* ಬಿಜೆಪಿ ಸರ್ಕಾರ ಕೊಡುತ್ತಿರುವ 1 ಲಕ್ಷ ರು. ಧನ ಸಹಾಯ ಕೇವಲ ಕಣ್ಣೊರೆಸುವ ತಂತ್ರ
* ಸಂಸದ ಡಾ.ಉಮೇಶ ಜಾಧವ್ ಕೋವಿಡ್ ನಿರ್ವಹಣೆಯಲ್ಲಿ ವಿಫಲ
* ಬಿಜೆಪಿ ಸರ್ಕಾರಕ್ಕೆ ಬಡವರ ಜೀವದ ಬೆಲೆ ಇಲ್ಲದಂತಾಗಿದೆ
ಚಿಂಚೋಳಿ(ಜು.14): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರ ನೈಸರ್ಗಿಕ ವಿಪತ್ತು ನಿರ್ವಹಣೆಯಲ್ಲಿ 4 ಲಕ್ಷ ರು. ಹೆಚ್ಚಿಸಬೇಕು ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಆಗ್ರಹಿಸಿದ್ದಾರೆ.
ಸೇಡಂ ವಿಧಾನಸಭಾ ಮತಕ್ಷೇತ್ರ ಸುಲೇಪೇಟ ಗ್ರಾಮದಲ್ಲಿ ಆರೋಗ್ಯ ಸಹಾಯ ಹಸ್ತ ಮತ್ತು ಕೋವಿಡ್ ಲಸಿಕೆ ಅಭಿಯಾನ ಜಾಗೃತಿ ಮನೆ ಮನೆಗೆ ಭೇಟಿ ನೀಡಿ ಜನರಿಗೆ ಕೋವಿಡ್ ಲಸಿಕೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗಹಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರ ಕೊಡುತ್ತಿರುವ 1 ಲಕ್ಷ ರು. ಧನ ಸಹಾಯ ಕೇವಲ ಕಣ್ಣೊರೆಸುವ ತಂತ್ರದಿಂದ ಕೂಡಿದೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಕೋವಿಡ್ ತಡೆಗೆಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಅನೇಕ ಜನರು ಜೀವ ಕಳೆದುಕೊಂಡಿದ್ದಾರೆ. ಆದರೆ, ಆರೋಗ್ಯ ಇಲಾಖೆ ಸರಿಯಾದ ಅಂಕಿ ಅಂಶ ಕೊಡುತ್ತಿಲ್ಲ. ಮೊದಲ ಅಲೆ ಮತ್ತು 2ನೇ ಅಲೆಯಲ್ಲಿ ಸಾಕಷ್ಟು ಜನರು ಕೊರೋನಾದಿಂದ ಸಾವುಗಳಾಗಿವೆ. ಆದ್ದರಿಂದ 3ನೇ ಅಲೆ ಪ್ರಾರಂಭವಾಗುವ ಸಾಧ್ಯತೆ ಇದ್ದರೂ ಸರ್ಕಾರ ಯಾವುದೇ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಜೀವ ಕಳೆದುಕೊಂಡ ಕುಟುಂಬಕ್ಕೆ ಸರ್ವೋಚ್ಛ ನ್ಯಾಯಾಲಯ ನೀಡಿದ ಆದೇಶಕ್ಕೆ ಹೆದರಿ ಸರ್ಕಾರ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಮತ್ತೆ ಹೆಚ್ಚುತ್ತಿರುವ ಕೊರೋನಾ: ಕಲಬುರಗಿ ಜಿಲ್ಲಾ ಗಡಿಭಾಗದಲ್ಲಿ ಹೈ ಅಲರ್ಟ್
