ಕೋಲಾರ: ಅಂಗನವಾಡಿ ಛಾವಣಿ ಕುಸಿದು 4 ಮಕ್ಕಳಿಗೆ ಗಾಯ

By Kannadaprabha News  |  First Published Jan 5, 2025, 12:09 PM IST

ಕೇವಲ 8 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಅಂಗನವಾಡಿ ಕಟ್ಟಡದ ಛಾವಣಿ ಬಿರುಕು ಬಿಟ್ಟು ಮಳೆ ಬಂದರೆ ನೀರು ಸೋರುತ್ತಿತ್ತು. ಈ ಬಗ್ಗೆ ಹಲವು ಬಾರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.


ಬಂಗಾರಪೇಟೆ(ಜ.05): ಅಂಗನವಾಡಿ ಕಟ್ಟಡದ ಛಾವಣಿಯ ಸಿಮೆಂಟ್ ಕುಸಿದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಘಟನೆಯಲ್ಲಿ ಲಾಸ್ಯ, ಲಿಖಿತ, ಪ್ರಣಿತ ಹಾಗೂ ಚಾನ್ವಿ ಎಂಬ ಮಕ್ಕಳಿಗೆ ತಲೆ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು ೧೨ ಮಕ್ಕಳಿದ್ದು ಶನಿವಾರ ಬರೀ ನಾಲ್ಕು ಮಕ್ಕಳು ಮಾತ್ರ ಹಾಜರಿದ್ದು, ಉಳಿದವರು ಗೈರಾಗಿದ್ದರು ಎನ್ನಲಾಗಿದೆ.

Tap to resize

Latest Videos

ಸರ್ಕ್ಯುಲರ್‌ ರೈಲ್‌ಗೆ ಕನೆಕ್ಟ್‌ ಆಗಲಿದೆ ಬೆಂಗಳೂರು ಸಬರ್ಬನ್‌ ರೈಲು!

ಕಟ್ಟಡಕ್ಕೆ ಕೇವಲ 8 ವರ್ಷ

ಕೇವಲ ೮ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಅಂಗನವಾಡಿ ಕಟ್ಟಡದ ಛಾವಣಿ ಬಿರುಕು ಬಿಟ್ಟು ಮಳೆ ಬಂದರೆ ನೀರು ಸೋರುತ್ತಿತ್ತು. ಈ ಬಗ್ಗೆ ಹಲವು ಬಾರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಶನಿವಾರ ಎಂದಿನಂತೆ ಮಕ್ಕಳು ಕೇಂದ್ರದಲ್ಲಿ ಕುಳಿತಿದ್ದಾಗ ಛಾವಣಿಯ ಸಿಮೆಂಟ್ ಉದುರಿ ಮಕ್ಕಳ ತಲೆ ಮೇಲೆ ಬಿದ್ದಿದೆ. ಒಂದು ಮಗುವಿನ ಕಾಲಿನ ಮೇಲೆ ಬಿದ್ದು ಗಂಭೀರ ಗಾಯವಾಗಿದೆ. ತಕ್ಷಣವೆ ನಾಲ್ಕೂ ಮಕ್ಕಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಕರ್ತೆಗೆ ಅಮಾನತು ಶಿಕ್ಷೆ

ಸ್ಥಳಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಾಲ್ಕೂ ಮಕ್ಕಳ ಆರೋಗ್ಯದ ವೆಚ್ಚಗಳನ್ನು ನಾವು ಭರಿಸುವುದಾಗಿ ತಿಳಿಸಿದರು. ಅಂಗನವಾಡಿ ಕೇಂದ್ರದ ಛಾವಣಿ ದುಸ್ಥಿತಿಯಲ್ಲಿರುವ ಬಗ್ಗೆ ಕಾರ್ಯಕರ್ತೆ ಮೇಲಾಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯವಹಿಸಿದ್ದರಿಂದ ಇಂತಹ ಘಟನೆ ನಡೆದಿದೆ. ಕಾರ್ಯಕರ್ತೆ ಮಂಜುಳ ವಿರುದ್ದ ಸಾರ್ವಜನಿಕವಾಗಿ ಕಿಡಿಕಾರಿದ ಶಾಸಕರು, ಕಾರ್ಯಕತ್ರೆಯನ್ನು ಅಮಾನತು ಮಾಡಿ ಕ್ರಮಕೈಗೊಳ್ಳುವಂತೆ ಸಿಡಿಪಿಒ ಮುನಿರಾಜುಗೆ ಸೂಚಿಸಿದರು.

ಕಟ್ಟಡಗಳ ಸ್ಥಿತಿಗತಿ ಮಾಹಿತಿ ನೀಡಿ

ಅಲ್ಲದೆ ತಾಲೂಕಿನಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಶಾಲಾ ಕಟ್ಟಡಗಳ ಸ್ಥಿತಿ ಗತಿ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಸಿಡಿಪಿಒ ಮುನಿರಾಜು ಮತ್ತು ಬಿಇಒ ಗುರುಮೂರ್ತಿಗೆ ಸೂಚಿಸಿ ಎಲ್ಲಿ ಸ್ವಂತ ಕಟ್ಟಡವಿಲ್ಲವೊ ಮತ್ತು ಎಲ್ಲಿ ಅವ್ಯವಸ್ಥೆಯಿಂದ ಕೂಡಿದೆಯೋ ಅಂತಹ ಕೇಂದ್ರಗಳನ್ನು ತಕ್ಷಣ ಬಾಡಿಗೆ ಕಟ್ಟಡಗಳಿಗೆ ಸ್ಥಳಾಂತರಿಸಲು ಸೂಚಿಸಿದರು.

ಕೊನೆಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದ ಸರ್ಕಾರ?: ಕೋಲಾರ ಡಿಸಿ ಅಕ್ರಂ ಪಾಷಾ ವರ್ಗಾವಣೆ

ಶಿಥಿಲ ಕಟ್ಟಡಗಳ ಬಗ್ಗೆ ಮಾಹಿತಿ ಬಂದ ಬಳಿಕ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗುವೆ ಎಂದು ಭರವಸೆ ನೀಡಿದರು. ಘಟನಾ ಸ್ಥಳಕ್ಕೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ ಮತ್ತು ಉಪವಿಭಾಗಾಧಿಕಾರಿ ಮೈತ್ರಿ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮಸ್ಥರ ಆಕ್ರೋಶ

ಅಂಗನವಾಡಿ ಕೇಂದ್ರಗಳು ತಾಲೂಕಿನಲ್ಲಿ ಹಲವು ಕಡೆ ಅವ್ಯವಸ್ಥೆಯಿಂದ ಕೂಡಿದ್ದರೂ ಆ ಕಡೆ ಅಧಿಕಾರಿಗಳು ಗಮನ ನೀಡುವುದಿಲ್ಲ. ಅನಾಹುತ ನಡೆದಾಗ ಮಾತ್ರ ಮಾರುದ್ದ ಭಾಷಣ ಮಾಡುತ್ತಾರೆ. ಸಿಡಿಪಿಒ ಯಾವ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸುವುದಿಲ್ಲ. ಬರೀ ಕಚೇರಿಗೆ ಮಾತ್ರ ಸೀಮಿತರಾಗಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

click me!