2025 ಬಂತು, ಕೋಟಿ ಕೋಟಿ ಎಣ್ಣೆಹೊಳೆ ಹರಿಸಿತು: ಮದ್ಯದ ನಶೆಯಲ್ಲಿ ತೇಲಾಡಿದ ಪಾನಪ್ರಿಯರು!

By Kannadaprabha News  |  First Published Jan 2, 2025, 12:25 PM IST

ಹೊಸ ವರ್ಷಕ್ಕೆ ಪೊಲೀಸರು ಕೊಟ್ಟ ಇಂತಹ ಅಪರೂಪದ ಗಿಫ್ಟ್ ಹೇಳಿಕೊಳ್ಳುವಂತಿಲ್ಲ, ನೋವು ಸಹಿಸಿಕೊಳ್ಳೋದು ತಪ್ಪಲಿಲ್ಲ ಎಂಬಂತಹ ಸ್ಥಿತಿ ಸಹ ಕೆಲವರಿಗೆ ವರ್ಷದ ಕಡೇ ದಿನ- ಮೊದಲ ದಿನದ ನೆನಪಾಗುಳಿದಿದ್ದು ಸುಳ್ಳಲ್ಲ.


ದಾವಣಗೆರೆ(ಜ.02):  ಹೊಸ ವರ್ಷಾಚರಣೆ ಹೆಸರಿನಲ್ಲಿ ಸುಮಾರು ₹7.26 ಕೋಟಿ ಮೌಲ್ಯದ 1.42 ಲಕ್ಷ ಲೀಟರ್ ಲಿಕ್ಕರ್ ಮದ್ಯ, ₹67.33 ಲಕ್ಷ ಮೌಲ್ಯದ 32,328 ಲೀಟರ್ ಬಿಯರ್ ಒಂದೇ ರಾತ್ರಿಯಲ್ಲಿ ನಗರ, ಜಿಲ್ಲೆಯಲ್ಲಿ ಹೊಳೆಯಂತೆ ಹರಿದಿದೆ. ಇದು ಜಿಲ್ಲೆಯಲ್ಲಿ ಹೊಸ ವರ್ಷ 2025 ಅನ್ನು ಪಾನಪ್ರಿಯರು ನಶೆಯಲ್ಲೇ ಸ್ವಾಗತಿಸಿದ ಪರಿಯಾಗಿದ್ದು, ಸರ್ಕಾರದ ಬೊಕ್ಕಸ ತುಂಬಲು ಪರೋಕ್ಷವಾಗಿ ಮದ್ಯಪ್ರಿಯರು ಅಳಿಲು ಸೇವೆ ಸಮರ್ಪಿಸಿದ್ದಾರೆ!

ನಗರ, ಜಿಲ್ಲಾದ್ಯಂತ ಮಂಗಳವಾರ ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮ ರಂಗೇರ ತೊಡಗಿತ್ತು. ಕೆಲವರಂತೂ ವಿಶೇಷ ಆಚರಣೆಗೆ ಸಂಜೆ 7ರಿಂದಲೇ ನಿರ್ದಿಷ್ಟ ಸ್ಥಳಗಳಲ್ಲಿ ಸೇರಿಕೊಂಡರೆ, ಮತ್ತೆ ಕೆಲವರು ಊರ ಹೊರಗಿನ ಹೋಟೆಲ್‌ಗಳು, ರೆಸಾರ್ಟ್‌ಗಳು, ಆಫೀಸರ್ಸ್ ಕ್ಲಬ್‌, ರಿಕ್ರಿಯೇಷನ್ ಕ್ಲಬ್‌ಗಳು, ಲಾಡ್ಜ್‌ಗಳು, ಬಾರ್ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಸ್ನೇಹಿತರು, ಸಹುದ್ಯೋಗಿಗಳೊಂದಿಗೆ ಸೇರಿ ನವವರ್ಷಾರಾಧನೆ ಮಾಡಿದ್ದಾರೆ.

Tap to resize

Latest Videos

ಕರೆಂಟ್ ವೈರ್ ಮೇಲೆ ಕುಡುಕನ ಹೊಸ ವರ್ಷ: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲೇ ಹೊಡಿ ಬಡಿ!

ಹಣದ ಹೊಳೆ ಹರಿಸಿ, ಮದ್ಯ ಖರೀದಿಸ ಸೇವಿಸಿ, ಅಮಲಿನಲ್ಲಿ ವಾಲಾಡುತ್ತ, ತೂರಾಡುತ್ತಾ ಹ್ಯಾಪಿ ನ್ಯೂ ಇಯರ್... ಹ್ಯಾಪಿ ನ್ಯೂ ಇಯರ್.. ಅಂತಾ ಹೇಳಿದವರಿಗೆ ಪುನಃ ಪುನಃ ಶುಭ ಕೋರಿ, ಖುಷಿ ಅನುಭವಿಸಿದ್ದಾರೆ. 2025ರ ಸ್ವಾಗತಕ್ಕಾಗಿ ಮದ್ಯದ ಪಾರ್ಟಿಗಳಿಗಂತೂ ಕೊರತೆಯೇ ಇರಲಿಲ್ಲ. ಎಲ್ಲ ಕಡೆ ಕುರಿ, ಕೋಳಿಗಳು, ಮೀನುಗಳ ಖಾದ್ಯಗಳು, ಊಟಗಳ ಆತಿಥ್ಯ ಜೋರಾಗಿಯೇ ಇತ್ತು. ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯಮಿಗಳು, ವರ್ತಕರು ತಮ್ಮ ಸ್ನೇಹಿತರ ಹೊಸ ವರ್ಷವನ್ನು ತಮ್ಮದೇ ರೀತಿಯಲ್ಲಿ ಸಂಭ್ರಮಿಸಿದರು.

ಹೊಸ ವರ್ಷದ ಸ್ವಾಗತದ ವೇಳೆ ಮದ್ಯದ ಪಾರ್ಟಿಗಳು ಜೋರಾಗಿ ನಡೆದಿವೆ. ವರ್ಷದ ಕಡೆಯ ದಿನವಾಗಿದ್ದ ಡಿ.31ರಂದು ಸರ್ಕಾರಿ ಮದ್ಯದ ಡಿಪೋದಲ್ಲಿ ₹7.26 ಕೋಟಿ ಮೌಲ್ಯದ 1.47 ಲಕ್ಷ ಲೀಟರ್ ಲಿಕ್ಕರ್‌ ಮದ್ಯ, ₹67.33 ಲಕ್ಷ ಮೌಲ್ಯದ 32,328 ಲೀಟರ್ ಬಿಯರ್ ಮಾರಾಟವಾಗಿದೆ ಎನ್ನಲಾಗಿದೆ.

ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸೂಚನೆಯಂತೆ ವೈನ್ ಶಾಪ್, ಬಾರ್ ಅಂಡ್ ರೆಸ್ಟೋರೆಂಟ್‌, ಹೋಟೆಲ್‌ಗಳನ್ನು ನಿಗದಿತ ಅವದಿಯಲ್ಲೇ ಮುಚ್ಚಿಸಲಾಯಿತು. ಇಡೀ ರಾತ್ರಿ ಮದ್ಯದ ಅಮಲಿನಲ್ಲಿ, ನಶೆಯಲ್ಲೇ ತೇಲಾಡಬೇಕು, ಹಾರಾಡಬೇಕೆಂಬ ಆಸೆ ಹೊತ್ತಿದ್ದ ಮದ್ಯಪ್ರಿಯರಿಗೆ ಅಲ್ಲಲ್ಲಿ ಪೊಲೀಸರ ಬೆತ್ತದೇಟುಗಳು ಸಹ ಬಿದ್ದಿವೆ ಎನ್ನಲಾಗಿದೆ.

ಮದ್ಯದ ಕೊರತೆ ಆಗಬಾರದೆಂಬ ದೂರಾಲೋಚನೆ ಹೊಂದಿದ್ದ ಕೆಲವರಂತೂ ಮುಂಚೆಯೇ ಪಾರ್ಸೆಲ್ ಕೊಂಡೊಯ್ದು, ಬೇರೆಡೆ ವ್ಯವಸ್ಥೆ ಸಹ ಮಾಡಿಕೊಂಡಿದ್ದರು. ಆದರೂ, ಅನೇಕರು ತಮಗೆ ತೃಪ್ತಿ ಆಗುವಷ್ಟು ಮದ್ಯ ಸಿಕ್ಕಿಲ್ಲವೆಂಬು ಅಮಲಿನಲ್ಲಿ ಕನವರಿಸುತ್ತಿದ್ದುದು ಕಂಡುಬಂದಿತು.

2025ರ ಹೊಸ ವರ್ಷವನ್ನು ಕುಟುಂಬಗಳಲ್ಲಿ ಮಕ್ಕಳು, ಮಹಿಳೆಯರು, ಯುವತಿಯರು, ನೆರೆ ಹೊರೆಯವರ ಜೊತೆಗೆ ಸಂಭ್ರಮದಿಂದ ಆಚರಿಸಿದರು. ಪರಸ್ಪರ ಶುಭ ಕೋರಿದರು. ಇದು ಮೊಬೈಲ್‌ ಜಮಾನ. ಹೀಗಿರುವಾಗ ಸಂಭ್ರಮ ಇನ್ನೂ ಒಂದೆರಡು ಹೆಜ್ಜೆ ಮುಂದೇ ಹೋಗಿತ್ತು. ಎಲ್ಲರ ಶುಭಾಷಯಗಳು, ಸಂಭ್ರಮದ ಕ್ಷಣಗಳ ಫೋಟೋ-ವಿಡಿಯೋಗಳು ಮೊಬೈಲ್‌ಗಳಲ್ಲಿ ಹರಿದಾಡಿದವು.

