ಜಡ್ಜ್‌ಗಳಿಗೆ ಕೊಲ್ಲುವುದಾಗಿ ಪತ್ರ ಬರೆದ ಅಜ್ಜ..!

By Kannadaprabha NewsFirst Published Feb 7, 2021, 9:12 AM IST
Highlights

ಜ.29ರಂದು ಪತ್ರ ಬರೆದಿದ್ದ ಬೆಂಗಳೂರಿನ ಎಸ್‌.ವಿ.ಶ್ರೀನಿವಾಸ ರಾವ್‌| ವೃದ್ಧನ ವಿರುದ್ಧ ಸ್ವಯಂ ದಾಖಲಿಸಿಕೊಂಡು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್| ನ್ಯಾಯಮೂರ್ತಿಗಳನ್ನು ಬೆದರಿಸುವುದು ಅಥವಾ ಪ್ರಚೋದಿಸುವುದಕ್ಕೆ ಅವಕಾಶ ಇಲ್ಲ| 
 

ಬೆಂಗಳೂರು(ಫೆ.07): ಕೆಲ ಭ್ರಷ್ಟ ನ್ಯಾಯಮೂರ್ತಿ ಹಾಗೂ ವಕೀಲರನ್ನು ಕೊಲ್ಲುವುದಾಗಿ ಬೆದರಿಕೆವೊಡ್ಡಿ ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ ಬರೆದ ನಗರದ ವೃದ್ಧರೊಬ್ಬರಿಗೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿದೆ.
ಈ ಕುರಿತು ಪತ್ರ ಬರೆದ ಬೆಂಗಳೂರಿನ ಜೆ.ಪಿ.ನಗರದ 72ರ ವೃದ್ಧ ಎಸ್‌.ವಿ.ಶ್ರೀನಿವಾಸ ರಾವ್‌ ವಿರುದ್ಧ ಹೈಕೋರ್ಟ್‌ ಸ್ವಯಂ ದಾಖಲಿಸಿಕೊಂಡು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಮೇಲ್ನೋಟಕ್ಕೆ ಆರೋಪಿ ಶ್ರೀನಿವಾಸ್‌ ರಾವ್‌ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಎಸಗಿರುವುದು ಸಾಬೀತಾಗಿದೆ. ಆದ್ದರಿಂದ ಆರೋಪಿ ವಿರುದ್ಧ ನ್ಯಾಯಾಂಗ ನಿಂದನಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿ, ರಾವ್‌ಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಕರ್ನಾಟಕ ಹೈಕೋರ್ಟ್‌ನ 28 ಭ್ರಷ್ಟ ನ್ಯಾಯಮೂರ್ತಿಗಳ ಪೈಕಿ ಒಬ್ಬರನ್ನು, ಸುಪ್ರೀಂಕೋರ್ಟ್‌ನ ಒಬ್ಬ ನ್ಯಾಯಮೂರ್ತಿ ಮತ್ತು ಇಬ್ಬರು ಭ್ರಷ್ಟ ವಕೀಲರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಆರೋಪಿಯು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ ಬರೆದಿದ್ದರು.

24 ಹೈಕೋರ್ಟ್‌ಗಳಲ್ಲಿ ಕೇವಲ 73 ಮಹಿಳಾ ಜಡ್ಜ್‌ಗಳು!

ಈ ನಡೆಯನ್ನು ತೀವ್ರ ಖಂಡಿಸಿರುವ ನ್ಯಾಯಪೀಠ, ಅನಗತ್ಯ ಹಾಗೂ ಆಧಾರ ರಹಿತವಾಗಿ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡುವ ಅಧಿಕಾರ ಯಾವುದೇ ವ್ಯಕ್ತಿಗೆ ಇಲ್ಲ. ನ್ಯಾಯಮೂರ್ತಿಗಳನ್ನು ಬೆದರಿಸುವುದು ಅಥವಾ ಪ್ರಚೋದಿಸುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.

ಆರೋಪಿಯ ಪತ್ರವನ್ನು ಗಮನಿಸಿದರೆ ನ್ಯಾಯಾಲಯದ ಮೇಲೆ ಅನಗತ್ಯ ಹಾಗೂ ಆಧಾರದ ರಹಿತ ಆರೋಪ ಮಾಡುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಆರೋಪಿ ಈ ಹಿಂದೆಯೋ ಇದೇ ರೀತಿಯ ಆರೋಪ ಮಾಡಿದ್ದರು. ಆಗ ಕ್ಷಮೆ ಕೋರಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಆರೋಪ ಕೈಬಿಡಲಾಗಿತ್ತು. ಅದೇ ವ್ಯಕ್ತಿ ಮತ್ತೆ ಜ.29ರಂದು ಪತ್ರ ಬರೆದಿರುವುದು ಸರಿಯಲ್ಲ ಎಂದು ಕಟುವಾಗಿ ನುಡಿದಿದೆ.
 

click me!