ನಗರದಲ್ಲಿ ಎಷ್ಟಿದ್ದಾರೆ ಸೂರಿಲ್ಲದ ನಿರ್ಗತಿಕರು!

By Kannadaprabha NewsFirst Published Jan 7, 2020, 8:19 AM IST
Highlights

 ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ನಿರ್ಗತಿಕರ ಬಗ್ಗೆ ಸ್ವಯಂ ಸೇವಾ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಬಿಬಿಎಂಪಿ ಕಳೆದ ನವೆಂಬರ್‌ನಲ್ಲಿ ವಾರ್ಡ್‌ವಾರು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ಜ.07]:  ಬೆಂಗಳೂರು ನಗರದಲ್ಲಿ ಸೂರಿಲ್ಲದೆ ಸಾರ್ವಜನಿಕ ತಾಣಗಳಲ್ಲಿ ವಾಸಿಸುವ ನಿರ್ಗತಿಕರ ಸಂಖ್ಯೆ 4,246.

ಹೀಗಂತ ಬಿಬಿಎಂಪಿ ಅಧಿಕೃತವಾಗಿ ಹೇಳುತ್ತಿದೆ. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಸ್ವಯಂ ಸೇವಾ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಬಿಬಿಎಂಪಿ ಕಳೆದ ನವೆಂಬರ್‌ನಲ್ಲಿ ವಾರ್ಡ್‌ವಾರು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಈ ಪ್ರಕಾರ ನಗರದ 198 ವಾರ್ಡ್‌ಗಳಲ್ಲಿ ಒಟ್ಟು 4,246 ಮಂದಿ ನಿರ್ಗತಿಕರು ಇದ್ದಾರೆ. ಅದರಲ್ಲಿ 3,380 ಪುರಷರು, 857 ಮಹಿಳೆಯರು, 9 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಎಂದು ತಿಳಿದು ಬಂದಿದೆ.

ಈ ನಿರ್ಗತಿಕರು ಬಸ್‌, ರೈಲ್ವೆ ನಿಲ್ದಾಣ, ಫುಟ್‌ಪಾತ್‌ಗಳು ಹಾಗೂ ರಸ್ತೆ ಬದಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಮೀಕ್ಷೆ, ಸಂಗ್ರಹಿಸಿದ ಮಾಹಿತಿ:

ಕಳೆದ ನ.5ರಿಂದ 12ರವರೆಗೆ ಏಕಕಾಲಕ್ಕೆ 198 ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ನಿರ್ಗತಿಕರ ಹೆಸರು, ವಯಸ್ಸು, ಎಷ್ಟುದಿನದಿಂದ ವಾಸ?, ಇನ್ನು ಎಷ್ಟುದಿನ ಬೆಂಗಳೂರಿನಲ್ಲಿ ಇರುತ್ತೀರಾ?, ಮನೆ ಬಿಟ್ಟು ಬಂದ ಕಾರಣ?, ಸರ್ಕಾರಿ ದಾಖಲಾತಿ? ಭಾವಚಿತ್ರ, ಊಟ, ತಿಂಡಿ ಎಲ್ಲಿ ಮಾಡುತ್ತೀರಾ? ಶೌಚಾಲಯ ಬಳಕೆ ಎಲ್ಲಿ? ಕಾಯಿಲೆ ವಿವರ? ಮಾನಸಿಕ ಅಸ್ವಸ್ಥರಾ? ಸೇರಿದಂತೆ ಮೊದಲಾದ ಮಾಹಿತಿ ಸಂಗ್ರಹಿಸಲಾಗಿದೆ.

ಶಿಫಾರಸುಗಳು:

