ಕೊರೋನಾದಿಂದ ಬಳ್ಳಾರಿ ಜಿಲ್ಲೆಯಲ್ಲಿ ಜೀವತೆತ್ತವರ ಸಂಖ್ಯೆ 558| ನಿತ್ಯ ಇಬ್ಬರಾದರೂ ಕೊರೋನಾ ಕರೆಗೆ ಸಾವಿನ ಮನೆಯತ್ತ ಹೆಜ್ಜೆ ಹಾಕುತ್ತಿರುವ ಜನರು| ಸೋಂಕಿನಿಂದ ಜೀವತೆತ್ತವರಲ್ಲಿ ಬಳ್ಳಾರಿ ನಗರ ಹಾಗೂ ಹೊಸಪೇಟೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ|
ಬಳ್ಳಾರಿ(ನ.11): ಕೊರೋನಾ ವೈರಸ್ ದಾಳಿಯಿಂದ ಜಿಲ್ಲೆಯಲ್ಲಿ ಈವರೆಗೆ ಸಾವಿನ ಕದ ತಟ್ಟಿದವರು ಎಷ್ಟು ಗೊತ್ತೆ ? ಬರೋಬ್ಬರಿ 558!
ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ವೈರಸ್ ಹಾವಳಿ ತೀವ್ರ ಇಳಿಮುಖ ಕಂಡಿದೆಯಾದರೂ ನಿತ್ಯ ಇಬ್ಬರಾದರೂ ಕೊರೋನಾ ಕರೆಗೆ ಸಾವಿನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಸೋಂಕಿನಿಂದ ಜೀವತೆತ್ತವರಲ್ಲಿ ಬಳ್ಳಾರಿ ನಗರ ಹಾಗೂ ಹೊಸಪೇಟೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ದಾಳಿ 500ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕೊರೋನಾ ಎಂದು ಆಸ್ಪತ್ರೆಗೆ ದಾಖಲಾದ ಅದೆಷ್ಟೋ ಜೀವಗಳು ಸದ್ದಿಲ್ಲದೆ ಮಸಣದ ಹಾದಿ ಹಿಡಿದಿದ್ದವು. ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ನಿರಂತರ ಶ್ರಮದ ನಡುವೆಯೂ ಜೀವ ಕಳೆದುಕೊಳ್ಳುವವರ ಪ್ರಮಾಣ ಇಳಿಮುಖವಾಗಲಿಲ್ಲ. ಕಳೆದ ಒಂದು ತಿಂಗಳಿನಿಂದ ಸಾವಿನ ಸಂಖ್ಯೆ ಇಳಿಮುಖವಾಗಿದ್ದು, ಸೋಂಕಿತರ ಪ್ರಮಾಣದಲ್ಲೂ ತೀವ್ರ ತಗ್ಗಿರುವುದು ಸಮಾಧಾನ ತಂದಿದೆ.
ನಿರಂತರ ಪರೀಕ್ಷೆ ತಂದ ಫಲ:
ಒಂದೆಡೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ ಕಂಡರೂ ಧೃತಿಗೆಡದ ಜಿಲ್ಲಾಡಳಿತ, ನಿತ್ಯ 2 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಪರೀಕ್ಷೆ ಮಾಡಿಸುವ ನಿರ್ಣಯ ಕೈಗೊಂಡಿತು. ಇದರಿಂದ ಸೋಂಕುಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುವುದರ ಜತೆಗೆ, ನಾನಾ ಕಾಯಿಲೆಯಿಂದ ಬಳಲುತ್ತಿದ್ದ ಸೋಂಕಿತರು ಸಾವಿನ ಮನೆ ಹೊಕ್ಕರು. ಏತನ್ಮಧ್ಯೆ ಜಿಲ್ಲಾಡಳಿತ ನಿತ್ಯ 2ರಿಂದ 2500 ಜನರಿಗೆ ಸೋಂಕು ಪರೀಕ್ಷಾ ಕಾರ್ಯ ಮುಂದುವರಿಸಿದರು. ಎಲ್ಲ ಇಲಾಖೆಗಳ ಸಿಬ್ಬಂದಿ ಕಡ್ಡಾಯವಾಗಿ ಸೋಂಕು ಪರೀಕ್ಷೆ ಮಾಡಿಸುವಂತೆ ಆದೇಶ ಹೊರಡಿಸಿದರು. ಇದು ಕೊರೋನಾ ನಿಯಂತ್ರಣಕ್ಕೆ ಸಹಾಯಕವಾಯಿತು.
ರಾಜ್ಯದಲ್ಲಿ 8.5 ಲಕ್ಷ ಜನಕ್ಕೆ ಕೊರೋನಾ, 8.08 ಲಕ್ಷ ಮಂದಿ ಚೇತರಿಕೆ..!
ಗುಣಮುಖರು ಹೆಚ್ಚು:
ಜಿಲ್ಲೆಯಲ್ಲಿ ನಿತ್ಯ 40ರಿಂದ 50 ಸೋಂಕಿತರು ಪತ್ತೆಯಾಗಿದ್ದು, ಕಳೆದ ಒಂದು ತಿಂಗಳಿನಿಂದ ಸೋಂಕಿತರಿಗಿಂತಲೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಮಂಗಳವಾರ ಜಿಲ್ಲೆಯಲ್ಲಿ 34 ಸೋಂಕಿತರು ಪತ್ತೆಯಾಗಿದ್ದು, 79 ಜನರು ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇನ್ನು 526 ಸಕ್ರಿಯ ಸೋಂಕಿತ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ 37,744 ಸೋಂಕಿತರ ಪೈಕಿ, 36,660 ಜನರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿದ್ದು, ನಿಜಕ್ಕೂ ಸಮಾಧಾನ ತರುವ ಸಂಗತಿಯಾಗಿದೆ. ಆದರೆ, ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್. ಜನಾರ್ದನ ತಿಳಿಸಿದ್ದಾರೆ.