ತಿರಂಗಾ: ಪಾಲಿಸ್ಟರ್‌ ಬಟ್ಟೆ ಬಳಕೆ ವಿರುದ್ಧ ಆಂದೋಲನ

*   ಪಾಲಿಸ್ಟರ್‌ ಬಟ್ಟೆ ಬಳಕೆ, ಯಂತ್ರದಿಂದಲೂ ತಯಾರಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ
*   ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆ ಅಸಮಾಧಾನ
*   ಜು. 14ರಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಲಿರುವ ಸಂಘ 
 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.13): ಸ್ವಾತಂತ್ರ್ಯಪೂರ್ವ ಕಾಲದಿಂದ ಈ ವರೆಗೆ ಬರೀ ಖಾದಿ ಹಾಗೂ ರೇಷ್ಮೆ ಬಟ್ಟೆಯಿಂದ ತಯಾರಿಸಲಾಗುತ್ತಿದ್ದ ‘ತಿರಂಗಾ’ (ರಾಷ್ಟ್ರಧ್ವಜ) ವನ್ನು ಪಾಲಿಸ್ಟರ್‌ ಬಟ್ಟೆಯಿಂದಲೂ ತಯಾರಿಸಲು ಅಸ್ತು ಎಂದಿರುವ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿ ಇಲ್ಲಿನ ‘ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ’ ಜನಾಂದೋಲನ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಜು. 14ರಂದು ಹುಬ್ಬಳ್ಳಿಯಲ್ಲಿ ಸಂಘವು ಸಭೆ ನಡೆಸಲಿದೆ. ಅಲ್ಲಿ ಹೋರಾಟದ ರೂಪರೇಷೆಗಳನ್ನು ಚರ್ಚಿಸಿ ನಿರ್ಧರಿಸಲಿದೆ.

Latest Videos

ಇಲ್ಲಿನ ಬೆಂಗೇರಿಯ ಈ ಖಾದಿ ಕೇಂದ್ರ ರಾಷ್ಟ್ರಧ್ವಜ ತಯಾರಿಸುವ ರಾಷ್ಟ್ರದ ಐಕೈಕ ಅಧಿಕೃತ ಸಂಸ್ಥೆ. ‘ಧ್ವಜಸಂಹಿತೆ’ ಅನುಸಾರವಾಗಿ ಅಗತ್ಯಕ್ಕೆ ತಕ್ಕಂತೆ ವಿವಿಧ ಅಳತೆಯ ತಿರಂಗಾ ಉತ್ಪಾದಿಸುತ್ತ ಬಂದಿದೆ. ಅದೂ ಕೈಮಗ್ಗ ನೇಯ್ಗೆಯಿಂದಲೇ ಧ್ವಜ ರೂಪಿಸುತ್ತಿದೆ. ಕೈಮಗ್ಗ, ಬಣ್ಣ ಹಾಕುವುದು, ಅಶೋಕಚಕ್ರ ಮುದ್ರಣ, ಹೊಲಿಗೆ, ಹಿಡಿಕೆ ಅಳವಡಿಕೆ ಇತ್ಯಾದಿ ಕೆಲಸಗಳನ್ನು ಅವಲಂಬಿಸಿ ನೂರಾರು ಕುಟುಂಬಗಳಿವೆ.

#IndependenceDay: ನಾವು ನಮಿಸುವ ರಾಷ್ಟ್ರಧ್ವಜದ ಜನಕನ ಬಗ್ಗೆ ನಿಮಗೆ ಗೊತ್ತೇ?

