ನಿಷೇಧದ ನಡುವೆಯೂ ಆಂಧ್ರದ ಗಡಿಯಲ್ಲಿ ನಡೆದ ಬಡಿದಾಟದಲ್ಲಿ 53 ಜನರ ಸ್ಥಿತಿ ಗಂಭೀರವಾಗಿದೆ.
ಬಳ್ಳಾರಿ (ಅ.28): ಆಂಧ್ರಪ್ರದೇಶ ಸರ್ಕಾರದ ನಿಷೇಧದ ನಡುವೆಯೂ ಕರ್ನೂಲ್ ಜಿಲ್ಲೆಯ ಹೊಳಲಗುಂದಿ ಮಂಡಲದ ದೇವರಗಟ್ಟು (ದೇವರಗುಡ್ಡ) ಪ್ರದೇಶದಲ್ಲಿ ವಿಜಯದಶಮಿ ದಿನವಾದ ಸೋಮವಾರ ಪ್ರತಿ ವರ್ಷದಂತೆ ಸಾಂಪ್ರದಾಯಿಕ ಬನ್ನಿ ಉತ್ಸವದ ‘ಬಡಿಗಿ ಆಟ’ ನಡೆದಿದೆ. ಈ ಆಟದಲ್ಲಿ 53ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಕರ್ನೂಲ್ ಜಿಲ್ಲೆಯ ದೇವರಗಟ್ಟು ಪ್ರದೇಶದಲ್ಲಿ ಪ್ರತಿವರ್ಷದ ವಿಜಯದಶಮಿ ದಿನದಂದು ಮಾಳ ಮಲ್ಲೇಶ್ವರಸ್ವಾಮಿ ಆರಾಧನೆ ಹಾಗೂ ಬನ್ನಿ ಮುಡಿಯುವ ಕಾರ್ಯ ನಡೆಯುತ್ತದೆ. ಇದರಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ದೇವರು (ಮಲ್ಲೇಶ್ವರಸ್ವಾಮಿ ಪಲ್ಲಕ್ಕಿ) ಬನ್ನಿ ಮುಡಿಯಲು ಆಗಮಿಸುವ ವೇಳೆ ದಾರಿಯುದ್ದಕ್ಕೂ ಬಡಿಗೆ ಬಡಿದಾಟ ನಡೆಯುತ್ತದೆ. ಇದು ಕರ್ನೂಲ್ ಜಿಲ್ಲೆಯ ನೆರಣಿಕೆ, ಎಳ್ಳಾರ್ತಿ ಹಾಗೂ ಅರಕೆರೆ ಗ್ರಾಮಸ್ಥರ ನಡುವಿನ ಹೊಡೆದಾಟ ಸಂಪ್ರದಾಯದಂತೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಮಾದಕ ವಸ್ತು ಮಾರಾಟಕ್ಕೆ ಯತ್ನ: ಫಾರಿನ್ ಪೆಡ್ಲರ್‌ಗಳು ಪೊಲೀಸರ ಬಲೆಗೆ ...
ಈ ಹೊಡೆದಾಟದಲ್ಲಿ ಪ್ರತಿವರ್ಷ ನೂರಾರು ಜನರು ಗಾಯಗೊಳ್ಳುತ್ತಾರೆ. ಸುತ್ತಮುತ್ತಲ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು, ಕರ್ನೂಲ್ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ, ಬಡಿಗೆ ಆಟವನ್ನು ವೀಕ್ಷಿಸುತ್ತಾರೆ. ಬಳ್ಳಾರಿ ತಾಲೂಕಿನಿಂದಲೂ ನೂರಾರು ಜನರು ಹಾಗೂ ಆಂಧ್ರ-ಕರ್ನಾಟಕ ಗಡಿಗ್ರಾಮಗಳ ಜನರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ದೇವರಗುಡ್ಡ ಆಂಧ್ರಪ್ರದೇಶದಲ್ಲಿದ್ದರೂ ಸಾವಿರಾರು ಸಂಖ್ಯೆಯಲ್ಲಿ ತೆಲುಗು ಜನರು ಸೇರಿದರೂ ಇಲ್ಲಿನ ಕಾರಣಿಕ ಸೇರಿದಂತೆ ಪೂಜಾ ವಿಧಿ ವಿಧಾನಗಳು ಕನ್ನಡದಲ್ಲಿಯೇ ಇರುತ್ತವೆ ಎಂಬುದು ವಿಶೇಷ.