* ಬೀದರ್ ಜಿಲ್ಲೆಯ 185 ಗ್ರಾಪಂಗಳ 652 ಗ್ರಾಮಗಳ ಪೈಕಿ 507 ಗ್ರಾಮಗಳು ಕೋವಿಡ್ ಸೋಂಕಿನಿಂದ ದೂರ
* ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನಲ್ಲಿಯೂ ಹಿಡಿತದಲ್ಲಿದೆ ಸೋಂಕು
* ಗ್ರಾಮಸ್ಥರು ಆರೋಗ್ಯವಂತರಾಗಿ ಸೋಂಕಿನಿಂದ ದೂರವುಳಿಯುವಲ್ಲಿ ಯಶಸ್ವಿ
ಅಪ್ಪಾರಾವ್ ಸೌದಿ
ಬೀದರ್(ಮೇ.30): ಕೋವಿಡ್ ಸೋಂಕಿನ ವಿರುದ್ಧ ಬಹುತೇಕ ಜಯ ಸಾಧಿಸುವ ದಾರಿಯಲ್ಲಿರುವ ಬೀದರ್, ಇದೀಗ ಜಿಲ್ಲೆಯ ಗ್ರಾಮಗಳೂ ಕೊರೋನಾ ತಮ್ಮತ್ತ ಸುಳಿಯದಂತೆ ಯಶಸ್ವಿಯಾಗಿದೆ. 185 ಗ್ರಾಪಂಗಳ 652 ಗ್ರಾಮಗಳ ಪೈಕಿ 507 ಗ್ರಾಮಗಳು ಅಂದರೆ ಶೇ. 78ರಷ್ಟು ಕೋವಿಡ್ ಸೋಂಕಿನಿಂದ ದೂರವಿದ್ದು ಆರೋಗ್ಯವಂತ ಗ್ರಾಮಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.
ಮಹಾರಾಷ್ಟ್ರ ಗಡಿ ತಾಲೂಕು ಔರಾದ್, ಜಿಲ್ಲಾ ಉಸ್ತುವಾರಿ ಸಚಿವರ ತವರೂರು. ಇಲ್ಲಿ ಕೋವಿಡ್ ನಿಯಂತ್ರಣ ಅತ್ಯುತ್ತಮವಾಗಿದೆ. 21 ಗ್ರಾಪಂಗಳ 93 ಗ್ರಾಮಗಳ ಪೈಕಿ 83ರಲ್ಲಿ ಕೋವಿಡ್ ಇಲ್ಲ. ಇನ್ನುಳಿದ 8 ಗ್ರಾಪಂಗಳ 10 ಗ್ರಾಮಗಳ 14 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಕಮಲನಗರ, ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕಿನ ಗ್ರಾಪಂಗಳಲ್ಲಿ ವಲಸಿಗರ ಸಂಖ್ಯೆಯಲ್ಲಿ ಏರಿಳಿತ ಇದ್ದರೂ ಕಮಲನಗರದ 18 ಗ್ರಾಪಂಗಳ 62 ಗ್ರಾಮಗಳ ಪೈಕಿ 51ರಲ್ಲಿ ಕೋವಿಡ್ ಇಲ್ಲ. ಇನ್ನುಳಿದ 9 ಗ್ರಾಪಂಗಳ 11 ಗ್ರಾಮಗಳ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಬಸವಕಲ್ಯಾಣ ತಾಲೂಕಿನ 31 ಗ್ರಾಪಂಗಳ 22 ಗ್ರಾಪಂಗಳು ಕೋವಿಡ್ ಸೋಂಕು ತಗುಲಿಸಿಕೊಂಡಿದ್ದರು. ಇಲ್ಲಿನ ಒಟ್ಟು 114 ಗ್ರಾಮಗಳ ಪೈಕಿ 26 ಗ್ರಾಮಗಳ 45 ಜನರಿಗೆ ಮಾತ್ರ ಸೋಂಕು ತಗುಲಿದೆ. 88 ಗ್ರಾಮಗಳಲ್ಲಿ ಕೋವಿಡ್ ಇಲ್ಲ. ಹಾಗೆಯೇ ಹುಲಸೂರು ತಾಲೂಕಿನ 7 ಗ್ರಾಪಂಗಳ ಪೈಕಿ 5ರಲ್ಲಿ ಕೋವಿಡ್ ಇಲ್ಲ. 2 ಗ್ರಾಪಂಗಳ 2 ಗ್ರಾಮಗಳಲ್ಲಿ ಮಾತ್ರ ಇಬ್ಬರಿಗೆ ಸೋಂಕು ತಗುಲಿದೆ.
