ಕೊರೋನಾ ಕಾಟ: ಬೆಂಗ್ಳೂರಲ್ಲಿ ಸತತ 2ನೇ ದಿನವೂ 3000+ ಕೇಸ್‌..!

By Kannadaprabha News  |  First Published Apr 4, 2021, 7:22 AM IST

ಬೆಂಗಳೂರು ನಗರದಲ್ಲಿ ಮುಂದುವರಿದ ಕೊರೋನಾ ಸೋಂಕಿನ ಅಬ್ಬರ| ಮೂರು ದಿನಗಳಲ್ಲಿ 9 ಸಾವಿರ ಕೇಸ್‌ ದಾಖಲು| 6 ಮಂದಿ ಸೋಂಕಿಗೆ ಬಲಿ| ಸಾರ್ವಜನಿಕ ಸ್ಥಗಳಲ್ಲಿ ನಿಯಮ ಉಲ್ಲಂಘನೆ| ಜಾಗೃತಿ ಜೊತೆಗೆ ದಂಡದ ಎಚ್ಚರಿಕೆ| 


ಬೆಂಗಳೂರು(ಏ.04): ರಾಜಧಾನಿಯಲ್ಲಿ ಕೊರೋನಾ ಸೋಂಕು ಅಬ್ಬರ ಮುಂದುವರೆದಿದ್ದು, ಶನಿವಾರವೂ 3,002 ಹೊಸ ಪ್ರಕರಣ ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,544ಕ್ಕೆ ಏರಿದೆ. ಇದೇ ವೇಳೆ ಆರು ಮಂದಿ ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ 4,44,244ಕ್ಕೆ ಹಾಗೂ ಸಾವಿನ ಸಂಖ್ಯೆ 4,641ಕ್ಕೆ ಏರಿಕೆಯಾಗಿದೆ. 1,052 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 4,13,058ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,544ಕ್ಕೆ ಏರಿಕೆಯಾಗಿದೆ. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 157 ಮಂದಿಯನ್ನು ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಕೋವಿಡ್‌ ವರದಿಯಲ್ಲಿ ಮಾಹಿತಿ ನೀಡಿದೆ. ಕಳೆದ ಮೂರು ದಿನಗಳಲ್ಲೇ ನಗರದಲ್ಲಿ 9,417 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, 2,464 ಮಂದಿ ಗುಣಮುಖರಾಗಿದ್ದಾರೆ.

Latest Videos

undefined

10 ವರ್ಷದ ಒಳಗಿನ 83 ಮಕ್ಕಳಿಗೆ ಸೋಂಕು

ಶನಿವಾರ ನಗರದಲ್ಲಿ ವರದಿಯಾಗಿರುವ 3,002 ಪ್ರಕರಣಗಳ ಪೈಕಿ 10 ವರ್ಷದೊಳಗಿನ 83 ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅತಿಹೆಚ್ಚು ಎಂದರೆ, 30-39 ವರ್ಷದೊಳಗಿನ 629 ಹಾಗೂ 20-29 ವರ್ಷದೊಳಗಿನ 629 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ನಿಮ್ಮ ಜಿಲ್ಲೆಯಲ್ಲಿನ ಪಾಸಿಟಿವ್ ಕೇಸ್ ತಿಳಿದುಕೊಳ್ಳಿ

ನಗರದ ಪೊಲೀಸರಿಗೆ ಕೊರೋನಾ ಕಾಟ

ಶುಕ್ರವಾರದ ಬಸವೇಶ್ವರ ನಗರ ಪೊಲೀಸ್‌ ಠಾಣೆ ಹಾಗೂ ಸೈಬರ್‌, ಎಕಾನಾಮಿಕ್‌, ನಾರ್ಕೊಟಿಕ್‌ ಪೊಲೀಸ್‌ ಠಾಣೆಯಲ್ಲಿ ತಲಾ ಓರ್ವ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯ ಸಿಬ್ಬಂದಿ ಶನಿವಾರ ಈ ಎರಡೂ ಪೊಲೀಸ್‌ ಠಾಣೆಯ ಎಲ್ಲ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ಮಾಡಿದ್ದಾರೆ. ಸೋಂಕಿತರ ಸಂಪರ್ಕಿತರ ಪತ್ತೆಗೆ ಮುಂದಾಗಿದ್ದಾರೆ.

ಜಾಗೃತಿ ಜೊತೆಗೆ ದಂಡದ ಎಚ್ಚರಿಕೆ

ನಗರದಲ್ಲಿ ಕೊರೋನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲಿಸುವಂತೆ ನಗರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲಿಯೂ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣಗಳು, ಬಸ್‌ ನಿಲ್ದಾಣಗಳು, ಪ್ರಮುಖ ವೃತ್ತಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಸೇರಿಸುವ ಪ್ರದೇಶಗಳ ರಸ್ತೆಗಳಲ್ಲಿ ಸಂಚರಿಸಿ, ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರು ಹಾಗೂ ಅಂಗಡಿಗಳ ಮಾಲಿಕರಿಗೆ ಮನವಿ ಮಾಡಿದರು. ಮಾಸ್ಕ್‌ ಹಾಕದವರನ್ನು ಅಂಗಡಿ ಒಳಗೆ ಬಿಟ್ಟುಕೊಳ್ಳಬಾರದು. ಒಂದು ವೇಳೆ ಅಂಗಡಿ ಒಳಗೆ ಸೇರಿಸಿದರೆ ಇಬ್ಬರಿಗೂ ದಂಡ ವಿಧಿಸುವುದಾಗಿ ಎಚ್ಚರಿಸಿದರು.

ಸಾರ್ವಜನಿಕ ಸ್ಥಗಳಲ್ಲಿ ನಿಯಮ ಉಲ್ಲಂಘನೆ

ನಗರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ಸಾರ್ವಜನಿಕರು ಇದ್ಯಾವುದಕ್ಕೂ ಬಗ್ಗದೇ ನಗರದಲ್ಲಿ ಓಡಾಡುತ್ತಿದ್ದಾರೆ. ಕೆ.ಆರ್‌.ಮಾರುಕಟ್ಟೆ, ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಚಿಕ್ಕಪೇಟೆ, ಎಸ್‌.ಪಿ.ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆಯಾಗುತ್ತಿದೆ.
 

click me!