ಏ. 16 ರಂದು 59 ವರ್ಷದ (ಪಿ-304) ರಂಗನವಾಡಾ ಭಾಗದ ವೃದ್ಧೆಗೆ ಕೊರೋನಾ ದೃಢ| ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ (ಪಿ-166) ವೃದ್ಧೆಯ ಸಂಪರ್ಕದಿಂದ ಕೊರೋನಾ ಬಾಧಿತಳಾಗಿದ್ದ ವೃದ್ಧೆ ಗುಣಮುಖ| ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ವೃದ್ಧೆ ಮನೆಗೆ ತೆರಳಿದ ನಂತರವೂ ಕೋವಿಡ್ -19 ನಿಯಮಗಳ ರೀತಿ 14 ದಿನ ಮನೆಯಲ್ಲಿ ಪ್ರತ್ಯೇಕವಾಗಿ ಇರಲಿದ್ದಾರೆ|
ಗದಗ(ಮೇ.02): ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆಗೆ ದಾಖಲಾಗಿದ್ದ 59 ವರ್ಷದ ವೃದ್ಧೆ ಸಂಪೂರ್ಣ ಗುಣಮುಖವಾಗಿ (ಪಿ-304) ಶುಕ್ರವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾದ ಪ್ರಥಮ ವ್ಯಕ್ತಿ ಎಂದೆನಿಸಿಕೊಂಡಿದ್ದು, ಜಿಲ್ಲೆಯ ಜನತೆ ಹಾಗೂ ಚಿಕಿತ್ಸೆ ನೀಡಿದ ಜಿಲ್ಲಾ ಆಸ್ಪತ್ರೆಯ ವೈದ್ಯರು ಸೇರಿದಂತೆ ಜಿಲ್ಲಾಡಳಿತಕ್ಕೆ ಹೊಸ ಚೈತನ್ಯಕ್ಕೆ ಕಾರಣವಾಗಿದ್ದಾಳೆ. ಶುಕ್ರವಾರ ಜಿಲ್ಲಾಡಳಿತದ ಎಲ್ಲ ಹಿರಿಯ ಅಧಿಕಾರಿಗಳು ವೃದ್ಧೆ ಬರುವ ಹಾದಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಗುಣಮುಖವಾಗಿರುವ ವೃದ್ಧೆಯನ್ನು ಆ್ಯಂಬುಲೆನ್ಸ್ ಮೂಲಕ ಮನೆಗೆ ಕಳಿಸಿದರು.
2 ನೇ ಪ್ರಕರಣ:
ಬೇರೆ ಬೇರೆ ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ತೋರ್ಪಡಿಸುತ್ತಿದ್ದ ವೇಳೆಯಲ್ಲಿ ತಣ್ಣಗೆ ಇದ್ದ ಗದಗ ನಗರದಲ್ಲಿ ಏ. 6 ರಂದು ರಂಗನವಾಡಾ ಭಾಗದ ನಿವಾಸಿ 80 ವರ್ಷದ ವೃದ್ಧೆಗೆ (ಪಿ-166) ಕೊರೋನಾ ದೃಢಪಟ್ಟಿತ್ತು. ಸೋಂಕು ದೃಢ ಪಟ್ಟ2 ದಿನಗಳಲ್ಲಿ ಆ ವೃದ್ಧೆ ಸಾವನ್ನಪ್ಪಿದ್ದಳು. ಇದು ಜಿಲ್ಲಾಡಳಿತಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಸೋಂಕಿನ ಮೂಲ ಪತ್ತೆಯಾಗುವ ವೇಳೆಯಲ್ಲಿ ಏ. 16 ರಂದು ಸಾವನ್ನಪ್ಪಿದ ವೃದ್ಧೆಯ ಮನೆಯ ಪಕ್ಕದ ನಿವಾಸಿ, ಆತ್ಮೀಯ ಸಂಪರ್ಕದಲ್ಲಿದ್ದ ವೃದ್ದೆಗೆ ಸೋಂಕು ತಗಲಿರುವುದು ಖಚಿತವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ದೊಡ್ಡ ಸಂಚಲನವೇ ಉಂಟಾಗಿತ್ತು. ಇದು ಜಿಲ್ಲೆಯ 2 ನೇ ಪ್ರಕರಣವಾಗಿದ್ದು, ಈ ವೃದ್ಧೆ ಗುಣಮುಖವಾಗಿರುವುದು ರಂಗನವಾಡಾ ಭಾಗದಲ್ಲಿನ ನಿವಾಸಿಗಳಿಗೆ ಹೊಸ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ.
