ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಲಕ್ಷ ಡೋಸ್‌ ಲಸಿಕೆ ಕೊರತೆ

By Kannadaprabha NewsFirst Published Aug 1, 2021, 1:01 PM IST
Highlights

* ಇಂದು, ನಾಳೆ ಜಿಲ್ಲೆಗೆ 49 ಸಾವಿರ ಡೋಸ್‌ ಲಸಿಕೆ ಆಗಮನ
*  ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು 7 ಸಾವಿರಕ್ಕೂ ಅಧಿಕ ಎನ್‌ಆರ್‌ಐಗಳಿಗೆ ಲಸಿಕೆ 
*  ಎಲ್ಲರಿಗೆ ಒಮ್ಮೆಗೇ ಬೇಕಾಗುವಷ್ಟು ಪ್ರಮಾಣದಲ್ಲಿ ಲಸಿಕೆ ಬಂದಿಲ್ಲ 

ಮಂಗಳೂರು(ಆ.01): ಕೊರೋನಾ ಸೋಂಕಿನಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿರುವಂತೆಯೇ ದ.ಕ.ದಲ್ಲೂ ಕೋವಿಡ್‌ ಲಸಿಕೆ ಕೊರತೆ ತಲೆದೋರಿದೆ. ಒಟ್ಟು 18 ಲಕ್ಷ ಮಂದಿ ಪೈಕಿ 12 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 6 ಲಕ್ಷ ಮಂದಿಗೆ ಲಸಿಕೆ ಬೇಕಾಗಿದೆ. ತಕ್ಷಣಕ್ಕೆ ಯಾವುದೇ ಲಸಿಕೆ ದಾಸ್ತಾನು ಇಲ್ಲ. ಆ.1ರಂದು 49 ಸಾವಿರ ಡೋಸ್‌ ಲಸಿಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಆರೋಗ್ಯ ಇಲಾಖೆಯ ನೋಡೆಲ್‌ ಅಧಿಕಾರಿಗಳು ಹೇಳುತ್ತಾರೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 18 ಲಕ್ಷ ಮಂದಿ ಪಡೆಯಬೇಕಾಗಿದೆ. ಇದರಲ್ಲಿ 12 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 6 ಲಕ್ಷ ಮಂದಿಗೆ ಲಸಿಕೆ ಬೇಕು. ದಿನಕ್ಕೆ 50 ಸಾವಿರದಂತೆ ಆದರೂ ಎರಡು ದಿನಕ್ಕೆ ಒಂದು ಲಕ್ಷ ಡೋಸ್‌ ಲಸಿಕೆ ಬೇಕು. ಎಲ್ಲರಿಗೆ ಒಮ್ಮೆಗೇ ಬೇಕಾಗುವಷ್ಟು ಪ್ರಮಾಣದಲ್ಲಿ ಲಸಿಕೆ ಬಂದಿಲ್ಲ. ಇದರಿಂದಾಗಿ ಲಸಿಕೆಗೆ ಕಾಯುವಂತಾಗಿದೆ.

18ರಿಂದ 44 ವರ್ಷ ವರೆಗಿನ 9 ಲಕ್ಷ ಮಂದಿಗೆ ಪ್ರಥಮ ಡೋಸ್‌ ಲಸಿಕೆ ನೀಡಲಾಗಿದೆ. ಎರಡನೇ ಡೋಸ್‌ 3 ಲಕ್ಷ ಮಂದಿಗೆ ಬೇಕು. ಪ್ರಸಕ್ತ 25 ಸಾವಿರ ಕೋವಿಶೀಲ್ಡ್‌ ಎರಡನೇ ಡೋಸ್‌ ಹಾಗೂ 41 ಸಾವಿರ ಫಸ್ಟ್‌ ಡೋಸ್‌ ಬೇಕಾಗಿದೆ. 12,500 ಕೋವ್ಯಾಕ್ಸಿನ್‌ ಎರಡನೇ ಡೋಸ್‌ ಬೇಕಾಗಿದ್ದು, 8 ಸಾವಿರ ಡೋಸ್‌ ಬರಲಿದೆ. ಪ್ರಥಮ ಡೋಸ್‌ ಶೇ.50ರಷ್ಟುನೀಡಿದ್ದು, ಎರಡನೇ ಡೋಸ್‌ ಶೇ.26ರಷ್ಟುನೀಡಲಾಗಿದೆ. 45ರಿಂದ 59 ಹಾಗೂ 60 ವರ್ಷ ವಯಸ್ಸಿನವರಿಗೆ ಎರಡೂ ಲಸಿಕೆ ನೀಡಿಕೆಯಲ್ಲಿ ಪರಿಪೂರ್ಣ ಸಾಧನೆ ಮಾಡಲಾಗಿದೆ. ಮನೆಯಲ್ಲಿ ಇಲ್ಲದೇ ಬೇರೆ ಸ್ಥಳದಲ್ಲಿ ಇರುವವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಂಗಳೂರು-ಕಾಸರಗೋಡು ಬಸ್ ಸಂಚಾರ ಸ್ಥಗಿತ: ದ.ಕ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ

ವಿದ್ಯಾರ್ಥಿಗಳಿಗೂ ಲಸಿಕೆ:

ಜಿಲ್ಲೆಯಲ್ಲಿ 63 ಸಾವಿರ ಲಸಿಕೆ ಪಡೆದಿದ್ದಾರೆ. ಇದರಲ್ಲಿ ಪದವಿ, ಐಟಿಐ, ನರ್ಸಿಂಗ್‌, ಮೆಡಿಕಲ್‌, ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು ಸೇರಿದ್ದಾರೆ. ಜಿಲ್ಲೆಯಿಂದ ಹೊರಗೆ ಇರುವ ವಿದ್ಯಾರ್ಥಿಗಳು ಅಲ್ಲಿನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ.

ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು 7 ಸಾವಿರಕ್ಕೂ ಅಧಿಕ ಗಳಿಗೆ ಲಸಿಕೆ ನೀಡಲಾಗಿದೆ. ಇಲ್ಲಿ ಬೇಡಿಕೆ ಬಂದ ಕೂಡಲೇ ಲಸಿಕೆ ನೀಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

‘ಆ.1ರಂದು ಜಿಲ್ಲೆಗೆ 41,200 ಡೋಸ್‌ ಕೋವಿಶೀಲ್ಡ್‌ ಹಾಗೂ ಆ.2ರಂದು 7,800 ಡೋಸ್‌ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆಯಾಗಲಿದೆ. ಸೋಮವಾರ ಮೆಗಾ ಲಸಿಕೆ ಕ್ಯಾಂಪ್‌ ನಡೆಯಲಿದೆ. ಕಳೆದ ಒಂದು ವಾರದಲ್ಲಿ ಲಸಿಕೆ ಪೂರೈಕೆಯಲ್ಲಿ ಕೊರತೆ ಬಿಟ್ಟರೆ, ಈಗ ಲಸಿಕೆ ಆಗಮಿಸುತ್ತಿದೆ. ರಾಜ್ಯಕ್ಕೆ ಹೋಲಿಸಿದರೆ, ದ.ಕ.ದಲ್ಲಿ ಲಸಿಕೆ ನೀಡಿಕೆ ಉತ್ತಮ ಸಾಧನೆಯಲ್ಲಿದೆ ಎಂದು ದ.ಕ.ಲಸಿಕಾ ನೋಡೆಲ್‌ ಅಧಿಕಾರಿ ಡಾ.ರಾಜೇಶ್‌ ತಿಳಿಸಿದ್ದಾರೆ.  
 

click me!