ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ

By Kannadaprabha News  |  First Published Jul 13, 2022, 10:19 AM IST

*  ತುಂಗಭದ್ರಾ ನದಿಗೆ 34,414 ಕ್ಯುಸೆಕ್‌ ನೀರು
*  ಒಳ ಹರಿವು 80 ಸಾವಿರ ಕ್ಯುಸೆಕ್‌
*  ತುಂಗಭದ್ರಾ ಜಲಾಶಯವು ಈ ಬಾರಿ ಬೇಗನೆ ಭರ್ತಿಯಾಗುವ ನಿರೀಕ್ಷೆ 
 


ಹೊಸಪೇಟೆ(ಜು.13): ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ 20 ಗೇಟ್‌ಗಳನ್ನು ತೆರೆದು 43000 ಕ್ಯುಸೆಕ್‌ ನೀರು ಮಂಗಳವಾರ ನದಿಗೆ ಹರಿಸಲಾಗಿದೆ. ತುಂಗಭದ್ರಾ ಜಲಾಶಯದ ಒಳ ಹರಿವು 80 ಸಾವಿರ ಕ್ಯುಸೆಕ್‌ ಇರುವ ಹಿನ್ನೆಲೆಯಲ್ಲಿ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ ಐದು ಗೇಟ್‌ಗಳನ್ನು ಒಂದೂವರೆ ಅಡಿ ಎತ್ತರಿಸಿ 10,755 ಕ್ಯುಸೆಕ್‌ ನೀರು ನದಿಗೆ ಹರಿಸಲಾಯಿತು.

ಬಳಿಕ ಎರಡು ಗಂಟೆ ಹೊತ್ತಿಗೆ ಜಲಾಶಯದ ಹತ್ತು ಗೇಟ್‌ಗಳನ್ನು ಒಂದು ಅಡಿಗೆ ಎತ್ತರಿಸಿ 14,650 ಕ್ಯುಸೆಕ್‌ ನೀರು ಹರಿಬಿಡಲಾಯಿತು. ಜಲಾಶಯದ ಒಳ ಹರಿವು ಉತ್ತಮವಾಗಿದ್ದರಿಂದ ಸಂಜೆ ಐದು ಗಂಟೆ ಹೊತ್ತಿಗೆ ಜಲಾಶಯದ 10 ಗೇಟ್‌ಗಳನ್ನು ಒಂದೂವರೆ ಅಡಿಗೆ ಎತ್ತರಿಸಿ 21,610 ಕ್ಯುಸೆಕ್‌ ನೀರು ನದಿಗೆ ಹರಿಸಲಾಯಿತು. ವಿದ್ಯುತ್‌ ಉತ್ಪಾದನೆಗೂ ನೀರು ಬಿಟ್ಟಿರುವುದರಿಂದ ನದಿಗೆ ಒಟ್ಟು 23,178 ಕ್ಯುಸೆಕ್‌ ನೀರು ಹರಿಸಲಾಗಿದೆ. ಸಂಜೆಯ ಹೊತ್ತಿಗೆ 12 ಗೇಟ್‌ಗಳನ್ನು 2 ಅಡಿಗಳಷ್ಟು ಎತ್ತರಿಸಿ 34414 ಅಡಿ ನೀರನ್ನು ನದಿಗೆ ಬಿಡಲಾಯಿತು. ರಾತ್ರಿ ವೇಳೆಗೆ ಒಳಹರಿವು 90 ಸಾವಿರ ಕ್ಯುಸೆಕ್‌ಗೆ ಏರಿದ್ದರಿಂದ ಜಲಾಶಯದ 20 ಗೇಟ್‌ಗಳನ್ನು ಎತ್ತರಿಸಿ 43000 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ.

Latest Videos

undefined

ಹೊಸಪೇಟೆ: ತುಂಗಭದ್ರಾ ಡ್ಯಾಂ ಒಳ ಹರಿವಿನ ಅಬ್ಬರ, ಪ್ರವಾಹ ಭೀತಿ

ಜಲಾಶಯವು ಗುರುವಾರ ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆಯಿದ್ದು, ಅದೇ ದಿನ ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಕಳೆದ ವರ್ಷ ಜು. 25ಕ್ಕೆ ಜಲಾಶಯದ ಗೇಟುಗಳ ಮೂಲಕ ನದಿಗೆ ನೀರನ್ನು ಹರಿಸಲಾಯಿತು. ಈ ವರ್ಷ 13 ದಿನ ಮುಂಚಿತವಾಗಿ ಅಂದರೆ ಜು. 12ಕ್ಕೆ ಗೇಟುಗಳ ಮೂಲಕ ನೀರನ್ನು ಹರಿಸಲಾಗಿದೆ.

ಪೂಜೆ ಕಾರ್ಯ:

ತುಂಗಭದ್ರಾ ಜಲಾಶಯಕ್ಕೆ ನೀರು ಬಿಡುವ ಮುನ್ನ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌, ಅಧಿಕಾರಿಗಳಾದ ಶ್ರೀಕಾಂತ್‌ ರೆಡ್ಡಿ, ಹಸನ್‌ ಬಾಷಾ, ವಿಶ್ವನಾಥ, ರವಿಚಂದ್ರ ಮತ್ತಿತರರು ಪೂಜೆ ಸಲ್ಲಿಸಿ ನದಿಗೆ ನೀರು ಹರಿಸಿದರು.

ತುಂಗಭದ್ರಾ ಜಲಾಶಯದ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಸಾಗಿದ್ದು, 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 96.915 ಟಿಎಂಸಿ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಜಲಾಶಯದ ಮಟ್ಟ1633 ಅಡಿ ಇದ್ದು, ಈಗಾಗಲೇ 1630.75 ಅಡಿ ನೀರು ತಲುಪಿದೆ. ಜಲಾಶಯದಿಂದ ಆಗಸ್ಟ್‌ ತಿಂಗಳಿನಲ್ಲಿ ನದಿಗೆ ನೀರು ಹರಿಸಿರುವುದು ವಾಡಿಕೆ. ಈ ಬಾರಿ ಜಲಾಶಯ ಬೇಗನೆ ಭರ್ತಿಯಾಗಿರುವುದರಿಂದ ಜುಲೈ ಎರಡನೇ ವಾರದಲ್ಲೇ ನದಿಗೆ ನೀರು ಹರಿಸಲಾಗಿದೆ.

ಒಂದೇ ದಿನದಲ್ಲಿ ತುಂಗಭದ್ರಾ ಒಡಲಿಗೆ 6 ಟಿಎಂಸಿ ನೀರು..!

ಜಲಾಶಯದಿಂದ ನದಿಗೆ ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಬಹುದು ಎಂದು ಈಗಾಗಲೇ ತುಂಗಭದ್ರಾ ಮಂಡಳಿ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾಡಳಿತಗಳಿಗೆ ಹಾಗು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಮಾಹಿತಿ ನೀಡಿರುವುದನ್ನು ಇಲ್ಲಿಸ್ಮರಿಸಬಹುದು.

ಭಾರಿ ಪ್ರಮಾಣದ ಒಳಹರಿವು:

ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದ ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 30 ಟಿಎಂಸಿಗಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಅದರೆ ಜೂನ್‌ ತಿಂಗಳಲ್ಲಿ ಒಳಹರಿವು ತುಂಬಾ ಕಡಿಮೆ ಇತ್ತು. ಜು. 2ರಿಂದ ಜಲಾಶಯಕ್ಕೆ ನೀರಿನ ಒಳಹರಿವು ಪ್ರಾರಂಭವಾಗಿದ್ದು, ಅಂದಿನಿಂದ ಪ್ರತಿನಿತ್ಯ ಜಲಾಶಯಕ್ಕೆ ಒಳಹರಿವು ಏರುತ್ತಲೇ ಹೋಯಿತು. ಜು. 2ರಂದು ತುಂಗಭದ್ರಾ ಜಲಾಶಯದಲ್ಲಿ 45 ಟಿಎಂಸಿ ನೀರು ಇತ್ತು. ಜು. 12ಕ್ಕೆ ಜಲಾಶಯದಲ್ಲಿ 95 ಟಿಎಂಸಿ ನೀರು ಶೇಕರಣೆಯಾಗಿದೆ. ಅಂದರೆ ಕೇವಲ 11 ದಿನದಲ್ಲಿ ಜಲಾಶಯದಲ್ಲಿ 50 ಟಿಎಂಸಿಯಷ್ಟು ಅಧಿಕ ನೀರು ಶೇಖರಣೆಯಾಗಿದೆ.

ತುಂಗಭದ್ರಾ ಜಲಾಶಯವು ಈ ಬಾರಿ ಬೇಗನೆ ಭರ್ತಿಯಾಗುವ ನಿರೀಕ್ಷೆಯಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ 2 ಬೆಳೆಗೆ ನೀರು ಲಭ್ಯವಾದಂತೆ ಈ ಬಾರಿಯೂ ತಮಗೆ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ನೀರು ಲಭ್ಯವಾಗಲಿದೆ ರೈತರು ಆಶಾಭಾವ ಹೊಂದಿದ್ದಾರೆ.

click me!