ಸೋಂಕಿತ ಸಂಪರ್ಕದಲ್ಲಿ 188 ವೃದ್ಧರು; ಆತಂಕದಲ್ಲಿ ಗದಗ ಮಂದಿ!
ದೂರವಾದ ಆತಂಕ
ಕೊರೋನಾದಿಂದ ನಮ್ಮ ರಾಜ್ಯದಲ್ಲಿ ಸಂಭವಿಸಿರುವ ಸಾವುಗಳಲ್ಲಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದ್ಯ ಗುಣಮುಖವಾಗಿರುವ ಮಹಿಳೆ ಕೂಡಾ 59 ವರ್ಷದಳವಾಗಿದ್ದು, ಅವರು ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಅವರ ಕುಟುಂಬಸ್ಥರು ಸೇರಿದಂತೆ ಜಿಲ್ಲೆಯ ಜನತೆಯ ಮನಸ್ಸಿನಲ್ಲಿದ್ದ ದೊಡ್ಡ ಆತಂಕ ದೂರವಾಗಿದೆ. ಆತ್ಮಸ್ಥೈರ್ಯ ಮತ್ತು ವೈದ್ಯರು ಹೇಳಿದ ಸೂಚನೆಗಳನ್ನು ಪಾಲನೆ ಮಾಡಿದಲ್ಲಿ ಈ ಸೋಂಕಿನಿಂದ ಗುಣಮುಖವಾಗಬಹುದು ಎನ್ನುವುದು ಸಾಬೀತಾಗಿದೆ.
ಜಿಲ್ಲೆಯ ಕೋವಿಡ್ -19 ಪ್ರಕರಣಕ್ಕೆ ಸಂಬಂಧಿಸಿದಂತೆ ಗುಣಮುಖರಾದ (ಪಿ- 304) 59 ವರ್ಷದ ಮಹಿಳೆಯನ್ನು ಶುಕ್ರವಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಡಾ. ಆನಂದ ಕೆ, ಎಸ್ಪಿ ಯತೀಶ ಎನ್, ಡಿಎಚ್‌ಒ ಡಾ. ಸತೀಶ ಬಸರಿಗಿಡದ, ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್. ಭೂಸರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ವೈದ್ಯ ಸಿಬ್ಬಂದಿಗಳು ಮಹಿಳೆಯನ್ನು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಜಿಲ್ಲೆಯಲ್ಲಿ ಗುಣಮುಖವಾಗಿ ಮೊದಲ ಪ್ರಕರಣ ಇದಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಟಗೇರಿಯ ರೇಷ್ಮೆ ಸೀರೆ, ಮಾಸ್ಕ್, ಸ್ಯಾನಿಟೈಸರ್, ಆಹಾರ ಸಾಮಗ್ರಿ ಸಹಿತ ದಿನನಿತ್ಯದ ಅವಶ್ಯಕ ಸಾಮಗ್ರಿಗಳನ್ನು ನೀಡಿದರು.
ಶುಕ್ರವಾರ ಆಸ್ಪತ್ರೆಯಿಂದ ಗುಣಮುಖವಾಗಿ ಬಿಡುಗಡೆಯಾಗಿರುವ ವೃದ್ಧೆ ಮನೆಗೆ ತೆರಳಿದ ನಂತರವೂ ಕೊವಿಡ್ -19 ನಿಯಮಗಳ ರೀತಿ 14 ದಿನ ಮನೆಯಲ್ಲಿ ಪ್ರತ್ಯೇಕವಾಗಿ ಇರಲಿದ್ದು ಆರೋಗ್ಯ ಇಲಾಖೆ ನಿಗಾ ವಹಿಸಲಿದೆ. ತದನಂತರದ 14 ದಿನ ಆ ಮಹಿಳೆ ತಮ್ಮ ಆರೋಗ್ಯದ ಕುರಿತು ಆರೋಗ್ಯ ಇಲಾಖೆಗೆ ವರದಿ ನೀಡಬೇಕಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಹೇಳಿದ್ದಾರೆ.