400ಕ್ಕೂ ಹೆಚ್ಚು ಮನೆಗಳು ಮುಳುಗಡೆ, 6 ಗಂಜಿ ಕೇಂದ್ರ ಸ್ಥಾಪನೆ
ಭಟ್ಕಳ(ಆ.03): ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ಕಳೆದ 24 ಗಂಟೆಯಲ್ಲಿ 54.85 ಸೆಂ.ಮೀ. ಭಾರಿ ಮಳೆ ಸುರಿದಿದೆ. ಇದು ರಾಜ್ಯದಲ್ಲಿ ಈವರೆಗೆ ಸುರಿದ ಒಂದು ದಿನದ ಅತ್ಯಧಿಕ ದಾಖಲೆಯ ಮಳೆಯಾಗಿದೆ. ಸೋಮವಾರ ರಾತ್ರಿಯಿಂದೀಚೆ ಸುರಿದ ಮಳೆಗೆ ಇಲ್ಲಿ ಜನ ದಿಕ್ಕೆಟ್ಟು ಹೋಗಿದ್ದಾರೆ. 35-40 ವರ್ಷದಲ್ಲಿಯೇ ಇಂತಹ ಮಳೆ ನೋಡಿಲ್ಲ ಎನ್ನುತ್ತಿದ್ದಾರೆ ಜನರು. ಒಂದೇ ರಾತ್ರಿಯ ಮಳೆಗೆ 400ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿವೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ಉಡುಪಿಯ ಶಿರೂರಿನಲ್ಲಿ ರಾಜ್ಯದ ಒಂದು ದಿನದ ಸಾರ್ವಕಾಲಿಕ ದಾಖಲೆಯ 54.85 ಸೆಂ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಆದರೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ದಾಖಲೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದೆ.
4 ಗಂಟೆ ಹೆದ್ದಾರಿ ಬಂದ್:
ಮೂಡಭಟ್ಕಳ, ರಂಗೀಕಟ್ಟೆ, ಶಿರಾಲಿ, ಮಾವಿನಕಟ್ಟೆಗಳಲ್ಲಿ ಹೆದ್ದಾರಿಯ ಮೇಲೆ ಸುಮಾರು 4ರಿಂದ 5 ಅಡಿಗಳಷ್ಟುನೀರು ನಿಂತಿದ್ದು ವಾಹನಗಳು ಓಡಾಡುವುದಕ್ಕೇ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಹಲವೆಡೆ ಬಂದ್ ಆಗಿ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿನಿಂತಿದ್ದವು. ಹೆದ್ದಾರಿ ಸಂಪೂರ್ಣ ಹೊಳೆಯಾದ ಪರಿಣಾಮ ವಾಹನಗಳಿಗೆ ಯಾವ ಕಡೆ ಸಂಚರಿಸಬೇಕೆನ್ನುವುದೇ ಕಷ್ಟವಾಗಿತ್ತು. ತಾಲೂಕಿನ ಶಿರಾಲಿ, ಮಾವಿನಕಟ್ಟೆ, ಮುರ್ಡೇಶ್ವರ ಭಾಗದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ತೇಲಾಡುತ್ತಿದ್ದವು.
Uttara Kannada Rainfall; ಮಲಗಿದ್ದವರ ಮೇಲೆ ಮನೆ ಕುಸಿದು 4 ಮಂದಿ ದುರ್ಮರಣ
6 ಗಂಜಿ ಕೇಂದ್ರ ಸ್ಥಾಪನೆ:
ತಾಲೂಕಿನ ಬೆಳ್ನಿ, ಮಾವಿನಕುರ್ವೆ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಂದ ಪ್ರಯುಕ್ತ ಜನ ಭಯಭೀತರಾಗಿದ್ದು, ಯುವಕರ ತಂಡ ಅಪಾಯದಲ್ಲಿದ್ದವರ ರಕ್ಷಣೆಗೆ ಧಾವಿಸಿತ್ತು. ತಾಲೂಕಿನಲ್ಲಿ ಆರು ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ನೂರಾರು ಜನರು ಇಲ್ಲಿ ಆಶ್ರಯ ಪಡೆದಿದ್ದಾರೆ.
ಸಾವಿರಾರು ಕ್ವಿಂಟಲ್ ಅಕ್ಕಿ, ಭತ್ತ ಮುಳುಗಡೆ:
ಶಿರಾಲಿಯ ಸಾರದಹೊಳೆ ಕೋಟೆ ಹನುಮಂತ ದೇವಸ್ಥಾನದ ಪಕ್ಕದಲ್ಲಿಯೇ ಇದ್ದ ಎರಡು ಅಕ್ಕಿ ಮಿಲ್‌ಗಳು ಮಹಾಮಳೆಯ ನೀರಿನಿಂದಾಗಿ ಜಲಾವೃತಗೊಂಡು, ಸಾವಿರಾರು ಕ್ವಿಂಟಲ್ ಅಕ್ಕಿ, ಭತ್ತ ನೀರಿನಲ್ಲಿ ಮುಳುಗಿದೆ. ಲಕ್ಷಾಂತರ ರು. ನಷ್ಟಸಂಭವಿಸಿದೆ. ಇನ್ನು ಪಟ್ಟಣದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿರುವ ಬಟ್ಟೆ, ಕಿರಾಣಿ, ಚಪ್ಪಲಿ ಅಂಗಡಿಗಳಿಗೂ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.