
ಜಮಖಂಡಿ (ಏ.20): ಜಾತ್ರೆಗೆ ಪಟ್ಟಿಕೊಟ್ಟಿಲ್ಲ ಎಂಬ ಕಾರಣಕ್ಕೆ ಗ್ರಾಮದ 7 ಕುಟುಂಬಗಳನ್ನು ಬಹಿಷ್ಕಾರ ಹಾಕಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿಯಲ್ಲಿ ಏ.5ರಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ತಹಸೀಲ್ದಾರ್ ಅನಿಲ ಬಡಿಗೇರ ಸೂಚನೆ ನೀಡಿದ್ದಾರೆ.
ಹುಣಸಿಕಟ್ಟಿ ಗ್ರಾಮದಲ್ಲಿ ಏ.2ರಂದು ಹನುಮಂತ ದೇವರ ಒಕುಳಿ ಜಾತ್ರೆ ನಡೆದಿತ್ತು. ಇದಕ್ಕೆ 7 ಕುಟುಂಬಗಳು ₹600 ಪಟ್ಟಿ ಹಣ ಕೊಟ್ಟಿರಲಿಲ್ಲ. ಹಾಗಾಗಿ ಗ್ರಾಮಸ್ಥರಿಗೆ ವಿರುದ್ಧವಾಗಿ ಈ 7 ಕುಟುಂದವರು ನಡೆದುಕೊಂಡಿದ್ದು, ಇವರ ಮನೆಯ ಯಾವುದೇ ಕಾರ್ಯಕ್ರಮಗಳಲ್ಲಿ ಯಾರು ಭಾಗವಹಿಸದಂತೆ ಏ.5ರಂದು ಊರಿನ ಹಿರಿಯರೆಲ್ಲರೂ ಸೇರಿ ಡಂಗೂರ ಸಾರಿದ್ದರು. ಈ ಬಹಿಷ್ಕಾರ ಪ್ರಶ್ನಿಸಿ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಛಗನ್ನವರ ಅವರು, ಜಮಖಂಡಿ ತಹಸೀಲ್ದಾರ, ಎಸಿ, ಡಿಸಿ ಅವರಿಗೇ ದೂರು ಅರ್ಜಿ ಸಲ್ಲಿಸಿ ಕ್ರಮಕ್ಕಾಗಿ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಹಿರಿಯರು ಹಾಗೂ 7 ಕುಟುಂಬಗಳನ್ನು ಸಂಧಾನ ಸಭೆಗೆ ಆಹ್ವಾನಿಸಿದ್ದರು. ಆದರೆ, ದೂರುದಾರರು ಸಭೆಗೆ ಬಾರದ ಕಾರಣ ಸಭೆಯನ್ನು ನಡೆಸಲಾಗಲಿಲ್ಲ.
ಯಲ್ಲಪ್ಪ ಛಗನ್ನವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ ಕುಲ್ಲೊಳ್ಳಿ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಬಟಕುರ್ಕಿ ಕುಟುಂಬದ ಸದಸ್ಯರು ಸಭೆಯಲ್ಲಿ ಭಾಗವಹಿಸಲಿಲ್ಲ. ಯಲ್ಲಪ್ಪ ಛಗನ್ನವರ ಎಂಬುವರು ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಬಹಿಷ್ಕಾರಗೊಂಡ ಕುಟುಂಬದವರು ಅಧಿಕಾರಿಗಳು ಕರೆದ ಸಭೆಯಲ್ಲಿ ಭಾಗವಹಿಸದ ಕಾರಣ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ತಿಳಿಸಲಾಗಿದೆ.
-ಅನಿಲ ಬಡಿಗೇರ, ತಹಸೀಲ್ದಾರ್, ಜಮಖಂಡಿ