ಮನ್ಸೂರ್‌ನಿಂದ ಕೋಟಿ ಕೋಟಿ ಪಡೆದಿದ್ದ ಅಧಿಕಾರಿ ಅರೆಸ್ಟ್

By Web DeskFirst Published Jul 2, 2019, 8:17 AM IST
Highlights

IMA ಮನ್ಸೂರ್ ಖಾನ್ ನಿಂದ ಕೋಟ್ಯಂತರ ರು. ಹಣ ಪಡೆದಿದ್ದ ಅಧಿಕಾರಿಯೋರ್ವರ ಕೈಗೆ ಇದೀಗ ಕೋಳ ತೊಡಿಸಲಾಗಿದೆ. 

ಬೆಂಗಳೂರು [ಜು.2] :  ಬ್ಯಾಂಕ್‌ನಲ್ಲಿ 600 ಕೋಟಿ  ರು. ಸಾಲ ಪಡೆಯಲು ಸರ್ಕಾರದ ಎನ್‌ಓಸಿ ಕೊಡಿಸುವುದಾಗಿ ನಂಬಿಸಿ ಐಎಂಎ ಸಂಸ್ಥೆ ಮಾಲೀಕನಿಂದ 4 ಕೋಟಿ ರು. ಹಣ ಪಡೆದ ಆರೋಪದ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯನಿರ್ವಾಹಕ ಅಭಿಯಂತರ ಕುಮಾರ್‌ ಅವರನ್ನು ಎಸ್‌ಐಟಿ ಸೋಮವಾರ ಬಂಧಿಸಿದೆ.

ಇತ್ತೀಚೆಗೆ ಐಎಂಎ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ ಬಹಿರಂಗಪಡಿಸಿದ್ದ ಆಡಿಯೋದಲ್ಲಿ ‘ನನಗೆ ಬ್ಯಾಂಕ್‌ ಸಾಲ ಪಡೆಯಲು ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಲು ಐಎಎಸ್‌ ಅಧಿಕಾರಿಯೊಬ್ಬರು 10 ಕೋಟಿ ರು. ಕೇಳಿದ್ದರು’ ಎಂದು ಆರೋಪಿಸಿದ್ದ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಐಟಿ ಅಧಿಕಾರಿಗಳು, ಮನ್ಸೂರ್‌ ಸಂಪರ್ಕದ ಕೊಂಡಿಗಳನ್ನು ಪರಿಶೀಲಿಸಿದಾಗ ಬಿಡಿಎ ಎಂಜಿನಿಯರ್‌ ಕುಮಾರ್‌ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ನಿಜಕ್ಕೂ ಕುಮಾರ್‌ ಅವರು ಐಎಎಸ್‌ ಅಧಿಕಾರಿ ಮಧ್ಯವರ್ತಿಯಾಗಿದ್ದರೆ ಅಥವಾ ಅಧಿಕಾರಿ ಹೆಸರು ಬಳಸಿಕೊಂಡು ಹಣ ಸುಲಿಗೆ ಮಾಡಿದ್ದರೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಈ ನಿಟ್ಟಿನಲ್ಲಿ ತನಿಖೆ ನಡೆದಿದ್ದು, ಆರೋಪಿಯನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಜಯನಗರದ 5ನೇ ಬ್ಲಾಕ್‌ನಲ್ಲಿರುವ ಕುಮಾರ್‌ ಮನೆ ಮೇಲೆ ದಾಳಿ ನಡೆಸಿದ ಎಸ್‌ಐಟಿ ಡಿವೈಎಸ್ಪಿ ಅಬ್ದುಲ್‌ ಖಾದರ್‌ ನೇತೃತ್ವದ ತಂಡವು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಶೋಧ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ ಕುಮಾರ್‌ ಅವರನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅವರ ಮನೆಯಲ್ಲಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಮನ್ಸೂರ್‌, ತಾನಾಗಿ ಹೋಗಿ ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್‌ ಕುಮಾರ್‌ ಅವರನ್ನು ಪರಿಚಯ ಮಾಡಿಕೊಂಡಿದ್ದ. ಈ ಭೇಟಿ ನಂತರ ಎಂಜಿನಿಯರ್‌ ಜತೆ ಆತನಿಗೆ ಆತ್ಮೀಯತೆ ಬೆಳೆಯಿತು. ಇದೇ ಸ್ನೇಹದಲ್ಲಿ ಕುಮಾರ್‌, ‘ನನಗೆ ಹಿರಿಯ ಐಎಎಸ್‌ ಅಧಿಕಾರಿಗಳೊಂದಿಗೆ ಆಪ್ತ ಸ್ನೇಹವಿದೆ. ನಿಮಗೆ ಬ್ಯಾಂಕ್‌ನಲ್ಲಿ 600 ಕೋಟಿ ರು. ಸಾಲ ಪಡೆಯಲು ಸರ್ಕಾರದ ಎನ್‌ಒಸಿ ಕೊಡಿಸುವುದಾಗಿ ಮನ್ಸೂರ್‌’ಗೆ ನಂಬಿಸಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಅಲ್ಲದೆ, ಎನ್‌ಒಸಿ ನೀಡಲು ಐಎಎಸ್‌ ಅಧಿಕಾರಿಗೆ ಹಣ ಕೊಡಬೇಕಿದೆ ಎಂದು 4 ಕೋಟಿಗೆ ಕುಮಾರ್‌ ಬೇಡಿಕೆ ಇಟ್ಟಿದ್ದರು. ಇದಕ್ಕೊಪ್ಪಿದ ಮನ್ಸೂರ್‌, ಕುಮಾರ್‌ ಅವರಿಗೆ ಹಣ ಸಂದಾಯ ಮಾಡಿದ್ದ. ಆದರೆ ಎನ್‌ಒಸಿ ನೀಡಲು ಕಂದಾಯ ಅಧಿಕಾರಿಗಳು ನಿರಾಕರಿಸಿದ್ದರು. ಅಷ್ಟರಲ್ಲಿ ಹೂಡಿಕೆದಾರರಿಗೆ ಲಾಭಾಂಶ ನೀಡದೆ ಸಂಕಷ್ಟಕ್ಕೆ ಸಿಲುಕಿದ್ದ ಮನ್ಸೂರ್‌, ದೇಶ ತೊರೆದ. ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಕುಮಾರ್‌ ಸಹ ಆತನಿಂದ ಅಂತರ ಕಾಯ್ದುಕೊಂಡಿದ್ದರು ಎಂದು ಮೂಲಗಳು ವಿವರಿಸಿವೆ.

 70 ಲಕ್ಷ ರು. ಮೌಲ್ಯದ ವಸ್ತು ಜಪ್ತಿ

ಇನ್ನೊಂದೆಡೆ ನಗರದ ಕ್ವೀನ್ಸ್‌ ರಸ್ತೆ, ವಸಂತನಗರ, ಸೆಫಿಂಗ್‌ ರಸ್ತೆಗಳಲ್ಲಿರುವ ಐಎಂಎ ಸಂಸ್ಥೆಯ ಒಡೆತನದ ಫ್ರಂಟ್‌ ಲೈನ್‌ ಫಾರ್ಮಸಿ ಮಳಿಗೆಗಳ ಮೇಲೆ ಸೋಮವಾರ ದಾಳಿ ನಡೆಸಿದ ಎಸ್‌ಐಟಿ ಅಧಿಕಾರಿಗಳು, 70 ಲಕ್ಷ ರು. ಮೌಲ್ಯದ ಔಷಧಗಳು ಮತ್ತು ವಿದ್ಯುನ್ಮಾನ ವಸ್ತುಗಳು ಹಾಗೂ 4.4 ಲಕ್ಷ ರು. ನಗದು ಜಪ್ತಿ ಮಾಡಿದ್ದಾರೆ.

click me!