ಅಂಗಿ ಹರಿದಿದ್ದಕ್ಕೆ ಹೈ ಕೋರ್ಟ್ ಮೆಟ್ಟಿಲೇರಿದ ಬಾಲಕ : ಎಲ್ಲಾ ಮಕ್ಕಳಿಗೂ ಈಗ ಸಮವಸ್ತ್ರ

By Kannadaprabha News  |  First Published Aug 30, 2019, 11:32 AM IST

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಂಜುನಾಥ ದೇವರಾಜ ಹರಿಜನ್‌ ಹೋರಾಟ ಫಲ ನೀಡುವಂತೆ ಮಾಡಿದೆ. ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ನೀಡುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಮಂಜುನಾಥನ ಯಶಸ್ಸು.


ಸೋಮರಡ್ಡಿ ಅಳವಂಡಿ

ಕೊಪ್ಪಳ [ಆ.30]:  ಹರಿದಿದ್ದ ಅಂಗಿ ವಿದ್ಯಾರ್ಥಿಯನ್ನು ಸರ್ಕಾರದ ಆಡಳಿತ ವ್ಯವಸ್ಥೆಯ ಲೋಪದೋಷಗಳ ವಿರುದ್ಧ ಹೋರಾಡಿ ಗೆಲ್ಲಲು ಕಾರಣವಾಯಿತು ಎಂದರೆ ನಂಬಲು ಅಸಾಧ್ಯ.

Tap to resize

Latest Videos

ಆದರೂ ವಿದ್ಯಾರ್ಥಿಯೋರ್ವನ ಗೆಲುವಿನ ಕಥೆ ಇಲ್ಲಿದೆ.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಂಜುನಾಥ ದೇವರಾಜ ಹರಿಜನ್‌ ಹೋರಾಟ ಫಲ ನೀಡುವಂತೆ ಮಾಡಿದೆ. ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ನೀಡುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಮಂಜುನಾಥನ ಯಶಸ್ಸು.

ಮಂಜುನಾಥ ಅದೊಂದು ದಿನ ಶಾಲೆಗೆ ತೆರಳಲು ಸಿದ್ಧನಾಗಿದ್ದ. ಆದರೆ ಆತನ ಧರಿಸಿದ್ದ ಅಂಗಿ ಗಲೀಜಾಗಿತ್ತು. ಮತ್ತೊಂದು ಅಂಗಿಯನ್ನು ಪೋಷಕರು ನೀಡಿದರಾದರೂ ಅದೂ ಕೂಡ ಮಾಸಿ, ಹರಿದಿತ್ತು. ಇದರಿಂದ ಮುಖ ಸಪ್ಪೆ ಮಾಡಿದ ಮಂಜುನಾಥ, ‘ಯಾಕಪ್ಪ ನನಗೆ ಇನ್ನೊಂದು ಅಂಗಿ ಇಲ್ಲವೇ, ಇದನ್ನೇ ಹಾಕಿ ಕೊಂಡು ಹೋಗಬೇಕೆ’ ಎಂದು ಪ್ರಶ್ನಿಸಿದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಸರ್ಕಾರದವರು ಈ ವರ್ಷ ಒಂದೇ ಜೊತೆ ಸಮವಸ್ತ್ರ ನೀಡಿದ್ದಾರೆ, ಇನ್ನೊಂದು ಜೊತೆ ಇನ್ನೂ ನೀಡಿಲ್ಲ’ ಎಂದು ಪೋಷಕರು ತಿಳಿಸಿದರು. ‘ಸರ್ಕಾರದವರು ಮಾಡುವ ಈ ಅನ್ಯಾಯವನ್ನು ನಾವು ಪ್ರಶ್ನಿಸಬಾರದೇ, ಇಂತಹ ಪರಿಸ್ಥಿತಿ ಆದಲ್ಲಿ ನಾವು ಶಾಲೆಗೆ ಹೇಗೆ ಹೋಗಬೇಕು’ ಎಂದು ಮಂಜುನಾಥ ಮತ್ತೆ ಪ್ರಶ್ನಿಸಿದಾಗ, ತಂದೆ ದೇವರಾಜ ಹರಿಜನ, ‘ಪ್ರಶ್ನೆ ಮಾಡಬಹುದು, ಸರ್ಕಾರದ ಎದುರು ಅಥವಾ ನ್ಯಾಯಾಲಯದಲ್ಲಿ’ಯೂ ಹೇಳಿದರು.

ಮಗನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ದೇವರಾಜ ಹರಿಜನ ಅವ​ರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ. ಅ​ದ​ಕ್ಕಾಗಿ ಹೈಕೋರ್ಟ್‌ ವಕೀಲರೊಬ್ಬರಿಂದ ಕಾನೂನು ಸಲಹೆ ಪಡೆಯುತ್ತಾರೆ. ವಕೀಲ ಅಜಿತ್‌ ಅವರು ‘ನಿಮ್ಮ ಮಗನ ಮೂಲಕವೇ ಅರ್ಜಿ ಹಾಕಿಸಿ’ ಎಂದು ಸಲಹೆ ನೀಡುತ್ತಾರೆ. ಮಗ ಮಂಜುನಾಥನ ಮೂಲಕವೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2019ರ ಮಾ.25ರಂದು ಹಾಕಿಸುತ್ತಾರೆ. ಹೀಗೆ ಮಂಜುನಾಥನ ಹೋರಾಟ ಪ್ರಾರಂಭವಾಗುತ್ತದೆ.

ಮಹತ್ವದ ತೀರ್ಪು:  ಹೈಕೋ​ರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಹಾಗೂ ನ್ಯಾಯಮೂರ್ತಿ ಮಹ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ ಮಂಜುನಾಥನ ಅರ್ಜಿಯನ್ನು ಸುದೀರ್ಘ ವಿಚಾರಣೆ ಮಾಡಿ, ಮಹತ್ವದ ತೀರ್ಪು ನೀಡಿದೆ. 2 ತಿಂಗಳೊಳಗಾಗಿ ರಾಜ್ಯಾದ್ಯಂತ 1ರಿಂದ 8ನೇ ತರಗತಿವರೆಗೂ ಇರುವ ಅರ್‌ಟಿಇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸಾಕ್ಸ್‌ ಮತ್ತು ಶೂ ನೀಡುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. ಅಲ್ಲದೆ ಅರ್ಜಿದಾರ ವಿದ್ಯಾರ್ಥಿಗೆ 2 ವಾರದೊಳಗಾಗಿ 2 ಜೊತೆ ಸಮವಸ್ತ್ರ, ಸಾಕ್ಸ್‌ ಮತ್ತು ಶೂ ನೀಡುವಂತೆಯೂ ಪ್ರತ್ಯೇಕವಾಗಿ ಸೂಚನೆ ನೀಡಿದೆ ಹೈಕೋರ್ಟ್‌.

ಎಲ್ಲರಿಗೂ ನೀಡಬೇಕು:

ಕೇವಲ ಆರ್‌ಟಿಇ ವಿದ್ಯಾರ್ಥಿಗಳಿಗೆ ಅಲ್ಲ, ಎಲ್ಲ ಎಸ್ಸಿ, ಎಸ್ಟಿಯ ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರ ಎರಡನೇ ಜೊತೆ ಸಮವಸ್ತ್ರ ನೀಡಬೇಕು ಎನ್ನುವುದು ನನ್ನ ಹಕ್ಕೊತ್ತಾಯವಾಗಿದೆ ಎನ್ನುತ್ತಾನೆ ಮಂಜುನಾಥ. ನಿಯಮಾನುಸಾರ ಕೊಡಬೇಕಾಗಿರುವುದಕ್ಕೆ ಕೊಡದೇ ಸರ್ಕಾರ ನಿರ್ಲಕ್ಷ್ಯ ಮಾಡಿದ್ದನ್ನು ನಾನು ಪ್ರಶ್ನೆ ಮಾಡಿದ್ದೇನೆ, ನಾನು ಕೇಳಿರುವುದು ಕೇವಲ ಆರ್‌ಟಿಇ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ಎಲ್ಲರಿಗೂ ಸರ್ಕಾರ ಸಮವಸ್ತ್ರ ನೀಡಬೇಕು ಎನ್ನುತ್ತಾನೆ.

ನಾನು ಹಾಕಿದ ಅರ್ಜಿಯಿಂದ ಸಮವಸ್ತ್ರ ನೀಡುವಂತೆ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿರುವುದನ್ನು ಕೇಳಿ ಸಂತೋಷವಾಗಿದೆ. ನನ್ನ ಹೋರಾಟಕ್ಕೆ ನಮ್ಮ ಅಪ್ಪನೂ ಸಾಥ್‌ ನೀಡಿದ್ದರಿಂದಲೇ ಇದು ಸಾಧ್ಯವಾಯಿತು.

-ಮಂಜುನಾಥ, ನಾಲ್ಕನೇ ತರಗತಿ, ಸರ್ಕಾರಿ ಪ್ರಾಥಮಿಕ ಶಾಲೆ ಕಿನ್ನಾಳ - ಕೊಪ್ಪಳ

ತನ್ನ ಅಂಗಿ ಹರಿದಿದ್ದಕ್ಕೆ ನನ್ನ ಮಗ ಪ್ರಶ್ನೆ ಮಾಡಿದ. ಸರ್ಕಾರ ಎರಡನೇ ಜೊತೆ ಸಮವಸ್ತ್ರ ನೀಡಿಲ್ಲ ಎಂದಾದರೆ ಕೇಳಬಾರದೆ ಎಂದು ಮರು ಪ್ರಶ್ನೆ ಮಾಡಿದ. ಮಗನ ಪ್ರಶ್ನೆಯನ್ನು ಚಿವು​ಟ​ಬಾ​ರದು ಎಂದು ಕೋರ್ಟ್‌ ಮೆಟ್ಟಿಲು ಏರಿದೆವು. ರಾಜ್ಯದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವಂತೆ ಆದೇಶವಾಗಿದ್ದು ಸಂತೋಷವಾಯಿತು.

-ದೇವರಾಜ ಹರಿಜನ, ವಿದ್ಯಾರ್ಥಿಯ ತಂದೆ.

click me!