ದುಷ್ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಕಡಿಮೆಯಾಗದ ಪ್ರಕರಣಗಳು
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ(ಅ.22): ಜಿಲ್ಲೆಯಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಸಾಕಷ್ಟುಜಾಗೃತಿ ಮೂಡಿಸುತ್ತಿದ್ದರೂ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೇವಲ 6 ತಿಂಗಳಲ್ಲಿ ಜಿಲ್ಲಾದ್ಯಂತ ಒಟ್ಟು 56 ಬಾಲ್ಯ ವಿವಾಹದ ಕುರಿತು ದೂರುಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಒಟ್ಟು ಬಾಲ್ಯ ವಿವಾಹ ಕುರಿತು ದಾಖಲಾಗಿರುವ ಪ್ರಕರಣಗಳಲ್ಲಿ ಸಿಂಹಪಾಲು ಆಂಧ್ರದ ಗಡಿಯಲ್ಲಿರುವ ಅತಿ ಹಿಂದುಳಿದ ತಾಲೂಕಾದ ಬಾಗೇಪಲ್ಲಿಯಲ್ಲಿ ಒಟ್ಟು 15 ಬಾಲ್ಯ ವಿವಾಹ ಕುರಿತು ದೂರುಗಳು ದಾಖಲಾಗಿವೆ. ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಬರæೂೕಬ್ಬರಿ 14 ಹಾಗೂ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ 14 ಬಾಲ್ಯ ವಿವಾಹ ದೂರುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ದಾಖಲಾಗಿವೆ.
53 ಬಾಲ್ಯ ವಿವಾಹಕ್ಕೆ ತಡೆ:
ಸಮಾಧಾನಕರ ಸಂಗತಿಯೆಂದರೆ ಜಿಲ್ಲೆಯಲ್ಲಿ ಸ್ಪೀಕೃತವಾಗಿರುವ ಒಟ್ಟು 56 ಬಾಲ್ಯ ವಿವಾಹದ ದೂರುಗಳ ಪೈಕಿ ಸಕಾಲದಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಪರಿಣಾಮ 53 ಬಾಲ್ಯ ವಿವಾಹಗಳನ್ನು ತಡೆದಿದ್ದು, ಉಳಿದಂತೆ 3 ಬಾಲ್ಯ ವಿವಾಹಗಳು ಬಾಗೇಪಲ್ಲಿ, ಗುಡಿಬಂಡೆ ಹಾಗೂ ಗೌರಿಬಿದನೂರು ತಾಲೂಕಿನಲ್ಲಿ ನಡೆದಿವೆ. ಈ ಬಗ್ಗೆ ಬಾಲ್ಯ ವಿವಾಹ ನಡೆಯಲು ಕಾರಣರಾದವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಬಾಲ್ಯ ವಿವಾಹ ಸಂಬಂಧ ಆಗಿರುವ 56 ದೂರುಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರೇ ಆಗಿದ್ದಾರೆ.
Tumakuru : ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ
ಚಿಕ್ಕಬಳ್ಳಾಪುರ ಕಡಿಮೆ:
ಜಿಲ್ಲೆಯಲ್ಲಿ ದಾಖಲಾಗಿರುವ ಬಾಲ್ಯ ವಿವಾಹ ಕುರಿತು ದೂರುಗಳ ಅಂಕಿ, ಅಂಶಗಳನ್ನು ಗಮನಿಸಿದಾಗ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆ ದಾಖಲಾಗಿದ್ದು ಬಿಟ್ಟರೆ ಬಾಗೇಪಲ್ಲಿ, ಗೌರಿಬಿದನೂರು, ಚಿಂತಾಮಣಿ ಹಾಗು ಶಿಡ್ಲಘಟ್ಟತಾಲೂಕುಗಳಲ್ಲಿ ಬಾಲ್ಯ ವಿವಾಹ ಬಗ್ಗೆ ದಾಖಲಾಗುತ್ತಿರುವ ದೂರುಗಳ ಬಗ್ಗೆ ನಿಜಕ್ಕೂ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಬಾಲ್ಯ ವಿವಾಹಕ್ಕೆ ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿಗಳ ಕಾರಣದ ಜೊತೆಗೆ ಚಿಕ್ಕ ವಯಸ್ಸಿಗೆ ಮಕ್ಕಳು ಪ್ರೀತಿ, ಪ್ರೇಮದ ಬಲೆಯಲ್ಲಿ ಬೀಳುತ್ತಿರುವ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿಗೆ ಮದುವೆ ಮಾಡಿಸಲು ಮುಂದಾಗುತ್ತಿರುವುದು ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣವಾಗಿದೆ.
ಇದರ ಪರಿಣಾಮ ಜಿಲ್ಲೆಯಲ್ಲಿ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ. ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ತಾಲೂಕುಗಳಲ್ಲಂತೂ ಕೆಲವು ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಾರದೇ ಪೋಷಕರು ಕದ್ದು ಮುಚ್ಚಿ ಮಾಡುತ್ತಿರುವುದರ ಬಗ್ಗೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.