ಸಮೀಕ್ಷೆ ನಡೆಸಿರುವ ಎನ್‌ಜಿಒಗಳು ನಿರ್ಗತಿಕರನ್ನು ಗುರುತಿಸುವುದರ ಜೊತೆಗೆ ಕೆಲವು ಸಲಹೆಗಳನ್ನು ನೀಡಿವೆ. ಮಹಿಳೆಯರಿಗಾಗಿ ಪ್ರತ್ಯೇಕ 16 ಕೇಂದ್ರ ಸ್ಥಾಪಿಸುವುದು. 8 ವಲಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೊಸದಾಗಿ 77 ನಿರ್ಗತಿಕ ಕೇಂದ್ರ ಆರಂಭಿಸಬೇಕು. ನಿರ್ಗತಿಕ ಕೇಂದ್ರದಲ್ಲಿನ ಮೂಲಸೌರ್ಕಯ ಸೇರಿದಂತೆ ಅನೇಕ ಶಿಫಾರಸುಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಸುಪ್ರಿಂ ಕೋರ್ಟ್‌ನ ಆದೇಶದಂತೆ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 50 ಹಾಸಿಗೆಯ ಒಂದು ನಿರ್ಗತಿಕ ಕೇಂದ್ರ ಸ್ಥಾಪಿಸಬೇಕಿದೆ. ಆದರೆ, ಸುಮಾರು 1.30 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಕೇವಲ 9 ನಿರ್ಗತಿಕ ಕೇಂದ್ರಗಳಿದ್ದು, ಸುಮಾರು 250 ಮಂದಿ ನಿರ್ಗತಿಕರಿಗೆ ಆಶ್ರಯ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಗತಿಕ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಮತ್ತು ಹೆಚ್ಚಿನ ಸಂಖ್ಯೆಯ ನಿರ್ಗತಿಕರು ಇರುವ ಪ್ರದೇಶದಲ್ಲಿ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಬಿಬಿಎಂಪಿ ಈ ಸಮೀಕ್ಷೆ ಮಾಡಿದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಸಮೀಕ್ಷೆ

ಈ ಹಿಂದೆ 2018ರ ಡಿಸೆಂಬರ್‌ನಲ್ಲಿ ನಗರದ ಕೇಂದ್ರ ಭಾಗದ ಮೂರು ವಲಯದ ಆಯ್ದ ಪ್ರದೇಶದಲ್ಲಿ ರಾರ‍ಯಪಿಡ್‌ ಸಮೀಕ್ಷೆ ನಡೆಸಲಾಗಿತ್ತು. ಆಗ 3,991 ಮಂದಿ ನಿರ್ಗತಿಕರಿದ್ದಾರೆ. ದಕ್ಷಿಣ ವಲಯದಲ್ಲಿ 1,255, ಪೂರ್ವದಲ್ಲಿ 1,210 ಹಾಗೂ ಪಶ್ಚಿಮ ವಲಯದಲ್ಲಿ 1,526 ನಿರ್ಗತಿಕರಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗಿತ್ತು. ತದ ನಂತರ ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಸಮೀಕ್ಷೆಗೆ ಬಿಬಿಎಂಪಿ ತೀರ್ಮಾನಿಸಿತ್ತು. ಅದರಂತೆ ಇದೀಗ ಸಮೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾರ‍ಯಪಿಡ್‌ ಸಮೀಕ್ಷೆ ಆಯ್ದ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಾಗಿತ್ತು. ಇದೀಗ ವಿವರವಾದ ಸಮೀಕ್ಷೆ ನಡೆಸಲಾಗಿದೆ. ನಿರ್ಗತಿಕ ಕೇಂದ್ರ ಹೆಚ್ಚಿಸುವ ಕುರಿತು ಈಗಾಗಲೇ ಸಾಕಷ್ಟುಕ್ರಮ ಕೈಗೊಳ್ಳಲಾಗಿದೆ. ಎಂಟು ವಲಯದಲ್ಲಿ ನಿರಾಶ್ರಿತ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 17 ಸ್ಥಳ ಗುರುತಿಸಲಾಗಿದೆ. ಶೀಘ್ರದಲ್ಲಿ ಯೋಜನೆ ಸಿದ್ಧಪಡಿಸಿ ಕೌಶಲಾಭಿವೃದ್ಧಿ ಇಲಾಖೆಗೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

-ಎಸ್‌.ಜಿ. ರವೀಂದ್ರ, ಕಲ್ಯಾಣ ವಿಭಾಗ ವಿಶೇಷ ಆಯುಕ್ತ.

ವಲಯ ನಿರಾಶ್ರಿತರ ಸಂಖ್ಯೆ

ವಲಯ -  ಪುರುಷ - ಮಹಿಳೆ  - ಲೈಂಗಿಕ ಅಲ್ಪ ಸಂಖ್ಯಾತರು - ಒಟ್ಟು

ಪೂರ್ವ 774 - 418 - 0 1 - 192

ಪಶ್ಚಿಮ 1,078 - 185 -  7 - 1,250

ದಕ್ಷಿಣ 736 - 121 - 0 - 857

ಯಲಹಂಕ 146 - 57 - 1 - 204

ಬೊಮ್ಮನಹಳ್ಳಿ 194 - 32- 0 - 226

ದಾಸರಹಳ್ಳಿ 93 - 10 - 0 - 103

ಆರ್‌.ಆರ್‌.ನಗರ 109 - 22 - 0  -131

ಮಹದೇವಪುರ 249 - 33  -1  -283

ಒಟ್ಟು 3,380 - 857 - 9 - 4,246

click me!