ಹುಮನಾಬಾದ್: ಕೊರೋನಾ ಗೆದ್ದವನನ್ನ ಬಲಿ ಪಡೆದ ಬ್ಲ್ಯಾಕ್ ಫಂಗಸ್
ಸೋಂಕು ಹಿಡಿತ:
ಭಾಲ್ಕಿ ತಾಲೂಕಿನ ಹಲವಾರು ಗ್ರಾಮಗಳು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿವೆ. ಇಲ್ಲಿನ 40 ಗ್ರಾಪಂಗಳ 21ರಲ್ಲಿ ಕೋವಿಡ್ ಹರಡಿದ್ದು ಇಲ್ಲಿನ ಒಟ್ಟು 147 ಗ್ರಾಮಗಳ ಪೈಕಿ 30ರ 44 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. 117 ಗ್ರಾಮಗಳಲ್ಲಿ ಕೋವಿಡ್ ಇಲ್ಲವಾಗಿದೆ. ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನಲ್ಲಿಯೂ ಸೋಂಕು ಹಿಡಿತದಲ್ಲಿದೆ. ಹುಮನಾಬಾದ್‌ನ 19 ಗ್ರಾಪಂಗಳ ಪೈಕಿ 12 ಗ್ರಾಪಂಗಳ 16 ಗ್ರಾಮಗಳ 28 ಜನರಿಗೆ ಸೋಂಕು ತಗುಲಿದ್ದರೆ, 40 ಗ್ರಾಮಗಳಲ್ಲಿ ಕೋವಿಡ್ ಇಲ್ಲ. ಚಿಟಗುಪ್ಪದ 14 ಗ್ರಾಪಂಗಳ ಪೈಕಿ 11ರ 14 ಗ್ರಾಮಗಳಲ್ಲಿನ 29 ಜನರಿಗೆ ಸೋಂಕು ತಗುಲಿದ್ದು 24 ಗ್ರಾಮಗಳಲ್ಲಿ ಕೋವಿಡ್ ಸುಳಿದಿಲ್ಲ.
ಜಿಲ್ಲಾ ಕೇಂದ್ರ ಬೀದರ್ ತಾಲೂಕಿನ 35 ಗ್ರಾಪಂಗಳ 26 ಗ್ರಾಪಂಗಳಲ್ಲಿ ಸೋಂಕು 36 ಗ್ರಾಮಗಳ 136 ಜನರಿಗೆ ತಗುಲಿದ್ದು 9 ಗ್ರಾಪಂಗಳ 90 ಗ್ರಾಮಗಳಲ್ಲಿ ಕೋವಿಡ್ ಬಂದಿಲ್ಲ. ಒಟ್ಟಾರೆಯಾಗಿ ಜಿಲ್ಲೆಯ 185 ಗ್ರಾಪಂಗಳ 652 ಗ್ರಾಮಗಳ ಪೈಕಿ 507 ಗ್ರಾಮಗಳು ಕೋವಿಡ್ ಮುಕ್ತವಾಗಿವೆ. 145 ಗ್ರಾಮಗಳ 244 ಜನರಿಗೆ ಸೋಂಕು ತಗುಲಿರುವ ಅಂಕಿ ಅಂಶಗಳನ್ನು ಗಮನಿಸಿದ್ದೆಯಾದಲ್ಲಿ ಗ್ರಾಮಗಳಲ್ಲಿ ಸೋಂಕು ವ್ಯಾಪಿಸಿದ್ದರೂ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ.
ಪಂಚಾಯತ್ ಆಡಳಿತ, ಅಧಿಕಾರಿಗಳ ಶ್ರಮ, ಸಂಘ ಸಂಸ್ಥೆಗಳ ಪರಿಣಾಮಕಾರಿ ಕ್ರಮಗಳಿಂದಾಗಿ ಜಿಪಂ ಹಾಗೂ ಜಿಲ್ಲಾಡಳಿತದ ಸಲಹೆಗಳಿಂದಾಗಿ ಗ್ರಾಮಸ್ಥರು ಆರೋಗ್ಯವಂತರಾಗಿ ಸೋಂಕಿನಿಂದ ದೂರವುಳಿಯುವಲ್ಲಿ ಯಶಸ್ವಿಯಾಗಿವೆ.
ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಕೋವಿಡ್ ಸೋಂಕಿನಿಂದ ದೂರವುಳಿಯುವಲ್ಲಿ ಪ್ರತಿಯೊಬ್ಬರ ಸಹಕಾರ ಅಡಗಿದೆ. ಗ್ರಾಪಂಗಳ ಟಾಸ್ಕ್ ಫೋರ್ಸ್, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಪೊಲೀಸ್, ಕಂದಾಯ, ಸಂಘ ಸಂಸ್ಥೆಗಳು, ಮಾಧ್ಯಮಗಳು ಅಲ್ಲದೆ ಗ್ರಾಮಸ್ಥರೂ ಜಾಗೃತಗೊಂಡು ಸಹಕರಿಸುತ್ತಿದ್ದಾರೆ. ಹೀಗೆಯೇ ಎಲ್ಲರ ಸಹಕಾರ ಗ್ರಾಮಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ನಿಂದ ಮುಕ್ತವಾಗಲು ಶ್ರಮಿಸಿವೆ. ಅವರಿಗೆಲ್ಲ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬೀದರ್ ಜಿಪಂ ಸಿಇಒ ಜಹೀರಾ ನಸೀಮ್ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona