ಕಾಫಿನಾಡಿನಲ್ಲಿ ಆಶ್ಲೇಷ ಅಬ್ಬರಕ್ಕೆ ಭರ್ತಿಯಾದ 50 ಕೆರೆಗಳು: ಜನರಲ್ಲಿ ಸಂತಸವೂ ಸಂತಸ

By Govindaraj S  |  First Published Aug 19, 2022, 1:00 AM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅದರಲ್ಲೂ ಮುಂಗಾರು ಮಳೆ ಆರ್ಭಟಕ್ಕೆ ಕಾಫಿನಾಡಿನಲ್ಲಿ 50 ಕೆರೆಗಳು ಭರ್ತಿಯಾಗಿ ಬಾಗಿನ ಅರ್ಪಿಸಿಕೊಂಡಿದ್ದರೆ, 20 ಕೆರೆಗಳಿಗೆ ಆ ಭಾಗ್ಯ ಇನ್ನೂ ಒದಗಿ ಬಂದಿಲ್ಲ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.19): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅದರಲ್ಲೂ ಮುಂಗಾರು ಮಳೆ ಆರ್ಭಟಕ್ಕೆ ಕಾಫಿನಾಡಿನಲ್ಲಿ 50 ಕೆರೆಗಳು ಭರ್ತಿಯಾಗಿ ಬಾಗಿನ ಅರ್ಪಿಸಿಕೊಂಡಿದ್ದರೆ, 20 ಕೆರೆಗಳಿಗೆ ಆ ಭಾಗ್ಯ ಇನ್ನೂ ಒದಗಿ ಬಂದಿಲ್ಲ.

Tap to resize

Latest Videos

ಆಶ್ಲೇಷ ಅಬ್ಬರಕ್ಕೆ ಭರ್ತಿಯಾದ 50 ಕೆರೆಗಳು: ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಒಟ್ಟು70 ಕೆರೆಗಳಿವೆ .ಅದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ  27 ಕೆರೆಗಳು ತುಂಬಿ ಕೋಡಿ ಬಿದ್ದಿದ್ದರೆ, ಮೂಡಿಗೆರೆ ತಾಲೂಕಿನಲ್ಲಿ 7 ಮತ್ತು ಕಡೂರು ತಾಲೂಕಿನಲ್ಲಿ 16 ಕೆರೆಗಳು ಭರ್ತಿಯಾಗಿವೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂಗಾರು ಮಳೆ ತಡವಾಗಿ ಜಿಲ್ಲೆಯನ್ನು ಪ್ರವೇಶಿಸಿದ್ದು, ಆರಂಭದಲ್ಲಿ ಕೊಂಚ ಮಳೆ ಕಡಿಮೆಯಾದರೆ, ಬಳಿಕ ಆಶ್ಲೇಷ ಅಬ್ಬರಿಸಿದ್ದರಿಂದ ಬಹುತೇಕ ಕೆರೆಗಳು ಕೋಡಿ ಬೀಳಲು ಕಾರಣವಾಯಿತು.

Chikkamagaluru: ಕಾಫಿನಾಡಿನ ಗಿರಿ ಶ್ರೇಣಿಯಲ್ಲಿ ರಾರಾಜಿಸುತ್ತಿವೆ ಕುರಂಜಿ ಹೂ ಸೌಂದರ್ಯ

ಭರ್ತಿಯಾದ ಕೆರೆಗಳು-ಜನರಲ್ಲಿ ಹರ್ಷ: ಚಿಕ್ಕಮಗಳೂರು ತಾಲೂಕಿನ ಗುರುತ್ವಾಕರ್ಷಣೆ ಮೂಲಕ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹಿರೇಕೊಳಲೆಕೆರೆ, ಇಂದಾವರ ತಾವರೆಕೆರೆ, ಹುಲಿಗುಂದರಾಯನ ಕೆರೆ, ಮಾವಿನಹಳ್ಳಿಕಟ್ಟೆ, ಕರ್ತಿಕೆರೆ,ಹಿರೇಮಗಳೂರು ದೊಡ್ಡಕೆರೆ, ಹುಸಣವಳ್ಳಿಕೆರೆ, ಲಕ್ಷ್ಮೀಪುರಕೆರೆ, ತಾವರೆಕೆರೆ, ನಲ್ಲೂರು ಗೌರಿಕೆರೆ, ಮತ್ತಾವರಹುಣಸೆಕಟ್ಟೆ, ಮೂಕ್ತಿಹಳ್ಳಿಕೆರೆ, ಲಕ್ಕಮ್ಮನಹಳ್ಳಿ, ಕಳಸಾಪುರದ ತಿಮ್ಮಪ್ಪನಾಯಕನ ಕೆರೆ ಹಾಗೂ ಹಲವು ವರ್ಷಗಳ ಬಳಿಕ ಬೆಳವಾಡಿ ದೊಡ್ಡಕೆರೆ ತುಂಬಿ ಕೋಡಿಬಿದ್ದಿದೆ. ಈಶ್ವರಹಳ್ಳಿ ಊರ ಮುಂದಿನಕೆರೆ ಭರ್ತಿಯಾಗಿದೆ.

ಮರ್ಲೆದೊಡ್ಡಕೆರೆ, ಹರಿಹರದಹಳ್ಳಿಯಬಳಸೆಕಟ್ಟೆ ಕೆರೆ, ಆರದಹಳ್ಳಿಯ ದೊಡ್ಡಕೆರೆ, ಮಾಗಡಿದೊಡ್ಡಕೆರೆ, ಅಂಬಳೆದೊಡ್ಡಕೆರೆ, ಕೋಟೆವೂರು ನಾಗರಬಾವಿಕೆರೆ, ವಸ್ತಾರೆ ಹಿರೇಕೆರೆ, ಬಾಳೆಹಳ್ಳಿಕರಿಯಪ್ಪಗೌಡನಕೆರೆ, ಆಲ್ದೂರು ಊರ ಮುಂದಿನಕೆರೆ, ದೊಡ್ಡಮಾಗರವಳ್ಳಿ ಊರ ಮುಂದಿನಕೆರೆ,ನರಗನಹಳ್ಳಿ ರಾಮೇಶ್ವರಕೆರೆ, ಕಳಸಾಪುರ ಊರ ಮುಂದಿನಕೆರೆ, ದಾಸರಹಳ್ಳಿಕೆರೆ ಭರ್ತಿಯಾಗಿ ಗ್ರಾಮದ ಜನರಲ್ಲಿ ಹರ್ಷ ಮೂಡುವಂತೆ ಮಾಡಿವೆ. ಮೂಡಿಗೆರೆ ತಾಲೂಕಿನ ಉದುಸೆ ದೇವೀರಮ್ಮನಕೆರೆ, ಜೋಗಣ್ಣನ ದಿಣ್ಣೇಕೆರೆ, ಅಂಗಡಿ ದೊಡ್ಡಕೆರೆ, ಮಾಕೋನಹಳ್ಳಿಯ ಬೈರಮ್ಮನಕೆರೆ, ಲೋಕವಳ್ಳಿಯ ಊರಮುಂದಿನಕೆರೆ, ಉದಕಿನರಸೀಕೆರೆ, ಹೊರಟ್ಟಿ ಬೈದಲಕೆರೆ ತುಂಬಿಹೋಗಿವೆ. ಕಡೂರು ತಾಲೂಕಿನ ಗರ್ಜೆಕೆರೆ, ಕಡೂರು ದೊಡ್ಡಕೆರೆ, ದೊಡ್ಡಬುಕ್ಕಸಾಗರ, ಐತಿಹಾಸಿಕ ಸಖರಾಯಪಟ್ಟಣದ ಅಯ್ಯನಕೆರೆ, ಯಳ್ಳಂಬಳಸ ಊರಮುಂದಿನಕೆರೆ, ಬೀರೂರು ದೇವನಕೆರೆ, ಹಿರಿಯಂಗಳ ಬಾರ್ತಿನಕೆರೆ, ಎಮ್ಮೆದೊಡ್ಡಿಯ ಮದಗದಕೆರೆ, ಕುಕ್ಕಸಮುದ್ರಕೆರೆ ಕೋಡಿಬಿದ್ದಿವೆ.

ಭರ್ತಿಯಾಗದ ಕೆರೆಗಳು: ಚಿಕ್ಕಮಗಳೂರು ತಾಲೂಕಿನ ನೆಲ್ಲಿಕೆರೆ, ಕುರುವಂಗಿದೊಡ್ಡಕೆರೆ, ದಂಟರಮಕ್ಕಿಕೆರೆ, ಸಿಂದಿಗೆರೆ ಊರಮುಂದಿನಕೆರೆ ತುಂಬಿಲ್ಲ, ಕಡೂರು ತಾಲೂಕಿನ ಗರಗದಹಳ್ಳಿನಾಯಕನಕೆರೆ, ಸಿಂಗಟಗೆರೆ, ಕೆ.ಬಿದರೆ, ಯಗಟಿ, ಹಿರೇನಲ್ಲೂರು ಊರ ಮುಂದಿನಕೆರೆ, ದೇವನೂರು ದೊಡ್ಡಕೆರೆ, ಎಸ್.ಬಿದರೆ ಊರಮುಂದಿನಕೆರೆ, ಹೋರಿತಿಮ್ಮನಹಳ್ಳಿಕೆರೆ, ಬಿಳವಾಲ,ಚೌಡಲಪುರ ಊರಮುಂದಿನಕೆರೆ, ಕೆರೆಸಂತೆ ವಿಷ್ಣು ಸಮುದ್ರ ಕೆರೆ,ಅಣ್ಣಿಗೆರೆ ಊರಮುಂದಿನಕೆರೆ, ಮಚ್ಚೇರಿಕೆರೆ, ಪುರಕೋಡಿಹಳ್ಳಿ, ಕುರುಬರಹಳ್ಳಿ ಸಮೀಪದ ನಿರ್ಮಾಣವಾಗುತ್ತಿರುವ ಕೆರೆಗಳ ಬಾಗಿಲ ಅರ್ಪಿಸಿಕೊಳ್ಳುವ ಭಾಗ್ಯವನ್ನು ಕಳೆದುಕೊಂಡಿವೆ. ಮಳೆಯ ಆರ್ಭಟಕ್ಕೆ ನೂರಾರು ಮನೆಗಳು, ರಸ್ತೆ, ವಿದ್ಯುತ್ಕಂಬ, ವಿದ್ಯುತ್‌ ಲೈನ್, ಸೇತುವೆಗಳಿಗೆ ಹಾನಿಯಾಗಿ 219 ಕೋಟಿ ರೂ.ಹಾನಿಯಾಗಿದ್ದು, ಸರ್ಕಾರ ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೆಚ್ಚುವರಿಯಾಗಿ 10 ಕೋಟಿ ರೂ. ಬಿಡುಗಡೆಗೊಳಿಸಿದೆ.

ಹುಲಿ ದಾಳಿಗೆ ಹಸು ಬಲಿ: ಗಿರಿ ಪ್ರದೇಶದ ಜನರು, ಪ್ರವಾಸಿಗರಲ್ಲೂ ಹೆಚ್ಚಿದ ಆತಂಕ

ತುಂಬದ ಬಸವನಹಳ್ಳಿ-ಕೋಟೆಕೆರೆ: ಚಿಕ್ಕಮಗಳೂರು ನಗರದಲ್ಲಿರುವ ಬಸವನಹಳ್ಳಿಕೆರೆ ,ಕೋಟೆ ಕೆರೆಯನ್ನು ಮಾದರಿ ಕೆರೆನ್ನಾಗಿ ಮಾಡುವ ಉದ್ದೇಶದಿಂದ ಕೆರೆಯಲ್ಲಿ ಅಭಿವೃದ್ದಿ ಕಾಮಗಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆರೆ ಕೋಡಿಯನ್ನು ತೆಗೆದು ನೀರುಹೊರಬಿಟ್ಟಿದ್ದು, ಮಳೆಗಾಲದಲ್ಲಿ ಕೋಡಿಕಟ್ಟದ್ದರಿಂದ ನೀರು ನಿಲ್ಲದಂತಾಗಿದೆ. ಪ್ರತಿವರ್ಷ ಇದೇ ಕೆರೆಯಲ್ಲಿ ಗಣಪತಿಯನ್ನು ವಿಸರ್ಜಿಸನೆ ಮಾಡಲಾಗಿತ್ತು.ಈ ಸಲ  ಕೆರೆ ನೀರು ಸಂಪೂರ್ಣ ಬರಿದಾಗಿರುವುದರಿಂದ ಬೇರೆ ಕೆರೆಯತ್ತ ಗಣೇಶ ಮುಖ ಮಾಡಬೇಕಾಗಿದೆ.

click me!