ಇದೀಗ ಕೇಂದ್ರ ಸರ್ಕಾರ ಖಾದಿ ಅಷ್ಟೇ ಅಲ್ಲ. ಪಾಲಿಸ್ಟರ್‌ ಬಟ್ಟೆಬಳಸಲು ಮತ್ತು ಕೈಮಗ್ಗದ ಜತೆ ವಿದ್ಯುತ್‌ ಮಗ್ಗದಲ್ಲೂ ನೇಯ್ಗೆ ಮಾಡಲು ಅವಕಾಶ ನೀಡಿರುವುದು ಈ ಸಂಘ ಅಸಮಾಧಾನಗೊಳ್ಳಲು ಕಾರಣವಾಗಿದೆ. ಮೇಲಾಗಿ ಈ ನಿಲುವು ಧ್ವಜ ಸಂಹಿತೆಗೆ ವಿರೋಧವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಲು ಸಜ್ಜಾಗಿದೆ.

ಇಲ್ಲಿನ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಐದಾರು ಜನರ ಬಲಿದಾನವೇ ಆಗಿಹೋಗಿದೆ. ಇಂಥ ನೆಲದಲ್ಲಿ ಈಗ ಅದೇ ರಾಷ್ಟ್ರಧ್ವಜ ಪಾವಿತ್ರ್ಯತೆ ಹಾಗೂ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಉಳಿಸಿಕೊಳ್ಳಲು ಖಾದಿ ಕಾರ್ಯಕರ್ತರು ಸುಪ್ರೀಂಕೋರ್ಟ್‌ ಮೊರೆ ಹೋಗುವಂತಾಗಿದ್ದು ನಿಜಕ್ಕೂ ವಿಷಾದದ ಸಂಗತಿ.

ಫ್ಲ್ಯಾಗ್‌ ಕೋಡ್‌ :

ಸಣ್ಣ ಹಳ್ಳಿಯಿಂದ ಹಿಡಿದು ಕಾಶ್ಮೀರವರೆಗೂ ರಾಷ್ಟ್ರಧ್ವಜ ಹಾರಾಡುತ್ತಿದೆ. ಅಷ್ಟೇ ಏಕೆ ವಿದೇಶಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲೂ ತಿರಂಗಾ ರಾರಾಜಿಸುತ್ತಿದೆ. ಆ ಎಲ್ಲ ತಿರಂಗಾಗಳು ಇದೇ ಹುಬ್ಬಳ್ಳಿ ಕೇಂದ್ರದಲ್ಲಿ ತಯಾರಾಗಿವೆ ಎನ್ನುವುದು ಹೆಮ್ಮೆಯ ವಿಷಯ.

ರಾಷ್ಟ್ರಧ್ವಜ ತಯಾರಿಕೆಗೆ ದೇಶದಲ್ಲಿ ‘ನ್ಯಾಷನಲ್‌ ಫ್ಲ್ಯಾಗ್‌ ಕೋಡ್‌ ಆಫ್‌ ಇಂಡಿಯಾ’ ಎಂಬ ನಿಯಮವಿದೆ. ಈ ನಿಯಮದಲ್ಲಿ ಇಷ್ಟುದಿನ ಬರೀ ಖಾದಿ ಹಾಗೂ ಸಿಲ್ಕ್‌ ಖಾದಿ ಬಟ್ಟೆಯಿಂದ ತಯಾರಿಸಲು ಅನುಮತಿ ಇತ್ತು. ಇದಕ್ಕೆ ತಕ್ಕಂತೆ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯೂ ಮುಂಚಿನಿಂದಲೂ ರಾಷ್ಟ್ರಧ್ವಜ ತಯಾರಿಸುತ್ತಾ ಬಂದಿದೆ. ಗರಗದಲ್ಲಿ ರಾಷ್ಟ್ರಧ್ವಜದ ಬಟ್ಟೆತಯಾರಾದರೆ, ಬಾಗಲಕೋಟೆಯಲ್ಲಿ ಬಟ್ಟೆಹಾಗೂ ನೂಲು ತಯಾರಾಗುತ್ತದೆ. ಈ ಎರಡೂ ಕಡೆಯಿಂದ ಬಟ್ಟೆಹಾಗೂ ನೂಲು ತರಿಸಿಕೊಂಡು ಬೆಂಗೇರಿಯಲ್ಲಿ ರಾಷ್ಟ್ರಧ್ವಜ ತಯಾರಿಸಲಾಗುತ್ತದೆ. ಇಲ್ಲಿಂದಲೇ ಮಾರಾಟ ಮಾಡಲಾಗುತ್ತದೆ. ಪ್ರತಿವರ್ಷ ಕನಿಷ್ಠವೆಂದರೂ 4 ಕೋಟಿಗೂ ಅಧಿಕ ವಹಿವಾಟು ಈ ಕೇಂದ್ರ ನಡೆಸುತ್ತದೆ. ಇದನ್ನೇ ನಂಬಿಕೊಂಡು 2 ಸಾವಿರಕ್ಕೂ ಅಧಿಕ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ.

ಪ್ಲಾಸ್ಟಿಕ್ಕಿಂದ ತಯಾರಿಸಿದ ರಾಷ್ಟ್ರಧ್ವಜ ಬಳಸಬೇಡಿ: ರಾಜ್ಯಗಳಿಗೆ ಸೂಚನೆ!

ಆಗಿರುವುದೇನು?:

ನ್ಯಾಷನಲ್‌ ಫ್ಲ್ಯಾಗ್‌ ಕೋಡ್‌ ಆಫ್‌ ಇಂಡಿಯಾಗೆ ಇದೀಗ ಕೇಂದ್ರ ಸರ್ಕಾರ ಡಿಸೆಂಬರ್‌ 2021ರಲ್ಲಿ ತಿದ್ದುಪಡಿ ತಂದಿದೆ. ಅದರನ್ವಯ ಖಾದಿ, ಸಿಲ್‌್ಕ ಖಾದಿ ಬಟ್ಟೆಯ ಜತೆಗೆ ಪಾಲಿಸ್ಟರ್‌ ಬಟ್ಟೆಗೂ ಅನುಮತಿ ನೀಡಲಾಗಿದೆ. ಜತೆಗೆ ಯಂತ್ರದಿಂದಲೂ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಖಾದಿ ಗ್ರಾಮೋದ್ಯೋಗಕ್ಕೆ ಕುತ್ತು ತಂದಿದೆ. ರಾಷ್ಟ್ರಧ್ವಜವನ್ನು ಪಾಲಿಸ್ಟರ್‌ ಬಟ್ಟೆಯಿಂದ ನೇಯುವುದು ಸರಿಯಲ್ಲ. ಖಾದಿ ಬಟ್ಟೆಗೆ ಅದರದೇ ಆದ ಘನತೆ ಇದೆ. ಪಾಲಿಸ್ಟರ್‌ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಕೆ ಶುರುವಾದರೆ ಖಾದಿ ಗ್ರಾಮೋದ್ಯೋಗ ಮುಚ್ಚಬೇಕಾಗುತ್ತದೆ ಎನ್ನುವ ಕಳವಳ ಇಲ್ಲಿನ ಖಾದಿ ಗ್ರಾಮೋದ್ಯೋಗ ಸಂಸ್ಥೆಯದ್ದು.

ಇಷ್ಟು ದಿನ ಬರೀ ಖಾದಿ ಹಾಗೂ ಸಿಲ್ಕ್‌ ಖಾದಿ ಬಟ್ಟೆಯಿಂದ ಮಾತ್ರ ರಾಷ್ಟ್ರ ಧ್ವಜ ತಯಾರಿಕೆಗೆ ಅನುಮತಿ ಇತ್ತು. ಇದೀಗ ಪಾಲಿಸ್ಟರ್‌ ಬಟ್ಟೆಯಿಂದ ತಯಾರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟದ ಜತೆ ಜತೆಗೆ ಜನಾಂದೋಲನ ರೂಪಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ 14ರಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಲಾಗುತ್ತಿದೆ ಅಂತ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ ತಿಳಿಸಿದ್ದಾರೆ.  
 

click me!