ಬೆಂಗ್ಳೂರಲ್ಲಿ 2ನೇ ಗರಿಷ್ಠ ಕೊರೋನಾ ಕೇಸ್‌ ದಾಖಲು!

By Kannadaprabha NewsFirst Published Apr 7, 2021, 7:11 AM IST
Highlights

ಮಂಗಳವಾರ 4266 ಸೋಂಕಿತರು ಪತ್ತೆ, 26 ಮಂದಿ ಸೋಂಕಿಗೆ ಬಲಿ| ಕಳೆದ ಅಕ್ಟೋಬರ್‌ನಲ್ಲಿ 4623 ಕೇಸ್‌ ಈವರೆಗಿನ ಗರಿಷ್ಠ| 20ರಿಂದ 40 ವರ್ಷದವರಲ್ಲಿ ಸೋಂಕು ಹೆಚ್ಚು ಪತ್ತೆ| ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,55,025ಕ್ಕೆ ಏರಿಕೆ| 
 

ಬೆಂಗಳೂರು(ಏ.07): ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 4 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು 26 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

2020 ಅಕ್ಟೋಬರ್‌ 10ರಂದು 4623 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಈವರೆಗೂ ನಗರದಲ್ಲಿ ನಾಲ್ಕು ಸಾವಿರಕ್ಕೂ ಕಡಿಮೆ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಮಂಗಳವಾರ 4266 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,55,025ಕ್ಕೆ ಏರಿಕೆಯಾಗಿದೆ.

ಅದೇ ಮಾದರಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯು ಕೂಡ ಮಂಗಳವಾರ ಹೆಚ್ಚಾಗಿದ್ದು, 26 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ನಗರದಲ್ಲಿ ಇಲ್ಲಿಯವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4693ಕ್ಕೆ ಏರಿಕೆಯಾಗಿದೆ. ಮಂಗಳವಾರ ಸೋಂಕಿನಿಂದ ಗುಣಮುಖರಾಗಿ 2417 ಮಂದಿ ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 4,17,726ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 32,605ಕ್ಕೆ ಹೆಚ್ಚಳವಾಗಿದೆ.

ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ ಏ.6ರಂದು ಹೊಸ ದಾಖಲೆ ಬರೆದ ಕೊರೋನಾ 2ನೇ ಅಲೆ!

20ರಿಂದ 40 ವರ್ಷದವರಲ್ಲಿ ಸೋಂಕು ಹೆಚ್ಚು ಪತ್ತೆ

ನಗರದಲ್ಲಿ ದೃಢಪಟ್ಟಿರುವ ಸೋಂಕಿತರಲ್ಲಿ 20ರಿಂದ 40 ವರ್ಷದೊಳಗಿನವರೇ ಹೆಚ್ಚು. ಮಂಗಳವಾರ ಒಂದೇ ದಿನ 1918 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನುಳಿದಂತೆ 9 ವರ್ಷದೊಳಗಿನ 136 ಮಕ್ಕಳಿಗೆ ಸೋಂಕು ತಗುಲಿದೆ. 10ರಿಂದ 19 ವರ್ಷದೊಳಗಿನ 360, 20ರಿಂದ 29 ವರ್ಷದೊಳಗಿನ 927 ಮತ್ತು 30ರಿಂದ 39 ವಯಸ್ಸಿನೊಳಗಿನ 991 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.

40ರಿಂದ 49 ವರ್ಷದೊಳಗಿನ 722 ಮಂದಿ, 50ರಿಂದ 59 ವಯಸ್ಸಿನೊಳಗಿನ 542, 60ರಿಂದ 69 ವರ್ಷದೊಳಗಿನ 358 ಜನರಲ್ಲಿ ಸೋಂಕು ಪತ್ತೆಯಾಗಿದೆ. 70 ವರ್ಷ ವಯೋಮಿತಿಯ ನಂತರದ 230 ಜನರಲ್ಲಿ ಹೊಸದಾಗಿ ಸೋಂಕು ದೃಡಪಟ್ಟಿದೆ. ಹೀಗೆ ಒಟ್ಟು 4266 ಜನರಲ್ಲಿ ಒಂದೇ ದಿನ ಸೋಂಕು ಪತ್ತೆಯಾಗಿದೆ.
 

click me!