ಅವರು ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬಂದು ಅವರಿಗೂ ಸೋಂಕು ತಗಲಿದೆ. ಅವರು ಸೋಂಕಿನ ವಿರುದ್ಧ ಯುದ್ಧ ಮಾಡಿದ ಯೋಧರು. ಅವರನ್ನು ಸಂಶಯದಿಂದ ನೋಡಬಾರದು. ಅವರ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಗೌರವ ಇರಬೇಕು. ಜೊತೆಗೆ ಸೋಂಕಿತರನ್ನು ಕೂಡ ಯಾರೂ ಅಸ್ಪೃಶ್ಯರಂತೆ ನೋಡಬಾರದು ಎಂದು ಆಶಿಸಿದ್ದಾರೆ.
ಜೊತೆಗೆ ಕೊರೋನಾ ವಿರುದ್ಧದ ಯುದ್ಧದಲ್ಲಿ ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು ಕೆಲಸ ಮಾಡುತಿದ್ದಾರೆ. ಅವರೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.