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ನಿವಾಸ ನಿರ್ಮಿಸಿಕೊಳ್ಳಲು 24 ಸಾವಿರ ಕೋಟಿ ರು. ಹಣದ ಇದೆ. ಆದರೆ ಹಾಸಿಗೆ, ರೆಮ್‌ಡಿಸೀವರ್ ಲಸಿಕೆ ಇಲ್ಲದೇ ಸೋಂಕಿತರು ನರಕಯಾತನೆಯಿಂದ ನರಳಿ ಮೃತಪಟ್ಟಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬಡವರ ಜೀವದ ಬೆಲೆ ಇಲ್ಲದಂತಾಗಿದೆ. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಕೊಳ್ಳಬೇಕು. ನಮ್ಮ ಜೀವ ನಮ್ಮ ಕೈಯಲ್ಲಿ ನಮ್ಮ ಕುಟುಂಬದ ಸದಸ್ಯರ ಜೀವ ಉಳಿಸಿಕೊಳ್ಳಬೇಕಾಗಿದೆ. ಸುಲೇಪೇಟ ಹೋಬಳಿಯ 32 ಗ್ರಾಮಗಳಿಗೆ ಭೇಟಿ ನೀಡಿ ಕೊರೊನಾದಿಂದ ಮೃತಪಟ ಕುಟುಂಬಕ್ಕೆ 5 ಸಾವಿರ ರೂ.ಪರಹಾರ ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಲಾ2 ಸಾವಿರ ಮತ್ತು ಸಹಾಯಕಿಯರಿಗೆ ಒಂದು ಸಾವಿರ ರೂ.ವೈಯಕ್ತಿಯವಾಗಿ ಪರಿಹಾರ ನೀಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕುಪನೂರ, ಗರಗಪಳ್ಳಿ, ಜಟ್ಟೂರ ಗ್ರಾಮಗಳಲ್ಲಿ 150 ಲಕ್ಷ ರು.ಗಳಲ್ಲಿ ಗ್ರಾಪಂ ಕಚೇರಿ ನಿರ್ಮಿಸಲು ಅನುದಾನ ಮಂಜೂರು ಮಾಡಿಸಿದ್ದೇನೆ. ಆದರೆ, ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನಾನು ಕಟ್ಟಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸೇಡಂ ಕ್ಷೇತ್ರದಲ್ಲಿ ನಾನು ಸಚಿವನಾಗಿದ್ದಾಗ ಮಂಜೂರು ಆಗಿರುವ ಅಭಿವೃದಿ ಕಾಮಗಾರಿಗಳೇ ಇನ್ನು ನಡೆಯುತ್ತಿವೆ. ಬಿಜೆಪಿ ಶಾಸಕರ ಸಾಧನೆ ಶೂನ್ಯವಾಗಿದೆ ಎಂದು ಅಪಾದಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಸಂಸದ ಡಾ.ಉಮೇಶ ಜಾಧವ್ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸೇಡಂ ಶಾಸಕರು ಕೆನರಾ ಬ್ಯಾಂಕ್‌ನಲ್ಲಿ ಮಾಡಿದ ಅವ್ಯವಹಾರದ ಬಗ್ಗೆ ಇನ್ನು ಸಿಬಿಐ ಚಾಜ್‌ರ್‍ಶೀಟ ಸಲ್ಲಿಸಬೇಕಾಗಿದೆ. ಜಿಲ್ಲಾ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಮಾಡದೆ ಬರೀ ಸಾಲು ನೀಡುತ್ತ ಬ್ಯಾಂಕನ್ನು ಅಧ್ಯಕ್ಷ ತೇಲ್ಕೂರ್ ಸಂಪೂರ್ಣವಾಗಿ ಮುಳುಗಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ರುದ್ರಶೆಟ್ಟಿ ಪಡಶೆಟ್ಟಿ, ಬಸವರಾಜ ಬೀರಾದಾರ, ತಾಹೇರ ಪಟೇಲ, ಸುಭಾಶ ನಿಷ್ಟಿ, ಬಸವರಾಜ ಸಜ್ಜನಶೆಟ್ಟಿ, ಮೇಘರಾಜ, ನಾಸೀರ ಪಟೇಲ, ರಜಾಕ ಪಟೇಲ, ಅಂಬರೀಶ ಗಾಂಜೆ, ಮಹಾರುದ್ರಪ್ಪ ದೇಸಾಯಿ, ಚಾಂದಪಾಶ ಮೊಮಿನ, ಗ್ರಾಪಂ ಅಧ್ಯಕ್ಷ ಸರಸ್ವತಿ ಗಿರಿ ಇದ್ದರು.