ಕೇಕ್‌ ಕತ್ತರಿಸುವ, ಪರಸ್ಪರ ಆಲಂಗಿಸಿ, ಶುಭಾಷಯ ಕೋರುವ, ಮದ್ಯಪ್ರಿಯರು ಗ್ಲಾಸಿಗೆ ಗ್ಲಾಸು ತಾಕಿಸಿ ಚಿಯರ್ಸ್‌ ಎಂದು ಹೇಳುವಾಗಿನ ಕ್ಷಣಗಳ ಫೋಟೋಗಳು, ವಿಡಿಯೋಗಳು ಫೇಸ್‌ಬುಕ್‌, ವಾಟ್ಸಪ್‌ ಗ್ರೂಪ್ಸ್‌, ಇನ್‌ಸ್ಟಾಗ್ರಾಮ್‌ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಶರವೇಗದಲ್ಲಿ ಹರಿದಾಡಿದವು. ಬಹುತೇಕರು ಸಂಭ್ರಮದ ಮಧ್ಯೆ ಶುಭಾಶಯಗಳ ಮೆಸೇಜು ಕಳಿಸುವ ಬ್ಯುಸಿಯಲ್ಲಿದ್ದುದು ಕಂಡುಬಂತು.

ಮಂಗಳವಾರ ರಾತ್ರಿಯಿಂದಲೇ ಎಲ್ಲೆಡೆ ಹೊಸ ವರ್ಷಾಚರಣೆ ಸಂಭ್ರಮ ಮನೆ ಮಾಡಿತ್ತು. ಬೇಕರಿ, ಸಿಹಿ ತಿನಿಸುಗಳ ಅಂಗಡಿ, ಕುರುಕಲು ತಿಂಡಿ ಅಂಗಡಿ, ಹೋಟೆಲ್‌ಗಳಲ್ಲಿ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಗಿಫ್ಟ್‌ ಶಾಪ್‌ಗಳು, ಬಟ್ಟೆ ಅಂಗಡಿಗಳಲ್ಲೂ ಜನರು ಕೊಂಚ ಹೆಚ್ಚಾಗಿಯೇ ಇದ್ದುದು ಗೋಚರಿಸಿತು. ಬೇಕರಿಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಬಣ್ಣಬಣ್ಣದ ವಿದ್ಯುದೀಪಗಳ ಅಲಂಕಾರದಿಂದ ಕಣ್ಮನ ಸೆಳೆಯುತ್ತಿದ್ದವು. ಮಧ್ಯ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಟಾಕಿಗಳು, ಚಿತ್ತಾಕರ್ಷಕ ಸಿಡಿಮದ್ದುಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು.

ಬೆಂಗಳೂರು: ಹೊಸವರ್ಷ ಸ್ವಾಗತದ ಸಿದ್ಧತೆಗಾಗಿ ಬಿಬಿಎಂಪಿಯಿಂದ 25 ಲಕ್ಷ ಖರ್ಚು!

ರಾತ್ರಿಯೆಲ್ಲಾ ಪೊಲೀಸರ ಗಸ್ತು ಜೋರಾಗಿತ್ತು. ಅಲ್ಲಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ಮಾಡುತ್ತಾ, ಕಿಡಿಗೇಡಿಗಳಿಗೆ ತಿಳಿ ಹೇಳುತ್ತಾ ಸಾಗಿದರು. ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುವವರು, ಸಂಚಾರ ನಿಯಮ ಉಲ್ಲಂಘಿಸುವವರು, ತ್ರಿಬಲ್ ರೈಡಿಂಗ್ ಮಾಡುವವರಿಗೆ ಅಲ್ಲಲ್ಲಿ ದಂಡ ವಿಧಿಸುವುದು, ಎಚ್ಚರಿಕೆ ನೀಡುವುದು, ಬೇಜವಾಬ್ಧಾರಿ ವರ್ತನೆ ತೋರಿದವರಿಗೆ ಅಲ್ಲಲ್ಲಿ ಬೆತ್ತದೇಟು ಹಾಕಿದ್ದು ಸಹ ಕಂಡುಬಂದಿತು.

ಲಾಠಿ ಏಟಂತೂ ಓಟು ಹಾಕಿದಾಗ ಬೆರಳಿಗೆ ಬೀಳುವ ಶಾಹಿಗಿಂತ ಬಲವಾಗಿ ಬೇರೂರುವಂತೆ ಕೆಲವರಿಗೆ ಬೆತ್ತದ ಬಾಸುಂಡೆ ಮಾರ್ಕ್‌ ಸಹ ಬಿದ್ದಿವೆ. ಆದರೆ, ಹೊಸ ವರ್ಷಕ್ಕೆ ಪೊಲೀಸರು ಕೊಟ್ಟ ಇಂತಹ ಅಪರೂಪದ ಗಿಫ್ಟ್ ಹೇಳಿಕೊಳ್ಳುವಂತಿಲ್ಲ, ನೋವು ಸಹಿಸಿಕೊಳ್ಳೋದು ತಪ್ಪಲಿಲ್ಲ ಎಂಬಂತಹ ಸ್ಥಿತಿ ಸಹ ಕೆಲವರಿಗೆ ವರ್ಷದ ಕಡೇ ದಿನ- ಮೊದಲ ದಿನದ ನೆನಪಾಗುಳಿದಿದ್ದು ಸುಳ್ಳಲ್ಲ.

click me!