* ರಾಜಧಾನಿ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಸಿದ್ಧ
* ಸಿಎಂರಿಂದ 15 ದಿನದೊಳಗೆ ಘೋಷಣೆ: ಸಚಿವ ಅಶೋಕ್
* ಶೀಘ್ರವೇ ನಗರ ಉಸ್ತುವಾರಿ ಸಚಿವರ ಘೋಷಣೆ
ಬೆಂಗಳೂರು(ಅ.01): ಬೆಂಗಳೂರಿನ(Bengaluru) ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು 15 ದಿನದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್(R Ashok) ತಿಳಿಸಿದ್ದಾರೆ.
ನಗರದಲ್ಲಿನ ರಸ್ತೆ ಗುಂಡಿ ಸಮಸ್ಯೆ ಮತ್ತು ಶಿಥಿಲಾವಸ್ಥೆ ಕಟ್ಟಡ ಕುಸಿತ ಘಟನೆ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಬಿಬಿಎಂಪಿ(BBMP) ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ವಿಶೇಷ ಪ್ಯಾಕೇಜ್‌ನಿಂದ ಬೆಂಗಳೂರು ನಗರ ಸಾಕಷ್ಟುಅಭಿವೃದ್ಧಿಯಾಗಲಿದೆ. ಸುಮಾರು ಆರು ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಬೆಂಗಳೂರು ಅಭಿವೃದ್ಧಿ ಮಾಡಲು ಸರ್ಕಾರ ಬದ್ಧವಾಗಿದೆ. ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಸಹ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೀಘ್ರ ರಸ್ತೆಗುಂಡಿಗಳಿಗೆ ಮುಕ್ತಿ:
ಇದೇ ವೇಳೆ ಮುಂದಿನ 10 ದಿನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿದ ಅವರು, ನಗರದಲ್ಲಿ ಸುಮಾರು 13,874 ಕಿ.ಮೀ.ರಸ್ತೆಗಳಿವೆ. 134 ಪ್ರಮುಖ ರಸ್ತೆ ಮತ್ತು ಒಳ ರಸ್ತೆಗಳಿದೆ. 895 ಕಿ.ಮೀ.ರಸ್ತೆ ಸುಸ್ಥಿತಿಯಲ್ಲಿದ್ದು, ಈ ಪೈಕಿ 449 ಕಿ.ಮೀ. ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಸದ್ಯ 246 ಕಿ.ಮೀ.ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಗುಂಡಿ ಮುಚ್ಚಲು ಪ್ರತಿನಿತ್ಯ ಜಲ್ಲಿ ಮಿಕ್ಸ್ ಸ್ಥಾವರದಿಂದ 16 ಲೋಡ್ ಜಲ್ಲಿ ಮಿಕ್ಸ್ ಸರಬರಾಜು ಆಗುತ್ತದೆ. ಆದರೆ, ಇತ್ತೀಚಿನ ಮಳೆಯಿಂದಾಗಿ ಜಲ್ಲಿ ಮಿಕ್ಸ್ ಸರಬರಾಜು ಆಗದೇ ಗುಂಡಿ ಮುಚ್ಚಲು ಆಗಲಿಲ್ಲ. ಆದರೆ ಈಗ ಮುಂದಿನ 10 ದಿನದಲ್ಲಿ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಅಲ್ಲದೇ, 25 ದಿನದಲ್ಲಿ ಒಳ ರಸ್ತೆಗಳನ್ನು ಸ್ಥಳೀಯ ಗುತ್ತಿಗೆದಾರರ ಮೂಲಕ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಸಲು ಸೂಚಿಸಲಾಗಿದೆ ತಿಳಿಸಿದರು.
ಬೆಂಗಳೂರಲ್ಲಿ ಶಿಥಿಲಾವಸ್ಥೆ ಕಟ್ಟಡ ತೆರವಿಗೆ ಡೆಡ್‌ಲೈನ್
ಪ್ರತಿ ವಾರ್ಡ್‌ಗೆ 20 ಲಕ್ಷ:
ಪ್ರತಿ ವಾರ್ಡ್‌ಗೆ 20 ಲಕ್ಷ ರು. ಮೀಸಲಿಡಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗಳ ರಸ್ತೆ ಕಾಮಗಾರಿಗೆ 30 ದಿನದಲ್ಲಿ ಚಾಲನೆ ನೀಡಲಾಗುವುದು. ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆಗಾಗಿ ಸರ್ಕಾರ ಒಂದು ಸಾವಿರ ಕೊಟಿ ರು. ನೀಡಿದ್ದು, ಟೆಂಡರ್ ಸಹ ನೀಡಲಾಗಿದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭಿಸಿ, ಪೂರ್ಣ ಡಾಂಬರ್ ರಸ್ತೆ ಮಾಡಲಾಗುವುದು. ಕಳಪೆ ಗುಣಮಟ್ಟಕಂಡುಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೀಘ್ರವೇ ನಗರ ಉಸ್ತುವಾರಿ ಸಚಿವರ ಘೋಷಣೆ
ಬೆಂಗಳೂರು ನಗರಕ್ಕೆ ಉಸ್ತುವಾರಿ ಸಚಿವರ ಹೆಸರನ್ನು ಮುಖ್ಯಮಂತ್ರಿಯವರು ಶೀಘ್ರವೇ ಘೋಷಣೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿನ ಸಮಸ್ಯೆಗಳಿಗೆ ಉಸ್ತುವಾರಿ ಇಲ್ಲದಿರುವುದೇ ಕಾರಣನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮಳೆ, ಕೋವಿಡ್, ನಗರೋತ್ಥಾನ ಉಸ್ತುವಾರಿ ನನಗೆ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳ ಸಭೆ ಮಾಡಲಾಗುತ್ತಿದೆ. ಶೀಘ್ರವೇ ನಗರ ಉಸ್ತುವಾರಿ ಸಚಿವರ ಹೆಸರನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದರು.