ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ವಿರಾಜಪೇಟೆಯ ಶಾಂತಿನಗರಕ್ಕೆ ಭೇಟಿ ನೀಡಿ ಶಾಂತಿನಗರದ ಸುಮಾರು 50 ಮನೆಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಅಲ್ಲದೆ ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದ ಖಾಸಗಿ ಆಸ್ಪತ್ರೆಯನ್ನೂ ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.
ವಿರಾಜಪೇಟೆ(ಜು.04): ವಿರಾಜಪೇಟೆಗೆ ಇಂದು ಡಬಲ್ ಶಾಕ್ ಎದುರಾಗಿದ್ದು, ಶಾಂತಿನಗರದ ಇಬ್ಬರು ನಿವಾಸಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅದರಲ್ಲಿ ಓರ್ವ ವ್ಯಕ್ತಿ ಈಗಾಗಲೇ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮತ್ತೋರ್ವ 40 ವರ್ಷ ಪ್ರಾಯದ ವ್ಯಕ್ತಿ, ಹಳೆಬಟ್ಟೆವ್ಯಾಪಾರಿಯಾಗಿದ್ದು ಬೇರೆ ರಾಜ್ಯಗಳಿಂದ ತಂದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಕೊಡಗಿನ ವಿವಿಧ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು.
ಈಗ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆರಳಿದ್ದರು. ಈ ವೇಳೆ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬಾರದ ಕಾರಣ ಅವರು ಶಾಂತಿನಗರದ ನಿವಾಸದಲ್ಲಿ ನಾಲ್ಕು ದಿನಗಳಿಂದ ನೆಲೆಸಿದ್ದರು. ಈ ವೇಳೆ ಅವರು ಮಾಮೂಲಿಯಾಗಿ ಪರಿಸರದಲ್ಲಿ ಓಡಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಶುಕ್ರವಾರ ಅವರ ಗಂಟಲು ದ್ರವದ ಮಾದರಿ ಪರೀಕ್ಷಾ ವರದಿಯಲ್ಲಿ ಕೊರೋನಾ ಇರುವುದು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು
ಇದೀಗ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಶಾಂತಿನಗರಕ್ಕೆ ಭೇಟಿ ನೀಡಿ ಶಾಂತಿನಗರದ ಸುಮಾರು 50 ಮನೆಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಅಲ್ಲದೆ ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದ ಖಾಸಗಿ ಆಸ್ಪತ್ರೆಯನ್ನೂ ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.
ವೈದ್ಯರಾದ ಯತಿರಾಜ್, ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಸೋಮೇಶ್, ಆರೋಗ್ಯ ಅಧಿಕಾರಿ ಐವನ್, ವಾರ್ಡ್‌ನ ಸದಸ್ಯರಾದ ರಜನಿಕಾಂತ್, ಜಲೀಲ್ ಅವರು ಸ್ಥಳದಲ್ಲಿ ಹಾಜರಿದ್ದರು. ವಿರಾಜಪೇಟೆಯಲ್ಲಿ ಮೀನು ಪೇಟೆಯ ಬಳಿಕ ಸೀಲ್‌ಡೌನ್ ಆದ ಎರಡನೇ ಪ್ರದೇಶ ಶಾಂತಿನಗರವಾಗಿದೆ.