ರಾಜ್ಯ ಸರ್ಕಾರ ಮುಂದಿನ ಡಿಸೆಂಬರ್ ಒಳಗೆ ನೂತನವಾಗಿ ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಸಿದ್ಧತೆ ನಡೆಸಿದೆಯೆಂದು ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ (ನ.24): ರಾಜ್ಯ ಸರ್ಕಾರ ಮುಂದಿನ ಡಿಸೆಂಬರ್ ಒಳಗೆ ನೂತನವಾಗಿ ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಸಿದ್ಧತೆ ನಡೆಸಿದೆಯೆಂದು ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ 1080 ಜನೌಷಧಿ ಕೇಂದ್ರಗಳನ್ನು ತೆರೆಯುವ ಮೂಲಕ ಅತೀ ಹೆಚ್ಚು ಕೇಂದ್ರಗಳನ್ನು ತೆರೆದು ದೇಶದಲ್ಲಿಯೇ ಎರಡನೇ ಸ್ಥಾನಗಳಿಸಿದೆ ಎಂದರು.
ನಾಲ್ಕು ಸಾವಿರ ವೈದ್ಯರ ನೇಮಕ: ಶೇ. 80ರಷ್ಟು ರಿಯಾಯ್ತಿಯಲ್ಲಿ ಜನರಿಗೆ ಅಗತ್ಯ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುತ್ತದೆ. ಕೇವಲ 6 ತಿಂಗಳ ಅಂತರದಲ್ಲಿ 1500 ವೈದ್ಯರನ್ನು ನೇಮಕ ಮಾಡಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ 2,800 ವೈದ್ಯರು, 1,200 ತಜ್ಞ ವೈದ್ಯರು ಸೇರಿದಂತೆ ಒಟ್ಟು 4 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ. ಸರ್ಕಾರದ ಪ್ರತಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟುಹಾಸಿಗೆಗಳನ್ನು ಆಮ್ಲ ಜನಕ ಸಹಿತ ಹಾಸಿಗೆಗಳನ್ನಾಗಿಸಿ ಅರೋಗ್ಯ ಸೇವೆ ನೀಡಲಾಗುತ್ತಿದೆ ಎಂದರು. ಸುಸಜ್ಜಿತ ಉನ್ನತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ ಮೊತ್ತದ ಉಚಿತ ಅರೋಗ್ಯ ಸೇವಾ ಸೌಲಭ್ಯವನ್ನು ಒದಗಿಸುವ 1.20 ಕೋಟಿ ಕಾರ್ಡ್ ಗಳನ್ನು ವಿತರಣೆಗೆ ಸಿದ್ದಪಡಿಸಲಾಗಿದೆ, ಶೀಘ್ರದಲ್ಲೇ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉಚಿತವಾಗಿ ವಿತರಣೆ ಮಾಡುವ ಕಾರ್ಯ ಆಗಲಿದೆ ಎಂದು ತಿಳಿಸಿದರು.
8 ತಿಂಗಳು ಕೋಮಾದಲ್ಲಿದ್ದ ರೋಗಿ ಗುಣಮುಖ: ವೈದ್ಯರ ಕಾರ್ಯಕ್ಕೆ ಸುಧಾಕರ್ ಶ್ಲಾಘನೆ
ಅಮೃತ ಯೋಜನೆಗೆ 8 ಸಾವಿರ ಕೋಟಿ: ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ದಲ್ಲಿ ಅಮೃತ ಯೋಜನೆಯಡಿ 8 ಸಾವಿರ ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಪ್ರತಿ ಮನೆಗೂ ನಲ್ಲಿ ಸಂಪರ್ಕದ ಮೂಲಕ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ನೀಡಲು ಯೋಜಿಸಲಾಗಿದೆಂದರು. ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರ್ ರೆಡ್ಡಿ ಮಾತನಾಡಿ, ಗೌರಿಬಿದನೂರು ನಗರದಲ್ಲಿ ಒಂದು ರಕ್ತ ನಿಧಿ ಕೇಂದ್ರ ತೆರೆಯಲು, ನಾಮಗೊಂಡ್ಲು ಗ್ರಾಮದಲ್ಲಿ ಮಾದರಿ ಅರೋಗ್ಯ ಕೇಂದ್ರ ತೆರೆಯಲು, ಅಯುಷ್ಮಾನ್ ಯೋಜನೆಯ ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಹಾಗೂ ಗೌರಿಬಿದನೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವರುಗಳಲ್ಲಿ ಮನವಿ ಮಾಡಿದರು.
ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್‌ನ ಅಧ್ಯಕ್ಷ ಎಂ. ರವಿನಾರಾಯಣ ರೆಡ್ಡಿ, ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪ ಅನಂತರಾಜು, ಗೌರಿಬಿದನೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೇಣುಗೋಪಾಲ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಇನ್ನೂ 500 ಜನೌಷಧಿ ಮಳಿಗೆ ಸ್ಥಾಪನೆ: ಸಚಿವ ಸುಧಾಕರ್
2022-23 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 2 ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಹಂತದಲ್ಲಿರುವ ನೂತನ ಕಟ್ಟಡದಲ್ಲಿ ಮುಂದಿನ 3 ತಿಂಗಳಲ್ಲಿ ಆರಂಭವಾಗಲಿದೆ ಜೊತೆಗೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಸರಳ ಮೆಡಿಕಲ್ ಕಾಲೇಜು ಸಹ 2023 ರ ಮಾರ್ಚ್ ಅಂತ್ಯದಲ್ಲಿ ಆರಂಭವಾಗಿ ಜನರ ಸೇವೆಗೆ ಮುಕ್ತ ಆಗಲಿವೆ.
- ಡಾ.ಕೆ.ಸುಧಾಕರ್, ಆರೋಗ್ಯ ಸಚಿವ